ಈ ದೇಶಗಳ ಪಾಸ್ಪೋರ್ಟ್ ವಿಶ್ವದಲ್ಲೇ ಅತ್ಯಂತ ದುರ್ಬಲ… ಭಾರತದ ಸ್ಥಾನವೆಷ್ಟು?
ಪಾಸ್ ಪೋರ್ಟ್ ಗಳಲ್ಲೂ ಸ್ಟ್ರಾಂಗ್ ಮತ್ತು ವೀಕ್ ಪಾಸ್ ಪೋರ್ಟ್ ಎಂದು ಇರುತ್ತೆ. ಕೆಲವು ಪಾಸ್ ಪೋರ್ಟ್ ಗಳು ಎಷ್ಟೊಂದು ಸ್ಟ್ರಾಂಗ್ ಆಗಿರುತ್ತವೆ ಅಂದ್ರೆ ಅವುಗಳನ್ನು ಹಿಡ್ಕೊಂಡು ನಾವು ಯಾವುದೇ ವೀಸಾ ಇಲ್ಲದೆ ಹಲವಾರು ದೇಶಗಳಿಗೆ ಭೇಟಿ ನೀಡಬಹುದು. ಇತ್ತೀಚೆಗೆ, ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ವಿಶ್ವದ ಎಲ್ಲಾ 199 ದೇಶಗಳನ್ನು ಒಳಗೊಂಡಿದೆ. ಹಾಗಾದರೆ ಯಾವ ದೇಶದ ಪಾಸ್ಪೋರ್ಟ್ ಸ್ಟ್ರಾಂಗ್ ಆಗಿದೆ ಮತ್ತು ಯಾವ ದೇಶದ ಪಾಸ್ ಪೋರ್ಟ್ ವೀಕ್ ಆಗಿದೆ ಎಂದು ತಿಳಿದುಕೊಳ್ಳೋಣ.
ದೇಶದ ಹೊರಗೆ ಪ್ರಯಾಣಿಸಲು ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಅತ್ಯಂತ ಮುಖ್ಯವಾಗಿ ಬೇಕಾಗಿರುವ ವಸ್ತು ಎಂದರೆ ಅದು ಪಾಸ್ಪೋರ್ಟ್. ಪಾಸ್ ಪೋರ್ಟ್ (passport) ಇಲ್ಲದೆ ನಮಗೆ ವಿದೇಶಗಳಿಗೆ ಪ್ರಯಾಣಿಸಲು ಸಾಧ್ಯವೇ ಇಲ್ಲ. ನಿಮ್ಮ ದೇಶದ ಪಾಸ್ಪೋರ್ಟ್ ಹೆಚ್ಚು ಶಕ್ತಿಶಾಲಿಯಾದಷ್ಟೂ, ನೀವು ವೀಸಾವಿಲ್ಲದೆ ಹೆಚ್ಚು ದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ.
ಲಂಡನ್ ಮೂಲದ ವಲಸೆ ಸಲಹಾ ಸಂಸ್ಥೆ 'ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಟ್ ಫಾರ್ 2022' ವಿಶ್ವದಾದ್ಯಂತ ಪಾಸ್ಪೋರ್ಟ್ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಇದು ಎಲ್ಲಾ 199 ದೇಶಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ದುರ್ಬಲ ಪಾಸ್ಪೋರ್ಟ್ಗಳ ರ್ಯಾಂಕಿಂಗ್ ಗಳನ್ನು ಒಳಗೊಂಡಿದೆ. ಈ ಶ್ರೇಯಾಂಕವು ಯಾವ ದೇಶದ ನಾಗರಿಕರು ಪ್ರಯಾಣಿಸಲು ಹೆಚ್ಚು ಮುಕ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತೆ.
ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಯಾವ ದೇಶಗಳದ್ದು ಗೊತ್ತಾ?
ಜಪಾನ್, ಸಿಂಗಾಪುರ್, ಜರ್ಮನಿ, ದಕ್ಷಿಣ ಕೊರಿಯಾ, ಇಟಲಿ, ಫಿನ್ಲ್ಯಾಂಡ್, ಲಕ್ಸೆಂಬರ್ಗ್, ಸ್ಪೇನ್, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್ ಈ ಪಟ್ಟಿಯಲ್ಲಿ ಮೊದಲ 10 ದೇಶಗಳಾಗಿವೆ. ಈ ದೇಶಗಳ ಪಾಸ್ ಪೋರ್ಟ್ ಹೊಂದಿರುವವರು ವೀಸಾ ಇಲ್ಲದೇ ಹೆಚ್ಚು ದೇಶಗಳಿಗೆ ಸಂಚಾರ ಮಾಡಬಹುದು.
ಕೆಲವು ಪಾಸ್ಪೋರ್ಟ್ಗಳು ತುಂಬಾನೆ ವೀಕ್ ಆಗಿರುತ್ತವೆ. ಅವು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ ಶಕ್ತಿಶಾಲಿ ಪಾಸ್ ಪೋರ್ಟ್ ಗಳ ಈ ಶ್ರೇಯಾಂಕದಲ್ಲಿ, ಕೆಲವು ದೇಶಗಳ ಪಾಸ್ ಪೋರ್ಟ್ ಗಳು ತುಂಬಾ ವೀಕ್ ಆಗಿವೆ. ಆ ದೇಶಗಳು ರ್ಯಾಂಕಿಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.
