ಎಲ್ಲರ ಪಾಪ ತೊಳೆಯುವ ಗಂಗಾ ಮಾತೆಯಿಂದಲೇ ನಡೆದಿತ್ತು ಮಹಾ ಪಾಪ
ಮಹಾಭಾರತದ ದಂತಕಥೆಯ ಪ್ರಕಾರ, ಸ್ವರ್ಗದಲ್ಲಿ ನಡೆದ ಒಂದು ಘಟನೆಯಿಂದಾಗಿ, ತಾಯಿ ಗಂಗಾ ಶಾಪಗ್ರಸ್ತಳಾದಳು ಹಾಗೂ ಯುವತಿಯಾಗಿ ಭೂಮಿಗೆ ಬರಬೇಕಾಯಿತು. ಅಷ್ಟಕ್ಕೂ ಎಲ್ಲರ ಪಾಪ ತೊಳೆಯುವ ಗಂಗಾ ಮಾತೆ ಮಾಡಿದ ಪಾಪ ಏನು ಅನ್ನೋದನ್ನು ನೋಡೋಣ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಭೂಮಿಗೆ ತಾಯಿ ಗಂಗಾದೇವಿಯ (Ganga River) ಆಗಮನವು ಮನುಷ್ಯನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುವುದಾಗಿತ್ತು. ಇಂದು ಜನರೆಲ್ಲ ತನ್ನ ಪಾಪವನ್ನು ತೊಳೆಯಲು, ಗಂಗಾ ಮಾತೆಯ ಮಡಿಲಿನಲ್ಲಿ ಸೇರುತ್ತಾರೆ. ಗಂಗೆಯಲ್ಲಿ ಸ್ನಾನ ಮಾಡುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳುತ್ತಾರೆ.
ಆದರೆ ನಿಮಗೆ ಗೊತ್ತಾ? ಮಹಾಭಾರತದ ದಂತಕಥೆಯ ಪ್ರಕಾರ, ಬ್ರಹ್ಮಲೋಕದಲ್ಲಿ ನಡೆದ ಒಂದು ಘಟನೆಯಿಂದಾಗಿ, ಗಂಗೆ ಮಾಡಿದ ಒಂದು ಪಾಪದಿಂದಾಗಿ ತಾಯಿ ಗಂಗಾ ಶಾಪಗ್ರಸ್ತಳಾದಳು (cursed). ಹಾಗಾಗಿಯೇ ಸ್ವರ್ಗದಲ್ಲಿರಬೇಕಾದ ಗಂಗೆ, ಯುವತಿಯಾಗಿ ಭೂಮಿಗೆ ಬರಬೇಕಾಯಿತು.
ದಂತಕಥೆಯ ಪ್ರಕಾರ, ಇಚ್ಚವಾಕು ರಾಜವಂಶದ ರಾಜ ಮಹಾಭಿಷ (King Mahabhisha) ತನ್ನ ಮರಣದ ಬಳಿಕ ಬ್ರಹ್ಮ ಲೋಕ ಸೇರಿದ್ದನು. ಒಂದು ದಿನ ಅನೇಕ ದೇವತೆಗಳು ಮತ್ತು ಮಹಾಭಿಷರು ಬ್ರಹ್ಮನ ಮುಂದೆ ಕಾಣಿಸಿಕೊಂಡರು. ಮಹಾಭಿಷರು ರಾಜನಾಗಿದ್ದಾಗ ಮಾಡಿದ ಯಾಗ ಯಜ್ಞಾದಿಗಳ ಫಲದಿಂದ ಅವರಿಗೆ ದೇವಲೋಕದಲ್ಲಿ ಸ್ಥಾನ ಸಿಕ್ಕಿರುತ್ತದೆ.
ಬ್ರಹ್ಮ ಲೋಕದಲ್ಲಿ ಎಲ್ಲಾ ದೇವತೆಗಳು ಸೇರಿರುತ್ತಾರೆ. ಅಲ್ಲಿ ತಾಯಿ ಗಂಗಾ ಕೂಡ ಹಾಜರಿರುತ್ತಾಳೆ. ಸಭೆ ನಡೆಯುವ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಲು ಆರಂಭಿಸಿತು. ಗಾಳಿಯ ರಭಸಕ್ಕೆ ಅತ್ಯಂತ ಸುಂದರಿಯಾದ ತಾಯಿ ಗಂಗಾ ದೇವಿಯ ಮೇಲುಡುಗೆ ಗಾಳಿಗೆ ಹಾರಿ ಹೋಗುತ್ತದೆ.
ತಕ್ಷಣದಲ್ಲಿ ನಡೆದ ಈ ಘಟನೆಯನ್ನು ನೋಡಿ, ಎಲ್ಲಾ ದೇವಾನು ದೇವತೆಗಳು ತಲೆ ತಗ್ಗಿಸಿ, ಕಣ್ಣು ಮುಚ್ಚಿ ಕುಳಿತಿದ್ದರು. ಆದರೆ ಮಹಾಭಿಷನು ಗಂಗೆಯ ಸೌಂದರ್ಯವನ್ನು ನೋಡಿ ಕಳೆದು ಹೋಗಿದ್ದನು. ಆ ನೋಟಕ್ಕೆ ಗಂಗೆಯೂ ಮನ ಸೋತು ಮಹಾಭಿಷನನ್ನು ನೋಡುತ್ತಲೇ ಇದ್ದಳು. ಇದನ್ನು ನೋಡಿ ಬ್ರಹ್ಮ ದೇವನಿಗೆ ವಿಪರೀತ ಕೋಪ ಬಂತು.
ಆಗ ಬ್ರಹ್ಮ ತುಂಬಿದ ಸಭೆಯಲ್ಲಿ ಅನಾಗರೀಕತೆಯಿಂದ ವರ್ತಿಸಿದ ರಾಜ ಮಹಾಭಿಷ ಮತ್ತೊಮ್ಮೆ ಮನುಷ್ಯನಾಗಿ ಭೂಮಿಯಲ್ಲಿ ಜನಿಸಬೇಕು ಎಂದು ಶಾಪ ನೀಡಿದರು, ಅಷ್ಟೇ ಅಲ್ಲ ಗಂಗಾ ಮಾತೆಯ ಮೇಲೆ ಕ್ರೋಧಿತನಾಗಿ ನೀನು ಮಾಡಿದ ಪಾಪದಿಂದಾಗಿ ಆತನಿಗೆ ಹೆಂಡತಿಯಾಗಿ ನೀನು ಕೂಡ ಭೂಮಿ ಮೇಲೆ ಜನಿಸಿ ನಿಮ್ಮ ಪಾಪವನ್ನು ನಿವಾರಿಸಿಕೊಳ್ಳುವಂತೆ ಶಾಪ ನೀಡಿದ್ದರು.
ಮುಂದೆ ರಾಜ ಮಹಾಭಿಷನು ಇಕ್ಷ್ವಾಕು ವಂಶದ ರಾಜ ಪ್ರತೀತನ ಪುತ್ರ ಶಂತನುವಾಗಿ ಭೂಮಿ ಮೇಲೆ ಜನಿಸಿದನು ಮತ್ತು ಗಂಗಾ ದೇವಿಯನ್ನು ಮದುವೆಯಾದನು. ಗಂಗೆ ಮತ್ತು ಶಂತನುವಿಗೆ ಜನಿಸಿದ ಮಗನೆ ಭೀಷ್ಮಪಿತಾಮರು.