ಸ್ವಯಂ ಸಾವಿಗೆ ಶರಣಾದ ಕನ್ನಡ ಕಿರುತೆರೆ ನಟರು!
ಕನ್ನಡ ಟಿವಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಸುದ್ದಿ ಟೆಲಿವಿಶನ್ ಪ್ರಿಯರಿಗೆ ಶಾಕ್ ನೀಡಿದ್ದು, ಕಿರುತೆರೆ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ಕಿರುತೆರೆ ನಟರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇದು ಮೊದಲಲ್ಲ, ಈ ಹಿಂದೆಯೂ ಅನೇಕ, ನಟ ನಟಿಯರು ಆತ್ಮಹತ್ಯೆಗೆ ಶರಣಾಗಿದ್ದರು.
ಆತ್ಮಹತ್ಯೆ ಅನ್ನೋದು ಕೆಟ್ಟ ಪಿಡುಗು, ಆದರೆ ಇಂದಿನ ಯುವ ಜನತೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಅದರಲ್ಲೂ ಸೀರಿಯಲ್ ನಟ, ನಟಿಯರ ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚಾಗಿದೆ. ಕನ್ನಡ ಕಿರುತೆರೆಯಲ್ಲೂ ಇಲ್ಲಿವರೆಗೆ ಹಲವಾರು ನಟ, ನಟಿಯರು ಆತ್ಮಹತ್ಯೆ (Tv actors death by suicide) ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅವರ ಬಗ್ಗೆ ತಿಳಿಯೋಣ.
ಸುಶೀಲ್ ಗೌಡ (Susheel Gowda) :
ಕನ್ನಡಕಿರುತೆರೆ ನಟ ಸುಶೀಲ್ ಗೌಡ ಸಹ ತಮ್ಮ ಊರಾದ ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡು, ಕೊನೆಯುಸಿರೆಳೆದರು. ಇವರು ಅಂತಪುರ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು, ಅಲ್ಲದೇ ಸಿನಿಮಾದಲ್ಲೂ ನಟಿಸಿದ್ದರು. ದುನಿಯಾ ವಿಜಯ್ ಅವರ ಸಲಗ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ಸೌಜನ್ಯ (Soujanya)
ಕನ್ನಡ ಕಿರುತೆರೆ ನಟಿ ಸೌಜನ್ಯ ಸಹ ಸ್ವಯಂ ಸಾವು ತಂದು ಕೊಂಡವರು. ವರದಿಗಳ ಪ್ರಕಾರ, ನಟಿ ಬೆಂಗಳೂರಿನ ಕುಂಬಳಗೋಡುನಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆ ನನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದು ತಂದೆ-ತಾಯಿ ಬಳಿ ಕ್ಷಮೆ ಕೇಳಿ ಸಾವನ್ನಪ್ಪಿದ್ದರು.
ಜಯಶ್ರೀ ರಾಮಯ್ಯ (Jayashree Ramaiah)
ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ಜಯಶ್ರೀ ಅವರು ಸಹ ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ವೃದ್ಧಾಶ್ರಮವೊಂದರಲ್ಲಿ ನಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಟಿ ಹಲವು ಸಮಯದಿಂದ ಡಿಪ್ರೆಶನ್‌ನಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೇಮಶ್ರೀ (Hemashree)
ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ನಟಿ ಹೇಮಶ್ರೀ ಅವರು ಕೂಡ ನಿಗೂಢವಾಗಿ ಸಾವನ್ನಪ್ಪಿದ್ದರು. ಇದನ್ನು ಆತ್ಮಹತ್ಯೆ, ಕೊಲೆ ಎಂದೆಲ್ಲಾ ಹೇಳಲಾಗುತ್ತಿತ್ತು. ನಟಿ ತಮ್ಮ ವೈವಾಹಿಕ ಜೀವನದಿಂದ ನೊಂದಿದ್ದರು, ಜೊತೆಗೆ ಎಲೆಕ್ಷನ್ ನಲ್ಲೂ ಸೋತಿದ್ದರು, ಇದೆಲ್ಲದರಿಂದ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದರು ಎನ್ನಲಾಗಿದೆ.
ಚಂದನ (Chandana)
ಕನ್ನಡ ಸೀರಿಯಲ್ ನಟಿ ಚಂದನ ಅವರು ಸಹ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಪ್ರೀತಿಸಿದ ಹುಡುಗ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇವರು ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂಪತ್ ಜೆ ರಾಮ್ (Sampath J Ram)
ಇನ್ನು ಇತ್ತೀಚೆಗೆ ಕಿರುತೆರೆ ನಟ ಸಂಪತ್ ಜೆ ರಾಮ್ ಸಹ ಅಕಾಲಿಕ ಮರಣ ಹೊಂದಿದ್ದರು. ಆತ್ಮಹತ್ಯೆ ಎಂದು ಹೇಳುತ್ತಿದ್ದರೂ, ಹೆಂಡತಿಗೆ ಪ್ರಾಂಕ್ ಮಾಡಲು ಹೋಗಿ, ಅಸುನೀಗಿದರು ಎಂದು ಗೆಳೆಯ, ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ ಹೇಳಿದ್ದಾರೆ. ಇವರು ಅಗ್ನಿ ಸಾಕ್ಷಿ ಸೀರಿಯಲ್‌ನಲ್ಲಿ ನಟಿ ಸನ್ನಿಧಿಯ ಅಣ್ಣನಾಗಿ ನಟಿಸಿದ್ದರು. ಅಲ್ಲದೇ ಚಲಚಿತ್ರಗಳಲ್ಲೂ ಅಭಿನಯಿಸಿದ್ದರು.