ಅಫ್ಘಾನಿಸ್ತಾನ
ಈ ದೇಶವು ವಿಶ್ವದ ಅತ್ಯಂತ ದುರ್ಬಲ ಪಾಸ್ಪೋರ್ಟ್ (weak passport) ಅನ್ನು ಹೊಂದಿದೆ. ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನ 112ನೇ ಸ್ಥಾನದಲ್ಲಿದೆ. ಇಲ್ಲಿನ ಜನರು ವೀಸಾ ಇಲ್ಲದೆ ಕೇವಲ 26 ದೇಶಗಳಿಗೆ ಮಾತ್ರ ಹೋಗಬಹುದು. ಹೆಚ್ಚಿನ ದೇಶಗಳಿಗೆ ಹೋಗಲು ಸಾಧ್ಯವೇ ಇಲ್ಲ.
ಇರಾಕ್
ಇನ್ನು ರ್ಯಾಂಕಿಂಗ್ನಲ್ಲಿ ಇರಾಕ್ ಅಫ್ಘಾನಿಸ್ತಾನಕ್ಕಿಂತ ಸ್ವಲ್ಪ ಮೇಲಿದೆ. ಇರಾಕ್ ಪಾಸ್ಪೋರ್ಟ್ಗಳು ವೀಸಾ ಇಲ್ಲದೆ 28 ದೇಶಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ. ಇವು ವೀಕ್ ಪಾಸ್ ಪೋರ್ಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಸಿರಿಯಾ
ಸಿರಿಯಾ ಬಗ್ಗೆ ನೀವು ಖಂಡಿತವಾಗಿ ಕೇಳಿರಬಹುದು. ಯುದ್ಧಗಳಿಂದಲೇ ಸುದ್ದಿಯಲ್ಲಿರುವ ದೇಶ ಇದು. ಅತ್ಯಂತ ದುರ್ಬಲ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಸಿರಿಯಾ ಮೂರನೇ ಸ್ಥಾನದಲ್ಲಿದೆ. ವೀಸಾಗೆ ಅರ್ಜಿ ಸಲ್ಲಿಸದೆ ಸಿರಿಯಾ ಪಾಸ್ಪೋರ್ಟ್ ಅನ್ನು ಕೇವಲ 29 ದೇಶಗಳಿಗೆ ಮಾತ್ರ ತಿರುಗಬಹುದು.
ಪಾಕಿಸ್ತಾನ
ಇನ್ನು ನಮ್ಮ ನೆರೆಯ ಪಾಕಿಸ್ತಾನ ಎಷ್ಟನೇ ಸ್ಥಾನದಲ್ಲಿರಬಹುದು ಅನ್ನೋ ಕುತೂಹಲ ನಿಮಗಿದ್ದರೆ ಇಲ್ಲಿದೆ ಮಾಹಿತಿ. ಪಾಕಿಸ್ತಾನದ ಪಾಸ್ಪೋರ್ಟ್ ವಿಶ್ವದ ನಾಲ್ಕನೇ ದುರ್ಬಲ ಪಾಸ್ಪೋರ್ಟ್ ಆಗಿದೆ. ಈ ಪಾಸ್ಪೋರ್ಟ್ ಸಹಾಯದಿಂದ, ವೀಸಾ ಇಲ್ಲದೆ ಕೇವಲ 31 ದೇಶಗಳಿಗೆ ಮಾತ್ರ ಭೇಟಿ ನೀಡಬಹುದು.
ಯೇಮನ್
ಪಾಸ್ಪೋರ್ಟ್ ವಿಷಯದಲ್ಲಿ ಯೆಮೆನ್ ವಿಶ್ವದ ಐದನೇ ದುರ್ಬಲ ದೇಶವಾಗಿದೆ. ಅಂದರೆ ಇದು 107ನೇ ಸ್ಥಾನದಲ್ಲಿದೆ. ಇಲ್ಲಿನ ಪಾಸ್ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಕೇವಲ 33 ದೇಶಗಳಿಗೆ ಮಾತ್ರ ಪ್ರಯಾಣಿಸಬಹುದು. ಹೆಚ್ಚಿನ ದೇಶಗಳಿಗೆ ಪ್ರಯಾಣಿಸಲು ಸಾಧ್ಯವಿಲ್ಲ.
ಭಾರತೀಯ ಪಾಸ್ಪೋರ್ಟ್ ಎಷ್ಟು ಬಲವಾಗಿದೆ?
ಬೇರೆಲ್ಲಾ ದೇಶದ್ದು ಬಿಡಿ, ಭಾರತದ ಪಾಸ್ ಪೋರ್ಟ್ ಎಷ್ಟು ಸ್ಟ್ರಾಂಗ್ ಆಗಿದೆ ಅನ್ನೋ ಡೌಟ್ ನಿಮ್ಮನ್ನೂ ಕಾಡಬಹುದು ಅಲ್ವಾ? ಭಾರತೀಯ ಪಾಸ್ಪೋರ್ಟ್ನ ಸ್ಥಿತಿಯು ಪಾಕಿಸ್ತಾನದ ಪಾಸ್ಪೋರ್ಟ್ಗಳಿಗಿಂತ ಉತ್ತಮವಾಗಿದೆ. ಈ ಪಟ್ಟಿಯಲ್ಲಿ ಭಾರತವು 87 ನೇ ಸ್ಥಾನದಲ್ಲಿದೆ ಮತ್ತು ಇಲ್ಲಿನ ಪಾಸ್ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ವಿಶ್ವದ 60 ದೇಶಗಳಿಗೆ ಹೋಗಬಹುದು.