ಕರ್ನಾಟಕದಲ್ಲಿ ಕನ್ನಡ ಮಾತನಾಡೋದು 66% ಜನ… ಅತಿ ಹೆಚ್ಚು ಕನ್ನಡ ಮಾತನಾಡೋ ಜಿಲ್ಲೆ….
ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಅಲ್ಲದೇ ಬೇರೆ ಭಾಷೆಯ ಜನರು ಕೂಡ ಇದ್ದಾರೆ. ರಾಜ್ಯದಲ್ಲಿ 100% ಜನ ಕನ್ನಡ ಮಾತನಾಡಲ್ಲ. ಹಾಗಿದ್ರೆ ಕನ್ನಡ ಮಾತನಾಡೋರೆಷ್ಟು?

ಕರ್ನಾಟಕದಲ್ಲಿ ಇರೋರೆಲ್ಲಾ ಕನ್ನಡ (Kannada language) ಮಾತನಾಡುವವರೇ ಅಂದುಕೊಂಡ್ರಾ? ಖಂಡಿತಾ ಅಲ್ಲ. ಕರ್ನಾಟಕವು ಬಹು ಸಂಸ್ಕೃತಿ ಭಾಷೆಗಳ ತವರೂರು. ಇಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಜನರು ಇದ್ದಾರೆ. ಹಾಗಿದ್ರೆ ಕರ್ನಾಟಕದಲ್ಲಿ ಕನ್ನಡ ಮಾತನಾಡೋ ಜನ ಎಷ್ಟಿದ್ದಾರೆ ಅನ್ನೋದನ್ನು ನೋಡೋಣ.
ಕರ್ನಾಟಕದಲ್ಲಿ 100ಕ್ಕೆ ನೂರರಷ್ಟು ಜನ ಕನ್ನಡದಲ್ಲೇ ಮಾತನಾಡ್ತಾರೆ ಅಂತ ನೀವು ತಿಳ್ಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ನಮ್ಮ ರಾಜ್ಯದಲ್ಲಿ ರಾಜ್ಯ ಭಾಷೆ (state language) ಕನ್ನಡವನ್ನು ಮಾತನಾಡುವವರ ಸಂಖ್ಯೆ 66.4 % ಮಾತ್ರ.
ಹಾಗಿದ್ರೆ ಬೇರೆ ಜನರು ಯಾವ ಭಾಷೆಯನ್ನು ಮಾತನಾಡ್ತಾರೆ ಅನ್ನೋ ಪ್ರಶ್ನೆ ನಿಮ್ಮದಾಗಿದ್ರೆ. ಅದಕ್ಕೂ ಉತ್ತರ ಇದೆ. ಕರ್ನಾಟಕದಲ್ಲಿ 5.8 % ಜನ ಉರ್ದು ಭಾಷೆಯನ್ನು (urdu language) ಮಾತನಾಡಿದ್ರೆ, 3.4 % ದಷ್ಟು ಜನರು ತೆಲುಗು ಭಾಷೆ ಮಾತನಾಡ್ತಾರೆ.
ಇನ್ನು ಕರ್ನಾಟಕದಲ್ಲಿ 3.29 % ದಷ್ಟು ಜನರು ತಮಿಳು ಭಾಷೆಯನ್ನು ಮಾತನಾಡ್ತಾರೆ. ಇದಿಷ್ಟೇ ಭಾಷೆ ಅಲ್ಲ 3.29 % ದಷ್ಟು ಜನ ಮರಾಠಿ ಭಾಷೆ ಮಾತನಾಡಿದ್ರೆ, 3.3 % ಜನ ಹಿಂದಿ ಭಾಷೆ ಮಾತನಾಡುತ್ತಾರೆ.
ಇದು ಮಾತ್ರವಲ್ಲದೇ ಮಲಯಾಲಂ, ಗುಜರಾತಿ, ತುಳು ಹೀಗೆ ಬೇರೆ ಬೇರೆ ಭಾಷೆ ಮಾತನಾಡುವವರು ಕೂಡ ನಮ್ಮ ರಾಜ್ಯದಲ್ಲಿದ್ದಾರೆ. ಇದರಲ್ಲಿ 6.96% ಜನರು ತುಳು, ಕೊಂಕಣಿ ಹಾಗೂ ಇನ್ನಿತರ ಭಾಷೆಯನ್ನು (other language) ಮಾತನಾಡ್ತಾರೆ.
ಮತ್ತೊಂದು ಶಾಕಿಂಗ್ ವಿಷ್ಯ ಏನಂದ್ರೆ, ಕರ್ನಾಟಕದ ಯಾವ ಜಿಲ್ಲೆಯಲ್ಲೂ ಸಹ 100% ದಷ್ಟು ಕನ್ನಡ ಮಾತನಾಡುವವರು ಇಲ್ವೇ ಇಲ್ಲ. ಇನ್ನು ಅತಿ ಹೆಚ್ಚು ಕನ್ನಡ ಮಾತನಾಡೋದು ಅಂದ್ರೆ ಅದು ಮಂಡ್ಯ ಜಿಲ್ಲೆಯವರು.
ಮಂಡ್ಯದಲ್ಲಿ 91% ಜನರು ಕನ್ನಡ ಮಾತನಾಡುವವರಿದ್ದಾರೆ. ಇನ್ನೂ ಕನ್ನಡ ಭಾಷೆಗಾಗಿ ಪ್ರತಿದಿನ ಹೋರಾಟಗಳು ನಡೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ 41% ಮಾತ್ರ ಇದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 9% ಜನ ಮಾತ್ರ ಕನ್ನಡ ಮಾತನಾಡುತ್ತಾರೆ.