ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರಪಂಚದ 7 ಅದ್ಭುತ ರಸ್ತೆಗಳಿವು!
ನೀವು ಸಾಮಾನ್ಯವಾಗಿ ರಜಾದಿನಗಳನ್ನು ಕಳೆಯಲು ಹೊರ ದೇಶಕ್ಕೆ ಹೋದಾಗ ಏನು ಮಾಡ್ತೀರಿ? ಇದೇನು ಪ್ರಶ್ನೆ ಮಾಡ್ತಿದ್ದಾರೆ ಅಂದ್ಕೋಬೇಡಿ. ಸಾಮಾನ್ಯವಾಗಿ ನಾವು, ನೀವು ಮಾಡೋದೇನು? ಯಾವ ಪ್ರದೇಶಕ್ಕೆ ಹೋಗಿರುತ್ತೇವೋ ಅಲ್ಲಿನ ಆಹಾರ ಮತ್ತು ಮಾರುಕಟ್ಟೆಗಳಿಗೆ, ಆ ನಗರ ಅಥವಾ ದೇಶದ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುತ್ತೇವೆ, ಯಾಕೆಂದರೆ ಅವು ಅಲ್ಲಿನ ನೋಡಲೇಬೇಕಾದ ಸ್ಥಳಗಳಾಗಿರುತ್ತವೆ. ಆದರೆ ಯಾವತ್ತಾದರೂ ಆ ಊರಿನ ರಸ್ತೆಗಳ ಸೌಂದರ್ಯ ನೋಡಲೆಂದು ಟ್ರಿಪ್ ಮಾಡಿದ್ದೀರಾ? ಇಲ್ಲ ಅಲ್ವಾ? ಕೆಲವು ರಸ್ತೆಗಳು ಎಷ್ಟೊಂದು ಸುಂದರವಾಗಿರುತ್ತವೆ ಅಂದ್ರೆ, ನೀವು ಕಳೆದೋಗೋದು ಖಚಿತಾ. ನಿಮ್ಮ ಹೃದಯವನ್ನು ಗೆಲ್ಲಬಲ್ಲ ರಸ್ತೆಗಳನ್ನು ಹೊಂದಿರೋ ಅನೇಕ ದೇಶಗಳು ಜಗತ್ತಿನಲ್ಲಿವೆ ಎಂದು ನಿಮಗೆ ತಿಳಿದಿದೆಯೇ?
ಪ್ರತಿಯೊಂದು ದೇಶವು ತನ್ನದೇ ಆದ ಇತಿಹಾಸವನ್ನು ಹೊಂದಿದೆ, ಅದಕ್ಕಾಗಿ ಯಾವುದೇ ದೇಶಕ್ಕೂ ಹೋದಾಗ ನೀವು ಬಹುತೇಕ ಎಲ್ಲೆಡೆ ಐತಿಹಾಸಿಕ ಸ್ಮಾರಕಗಳನ್ನು ನೋಡುತ್ತೀರಿ. ಇದಲ್ಲದೆ, ಸುಂದರ ನಗರಗಳು, ಮಾರುಕಟ್ಟೆಗಳು, ಸಮುದ್ರಗಳು, ಜಲಪಾತಗಳು, ವಸ್ತು ಸಂಗ್ರಹಾಲಯಗಳು, ಆಹಾರದಂತಹ ಅನೇಕ ವಸ್ತುಗಳು ಅಲ್ಲಿ ಕಂಡುಬರುತ್ತವೆ. ಆದರೆ ಇದರ ಹೊರತಾಗಿ, ಅನೇಕ ದೇಶಗಳ ರಸ್ತೆಗಳು ವಾವ್ ಎನಿಸುವಷ್ಟು ಸುಂದರವಾಗಿರುತ್ತವೆ. ಅವು ಎಷ್ಟು ಸುಂದರವಾಗಿವೆಯೆಂದರೆ ನೀವು ಅದರ ಮೇಲೆ ಒಮ್ಮೆ ಪ್ರಯಾಣಿಸಬೇಕು, ಪ್ರಪಂಚವನ್ನೇ ಮರೆಯುವಿರಿ. ಇಲ್ಲಿ ಪ್ರಪಂಚದ ಅಂತಹ 7 ರಸ್ತೆಗಳ ಬಗ್ಗೆ ತಿಳಿದುಕೊಳ್ಳೋಣ.
