- Home
- Entertainment
- TV Talk
- ಗಿಲ್ಲಿ ನಟ ರಾಜಕೀಯ ಎಂಟ್ರಿ: ವೋಟು ಕೇಳಿದ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ವಿಶ್ ಮಾಡಿದ ಕುಮಾರಸ್ವಾಮಿ!
ಗಿಲ್ಲಿ ನಟ ರಾಜಕೀಯ ಎಂಟ್ರಿ: ವೋಟು ಕೇಳಿದ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ವಿಶ್ ಮಾಡಿದ ಕುಮಾರಸ್ವಾಮಿ!
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟನಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಶುಭ ಕೋರಿದ್ದಾರೆ. ಈ ರಾಜಕೀಯ ನಾಯಕರ ಶುಭಾಶಯಗಳು, ಗಿಲ್ಲಿ ನಟ ರಾಜಕೀಯಕ್ಕೆ ಬರುತ್ತಾರೆಯೇ ಮತ್ತು ಯಾವ ಪಕ್ಷವನ್ನು ಸೇರಬಹುದು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಯಾವ ಪಕ್ಷ ಸೇರ್ತಾರೆ ಗಿಲ್ಲಿನಟ
ಬೆಂಗಳೂರು/ಮಂಡ್ಯ (ಜ.19): ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಡದನಪುರ ಗ್ರಾಮದ ನಟರಾಜ್ @ ಗಿಲ್ಲಿ ನಟ ಟ್ರೋಫಿ ವಿಜೇತರಾಗಿದ್ದಾರೆ. ಗಿಲ್ಲಿ ನಟನಿಗೆ 46 ಕೋಟಿಗೂ ಅಧಿಕ ವೋಟುಗಳು ಬಂದಿದ್ದು, ಜನರು ಹೆಚ್ಚು ಮತಗಳನ್ನು ಹಾಕಿರುವುದಕ್ಕೆ ಸಾಕ್ಷಿಯಾಗಿದೆ.
ಇದೀಗ ಗಿಲ್ಲಿ ನಟ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಪಿಎಂ ನರೇಂದ್ರಸ್ವಾಮಿ ಶುಭ ಕೋರಿದ್ದೇ ಕುತೂಹಲವಾಗಿದೆ.
46 ಕೋಟಿಗೂ ಅಧಿಕ ವೋಟು
ಬಿಗ್ ಬಾಸ್ ಸೀಸನ್ 12ರ ಟ್ರೋಫಿ ವಿಜೇತ ಹಾಸ್ಯ ನಟ ಗಿಲ್ಲಿ ನಟ ಅಲಿಯಾಸ್ ನಟರಾಜ್ ಇದೀಗ ರಾಜ್ಯಾದ್ಯಂತ ಭಾರೀ ಪ್ರಸಿದ್ಧಿಯಾಗಿದ್ದಾನೆ. ಕಿರುತೆರೆ ವೇದಿಕೆಗಳ ಮೇಲೆ ಪ್ರಾಪರ್ಟಿ ಕಾಮಿಡಿ ಮಾಡಿಕೊಂಡಿದ್ದ ಗಿಲ್ಲಿನಟ 3 ತಿಂಗಳಲ್ಲಿ ಬರೋಬ್ಬರಿ 46 ಕೋಟಿಗೂ ಅಧಿಕ ವೋಟುಗಳನ್ನು ಗಳಿಸಿ ವಿಜೇತನಾಗಿದ್ದಾನೆ. ಆದರೆ, ಇದೀಗ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ರಾಜಕೀಯ ನಾಯಕರು ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ.
ಗಿಲ್ಲಿ ನಟ ರಾಜಕೀಯ ಸೇರ್ಪಡೆ
ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಸಂಸದ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್) ಇಬ್ಬರೂ ಶುಭಾಶಯ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದು ಗಿಲ್ಲಿ ನಟ ರಾಜಕೀಯ ಸೇರ್ಪಡೆಯ ಮುನ್ಸೂಚನೆ ಆಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಮಂಡ್ಯದ ಜನತೆಗೂ ಸಂತಸ ವ್ಯಕ್ತವಾಗಿದೆ. ಆದರೆ, ಇವರಿಬ್ಬರೂ ಗಿಲ್ಲಿ ನಟನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರಾ? ಎಂಬ ಚರ್ಚೆಯೂ ಕೇಳಿಬರುತ್ತಿದೆ. ಹಾಗಾದರೆ, ಗಿಲ್ಲಿ ನಟ ಯಾವ ರಾಜಕೀಯ ಪಕ್ಷ ಸೇರುತ್ತಾನೆ? ಯಾರನ್ನು ಬೆಂಬಲಿಸುತ್ತಾನೆ? ಎಂಬ ಚರ್ಚೆಗಳು ಕೂಡ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಗಿಲ್ಲಿ
ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ. ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು ಎಂದು ಶುಭಾಶಯ ಕೋರಿದ್ದಾರೆ.
ಮಳವಳ್ಳಿ ಹೈದ ಬಿಗ್ ಬಾಸ್ ಟ್ರೋಫಿ ಎತ್ತಾಯ್ತು
ಶಾಸಕ ನರೇಂದ್ರ ಸ್ವಾಮಿ ಅವರು, ನಮ್ಮ ಮಳವಳ್ಳಿ ಹೈದ ಬಿಗ್ ಬಾಸ್ ಕನ್ನಡದ ಟ್ರೋಫಿಯನ್ನು ಎತ್ತಾಯ್ತು! ತನ್ನ ಪ್ರಾಮಾಣಿಕ, ಚಾಣಾಕ್ಷ ಆಟದ ಮೂಲಕ ಕನ್ನಡಿಗರ ಮನಗೆದ್ದು, ಬಿಗ್ ಬಾಸ್ ಸೀಸನ್ 12 ರ ವಿಜೇತನಾಗಿ ಹೊರ ಹೊಮ್ಮಿದ ಗಿಲ್ಲಿ ನಟನಿಗೆ ನನ್ನ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಶುಭಾಶಯ ಕೋರಿದ್ದಾರೆ.
ದಡದಪುರ ಗ್ರಾಮದ ಪ್ರತಿಭೆ ಗಿಲ್ಲಿನಟ
ಇನ್ನು 'ಕಳೆದ 5 ದಿನಗಳ ಹಿಂದೆ ನಮ್ಮ ಮಳವಳ್ಳಿ ತಾಲ್ಲೂಕಿನ ದಡದಪುರ ಗ್ರಾಮದ ಪ್ರತಿಭೆ ಗಿಲ್ಲಿನಟ ಬಿಗ್ ಬಾಸ್ ಸೀಸನ್ 12ರ ಫೈನಲ್ ಹಂತವನ್ನು ತಲುಪಿದ್ದು, ಆತನಿಗೆ ಹೆಚ್ಚಿನ ಮತಗಳನ್ನು ನೀಡಿ, ಈ ಬಾರಿಯ ಬಿಗ್ ಬಾಸ್ ಕನ್ನಡದ ಟ್ರೋಫಿಯನ್ನು ಗೆಲ್ಲಲು ತಾವೆಲ್ಲರೂ ಸಹಕಾರಿಯಾಗಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮನವಿ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

