- Home
- News
- State
- ಅಡುಗೆ ಎಣ್ಣೆ ಬಳಸಲು ಮಾರ್ಗಸೂಚಿ: ಹೋಟೆಲ್, ಮನೆಗಳಿಂದ ಬಳಸಿದ ಎಣ್ಣೆ ಸಂಗ್ರಹಿಸಿ ಬಯೋಡೀಸೆಲ್ ತಯಾರಿಸಲು ಪ್ಲಾನ್!
ಅಡುಗೆ ಎಣ್ಣೆ ಬಳಸಲು ಮಾರ್ಗಸೂಚಿ: ಹೋಟೆಲ್, ಮನೆಗಳಿಂದ ಬಳಸಿದ ಎಣ್ಣೆ ಸಂಗ್ರಹಿಸಿ ಬಯೋಡೀಸೆಲ್ ತಯಾರಿಸಲು ಪ್ಲಾನ್!
ಹೋಟೆಲ್ ಮತ್ತು ಮನೆಗಳಲ್ಲಿ ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದನ್ನು ತಡೆಯಲು ರಾಜ್ಯ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ತರಲಿದೆ. ಅಡುಗೆ ಎಣ್ಣೆಯನ್ನು 3 ಬಾರಿಗಿಂತ ಹೆಚ್ಚು ಬಳಸುವಂತಿಲ್ಲ ಮತ್ತು ಟಿಪಿಸಿ ಶೇ.25 ಮೀರಬಾರದು, ಇತ್ಯಾದಿ ಮಾರ್ಗಸೂಚಿಗಳು ಇಲ್ಲಿವೆ ನೋಡಿ…

ಬೆಂಗಳೂರು (ಸೆ.30): ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಮನೆಗಳಲ್ಲಿ ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಬಳಸುವ ಅಪಾಯಕಾರಿ ಅಭ್ಯಾಸಕ್ಕೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಗಾಗಿ ಬಳಸಿದ ಅಡುಗೆ ಎಣ್ಣೆಯ (Used Cooking Oil) ನಿರ್ವಹಣೆಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ಬಳಸಿದ ಎಣ್ಣೆಯನ್ನು ಚರಂಡಿಗೆ ಸುರಿಯುವ ಬದಲು ಅಥವಾ ಪದೇ ಪದೇ ಕರಿದು ಕ್ಯಾನ್ಸರ್‌ನಂತಹ ರೋಗಗಳಿಗೆ ಆಹ್ವಾನ ನೀಡುವ ಬದಲು, ಅದನ್ನು 'ಬಯೋಡೀಸೆಲ್' (Biodiesel) ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ರೂಪಿಸಿದೆ.
ಮನೆ ಮತ್ತು ಹೋಟೆಲ್‌ಗಳಿಂದ ಎಣ್ಣೆ ಸಂಗ್ರಹ:
ಹೋಟೆಲ್‌ಗಳಲ್ಲಿ ಮಾತ್ರವಲ್ಲದೆ, ಮನೆಗಳಲ್ಲಿ ಉಳಿಯುವ ಬಳಸಿದ ಅಡುಗೆ ಎಣ್ಣೆಯನ್ನೂ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಈ ಎಣ್ಣೆಯನ್ನು ಸಂಗ್ರಹಿಸಿ RUCO (Repurpose Used Cooking Oil) ಏಜೆನ್ಸಿಗಳಿಗೆ ಹಾಗೂ ಬಯೋಗ್ಯಾಸ್/ಬಯೋಫ್ಯುಯೆಲ್ ಕಂಪನಿಗಳಿಗೆ ನೀಡಲು ಆರೋಗ್ಯ ಇಲಾಖೆ ಮಾತುಕತೆ ನಡೆಸುತ್ತಿದೆ. ಈ ಸಂಬಂಧ 2024–25 ಮತ್ತು 2025–26ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸುವ ಗುರಿ/ದಾಖಲೆ ಇದೆ.
ಹೋಟೆಲ್‌ಗಳ ಮೇಲೆ ಹದ್ದಿನ ಕಣ್ಣು:
ಹೊಸ ಮಾರ್ಗಸೂಚಿ ಜಾರಿಗೆ ಬಂದರೆ, ಹೋಟೆಲ್ ಮತ್ತು ಆಹಾರ ತಯಾರಿಕಾ ಘಟಕಗಳು ಬಳಸಿದ ಎಣ್ಣೆಯ ಕಟ್ಟುನಿಟ್ಟಿನ ದಾಖಲೆ ಇಡಬೇಕಾಗುತ್ತದೆ. ಎಣ್ಣೆಯನ್ನು ಎಷ್ಟು ಬಾರಿ ಮರುಬಳಕೆ ಮಾಡಲಾಗಿದೆ ಎಂಬುದರ ಮೇಲೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ನಿಗಾ ವಹಿಸಲಿವೆ. ಅಧಿಕೃತ UCO ಸಂಗ್ರಹ ಏಜೆನ್ಸಿಗಳಿಗೆ ಈ ಎಣ್ಣೆಯನ್ನು ನೀಡುವುದು ಕಡ್ಡಾಯವಾಗಲಿದೆ.
ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಯಲ್ಲಿ ಏನಿದೆ? (ನಿಯಮಗಳು)
3 ಬಾರಿಗಿಂತ ಹೆಚ್ಚು ಬಳಕೆಗೆ ನಿರ್ಬಂಧ: ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಕರಿದ ಆಹಾರ ತಯಾರಿಸುವಂತಿಲ್ಲ. ಗರಿಷ್ಠ 3 ಬಾರಿಗಿಂತ ಹೆಚ್ಚು ಒಂದು ಎಣ್ಣೆಯನ್ನು ಬಳಸಬಾರದು.
TPC ಶೇ.25 ಮೀರಬಾರದು: ಪದೇ ಪದೇ ಎಣ್ಣೆ ಕಾಯಿಸುವುದರಿಂದ ಅದರಲ್ಲಿ Total Polar Compounds (TPC) ಪ್ರಮಾಣ ಹೆಚ್ಚಾಗುತ್ತದೆ. TPC ಪ್ರಮಾಣ ಶೇ.25ರಷ್ಟು ಮೀರಿದರೆ ಆ ಎಣ್ಣೆ ಮಾನವನ ಬಳಕೆಗೆ ಅಸುರಕ್ಷಿತ. ಅದನ್ನು ಕಡ್ಡಾಯವಾಗಿ ತ್ಯಜಿಸಬೇಕು.
ಆರೋಗ್ಯದ ಮೇಲೆ ಗಂಭೀರ ಪರಿಣಾಮ: TPC ಶೇ.25 ಮೀರಿದ ಎಣ್ಣೆ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ, ಕೆಟ್ಟ ಕೊಬ್ಬು (Cholesterol) ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಅಪಾಯವಿರುತ್ತದೆ.
ಗುಣಮಟ್ಟದ ಬದಲಾವಣೆ: ಕಾಯಿಸುವಾಗ ಎಣ್ಣೆಯಲ್ಲಿ ನೀಲಿ ಅಥವಾ ಬೂದು ಬಣ್ಣದ ಹೊಗೆ ಬಂದರೆ, ನೊರೆ ಕಾಣಿಸಿಕೊಂಡರೆ ತಕ್ಷಣವೇ ಬಳಕೆ ನಿಲ್ಲಿಸಬೇಕು. ಎಣ್ಣೆ ಕಪ್ಪಾಗಿ, ಮಸುಕಾಗಿ ಅಥವಾ ಅದರ ಗಾಢತೆ ಬದಲಾಗಿದ್ದರೆ ಅದನ್ನು ಬಳಸಬಾರದು.
ದೀರ್ಘಕಾಲದ ಸಂಗ್ರಹ ಬೇಡ: ಬಳಸಿದ ಎಣ್ಣೆಯನ್ನು ತುಂಬಾ ದಿನಗಳ ಕಾಲ ಸಂಗ್ರಹಿಸಿಡಬಾರದು, ಒಂದು ಅಥವಾ ಎರಡು ದಿನಗಳಲ್ಲಿ ಬಳಸಿ ಮುಗಿಸಬೇಕು.
ಚರಂಡಿಗೆ ಸುರಿಯುವಂತಿಲ್ಲ: ಬಳಸಿದ ಎಣ್ಣೆಯನ್ನು ಸಿಂಕ್, ಒಳಚರಂಡಿ ಅಥವಾ ಡ್ರೈನೇಜ್‌ಗೆ ಸುರಿಯಬಾರದು. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಬದಲಾಗಿ ಪರಿಸರ ಸ್ನೇಹಿಯಾಗಿ ಅಧಿಕೃತ ಏಜೆನ್ಸಿಗಳಿಗೆ ನೀಡಬೇಕು.
ಒಟ್ಟಾರೆಯಾಗಿ, ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಕಳಪೆ ಎಣ್ಣೆ ಮರುಬಳಕೆ ದಂಧೆಗೆ ಬ್ರೇಕ್ ಹಾಕಲು ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದ್ದು, ಹೋಟೆಲ್ ಉದ್ಯಮ ಹಾಗೂ ಸಾರ್ವಜನಿಕರು ಈ ಹೊಸ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