ಗ್ರೇಟ್ ಓಷನ್ ರೋಡ್, ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ದಕ್ಷಿಣ ಕರಾವಳಿಯುದ್ದಕ್ಕೂ ಇರುವ ಗ್ರೇಟ್ ಓಷನ್ ರಸ್ತೆ (Great Ocean Road) ರೋಡ್ ಟ್ರಿಪ್‌ಗೆ ಯೋಗ್ಯವಾಗಿದೆ. ಕಡಲತೀರದ ನಗರಗಳಿಂದ ಹಿಡಿದು ರಾಷ್ಟ್ರೀಯ ಉದ್ಯಾನವನಗಳು, ಬಂಡೆಗಳು, ಅನೇಕ ಮನೆಗಳು ಮತ್ತು ಅತ್ಯಂತ ಜನಪ್ರಿಯ ಹನ್ನೆರಡು ಶಿಲಾ ರಚನೆಗಳವರೆಗೆ ಈ ಮಾರ್ಗದಲ್ಲಿ ನೀವು ಎಲ್ಲವನ್ನೂ ನೋಡಬಹುದು.
ಅಟ್ಲಾಂಟಿಕ್ ರಸ್ತೆ, ನಾರ್ವೆ (Atlantic Road, Norway)
ನಾರ್ವೆ ಹಲವಾರು ಕಾರಣಗಳಿಂದಾಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಅನ್ನೋದು ನಿಮಗೂ ಗೊತ್ತು. ನಾರ್ವೆಯ ಅಟ್ಲಾಂಟಿಕ್ ರಸ್ತೆ 8 ಕಿಲೋಮೀಟರ್ ಉದ್ದವಿದ್ದು, ಇದು ಕಾರ್ವಾಗ್ ನಿಂದ ವೆವಾಂಗ್ ಗೆ ಹೋಗುತ್ತದೆ. ಈ ರಸ್ತೆಯಲ್ಲಿ ಒಟ್ಟು 8 ಸೇತುವೆಗಳಿವೆ, ಅವು ಒಂದಕ್ಕಿಂತ ಹೆಚ್ಚು ಸುಂದರವಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವ ಮಜಾನೆ ಬೇರೆಯಾಗಿರುತ್ತೆ.
ಅಮಲ್ಫಿ ಕೋಸ್ಟ್ ರೋಡ್, ಇಟಲಿ (Amalfi coast road, Italy)
ಕರಾವಳಿ ಪ್ರದೇಶಗಳ ಹೆದ್ದಾರಿಯೇ ಸುಂದರವಾಗಿರುತ್ತೆ. ಇಲ್ಲಿನ ಬೀಚ್ ಮತ್ತು ಅದಕ್ಕೆ ತಾಕಿಕೊಂಡಿರುವ ರಸ್ತೆಗಳು, ಪ್ರಯಾಣದ ಮಜಾವನ್ನೆ ಹೆಚ್ಚಿಸುತ್ತೆ. ಇಟಲಿಯ ಅಮಲ್ಪಿ ಕೋಸ್ಟ್ ರೋಡ್ ವರ್ಣರಂಜಿತ ಹಾಡುಗಳು ಮತ್ತು ಸುಂದರವಾದ ಕರಾವಳಿಗೆ ಹೆಸರುವಾಸಿ. ಈ ಪ್ರದೇಶವು ರಸ್ತೆ ಪ್ರವಾಸಗಳಿಗೆ ಸೂಕ್ತವಾಗಿದೆ.
ಹನಾ ಹೆದ್ದಾರಿ, ಹವಾಯಿ (Hana Highway, Hawaii)
ಸುಂದರವಾದ ಹಾನಾ ಹೆದ್ದಾರಿಯಲ್ಲಿ ನಿಮಗೆ ಅದ್ಭುತ ದೃಶ್ಯಗಳ ಮೆರವಣಿಗೆಯೇ ಸಿಗುತ್ತದೆ ಎಂದರೆ ತಪ್ಪಾಗಲಾರದು. ಒಂದೆಡೆ ಸಮುದ್ರದ ಸುಂದರ ನೋಟ, ಮತ್ತೊಂದೆಡೆ ಸೊಂಪಾಗಿ ಬೆಳೆದು ಮುದ ನೀಡುವ ಹಸಿರು ಮಳೆಕಾಡುಗಳು, ದಾರಿ ಮಧ್ಯ ಮಧ್ಯದಲ್ಲಿ ಸಿಗುವ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮತ್ತು ಇನ್ನೂ ಹೆಚ್ಚಿನವು ನಿಮಗೆ ಈ ರಸ್ತೆ ಮಾರ್ಗದಲ್ಲಿ ಕಾಣಸಿಗುತ್ತವೆ.
ಚಾಪ್ಮನಸ್ ಪೀಕ್ ಡ್ರೈವ್, ದಕ್ಷಿಣ ಆಫ್ರಿಕಾ
ಈ ರಸ್ತೆಯು ದಾರಿಯುದ್ದಕ್ಕೂ ಸುಂದರವಾದ ಸಮುದ್ರ ಮತ್ತು ಸುಂದರವಾದ ಬಂಡೆಗಳಿಂದ ತುಂಬಿದೆ. ಕೆಲವೊಮ್ಮೆ ಇಲ್ಲಿನ ರಸ್ತೆಗಳು ನಿಮಗೆ ಭಯವನ್ನು ಹುಟ್ಟಿಸಬಹುದು. ಯಾಕೆಂದರೆ ಇಲ್ಲಿನ ತಿರುವುಗಳು ತೀಕ್ಷ್ಣವಾಗಿರುವುದರಿಂದ ಇಲ್ಲಿ ಜಾಗರೂಕತೆಯಿಂದ ಚಾಲನೆ ಮಾಡುವುದು ಒಳ್ಳೆಯದು. ಆದರೆ ಇಲ್ಲಿನ ದೃಶ್ಯಗಳು ಮಾತ್ರ ನಯನಮನೋಹರವಾಗಿವೆ.
ವ್ಯಾಲಿ ಆಫ್ ಫೈರ್ ರೋಡ್, ನೆವಾಡಾ (valley of fire Nevada)
ಈ ರಸ್ತೆಯಲ್ಲಿ ಅದ್ಭುತವಾದ ಕೆಂಪು ಮರಳುಗಲ್ಲುಗಳನ್ನು ನೋಡಿದ್ರೆ, ಸುತ್ತಲೂ ಬೆಂಕಿಯುಂಡೆಯಂತೆ ಕಾಡುತ್ತೆ, ಅದಕ್ಕಾಗಿಯೇ ಈ ರಸ್ತೆಗೆ ವ್ಯಾಲಿ ಆಫ್ ಫೈರ್ ರೋಡ್ ಎಂದು ಹೆಸರಿಟ್ಟಿರಬಹುದು. ನೀವು ಇಲ್ಲಿ ನೋಡಬಹುದಾದಷ್ಟು ಮಟ್ಟಿಗೆ, ನೀವು ಸುಂದರವಾದ ಕಲ್ಲುಗಳ ರಚನೆಯನ್ನು ಮಾತ್ರ ನೋಡುತ್ತೀರಿ.
ಕ್ಯಾಲಿಫೋರ್ನಿಯಾ ಸ್ಟೇಟ್ ರೂಟ್-1, ಯುಎಸ್
ರೂಟ್-66 ಎಂದೂ ಕರೆಯಲ್ಪಡುವ ಕ್ಯಾಲಿಫೋರ್ನಿಯಾ ಸ್ಟೇಟ್ ರೂಟ್-1 ಒಂದು ಸುಂದರವಾದ ರಸ್ತೆದೆ. ಪೆಸಿಫಿಕ್ ಮಹಾಸಾಗರ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆಯ ಅದ್ಭುತ ನೋಟಗಳಿಗಾಗಿ, ಈ ಮಾರ್ಗ ಹೆಸರುವಾಸಿಯಾಗಿದೆ. ಇಲ್ಲಿನ ಸೌಂದರ್ಯ ಕಣ್ಣುಗಳಿಗೆ ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ.