- Home
- Entertainment
- Sandalwood
- ನನ್ನ ಪಕ್ಕದ ಸೀಟಿನಲ್ಲಿ.. ಎನ್ನುತ್ತಲೇ 2ನೇ ಮದ್ವೆ ಬಗ್ಗೆ ಮೌನ ಮುರಿದ ವಿಜಯ ರಾಘವೇಂದ್ರ: ನಟ ಹೇಳಿದ್ದೇನು?
ನನ್ನ ಪಕ್ಕದ ಸೀಟಿನಲ್ಲಿ.. ಎನ್ನುತ್ತಲೇ 2ನೇ ಮದ್ವೆ ಬಗ್ಗೆ ಮೌನ ಮುರಿದ ವಿಜಯ ರಾಘವೇಂದ್ರ: ನಟ ಹೇಳಿದ್ದೇನು?
ನಟ ವಿಜಯ ರಾಘವೇಂದ್ರ ಅವರು ಇನ್ನೊಂದು ಮದುವೆಯಾಗುತ್ತಿದ್ದಾರೆ, ಅವರ ಮದುವೆ ಇಂಥವರ ಜೊತೆ ಆಗುತ್ತಿದೆ ಎಂದೆಲ್ಲಾ ಸಾಕಷ್ಟು ಸುದ್ದಿ ಹರಿದಾಡುತ್ತಲೇ ಇದೆ. ತಮ್ಮ ಪಕ್ಕದ ಸೀಟಿನಲ್ಲಿ ಯಾರು ಇದ್ದಾರೆ ಎನ್ನುವ ಬಗ್ಗೆ ನಟ ಹೇಳಿದ್ದೇನು?

ಮದುವೆ ಕುರಿತು ವಿಜಯ ರಾಘವೇಂದ್ರ
ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಎರಡು ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ. ಈಚೆಗಷ್ಟೇ, ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರವೇ ಆತನಿಗೆ ಬೇಸರವನ್ನು ಮರೆಸಲೆಂದು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅಮ್ಮನ ಸ್ಥಾನವನ್ನು ತುಂಬುವುದಕ್ಕೆ ಪ್ರಯತ್ನ ಮಾಡಿದ್ದರು.
ಅಭಿಮಾನಿಗಳ ಹಾರೈಕೆ
ಇದರ ನಡುವೆಯೇ, ಅವರು ಒಂಟಿಯಾಗಿ ಇರಬಾರದು, ಇನ್ನೊಂದು ಮದುವೆಯಾಗಬೇಕು ಎನ್ನುವುದು ಸಹಜವಾಗಿ ಅವರ ಅಭಿಮಾನಿಗಳ ಆಸೆ. ಹಾಗೆಂದು ಯಾರದ್ಯಾರದ್ದೋ ಜೊತೆ ಸಂಬಂಧ ಕಲ್ಪಿಸಿದರೆ, ಯಾರಿಗಾದರೂ ಅದು ತುಂಬಾ ಹಿಂಸೆ ಆಗುತ್ತದೆ. ಜೊತೆಗೆ ನೋವು ಕೂಡ ಆಗುತ್ತದೆ. ಅದೇ ರೀತಿ ವಿಜಯ ರಾಘವೇಂದ್ರ ಅವರಿಗೂ ಆಗಿದೆ.
ಪಕ್ಕದ ಸೀಟಿನಲ್ಲಿ...
ಮೊದಲಿಗೆ ನಿಮ್ಮ ಚಿತ್ರದ ಯಶಸ್ಸು ಬಂದಾಗ ಪಕ್ಕದಲ್ಲಿ ಇನ್ನೊಬ್ಬರು ಅದನ್ನು ಸಂಭ್ರಮಿಸುತ್ತಿದ್ದರು, ಈಗ...? ಎಂದು ಪ್ರಶ್ನಿಸಿದಾಗ ಅದರ ಒಳಾರ್ಥ ತಿಳಿದ ನಟ ವಿಜಯ ರಾಘವೇಂದ್ರ ಅವರು, ಚಿತ್ರದಲ್ಲಿ ಅಲ್ಲ ಸರ್, ಅವರು ನನ್ನ ಜೀವನದಲ್ಲಿ ಇದ್ದದ್ದು, ನೀವು ಹೇಳುವ ಪ್ರಶ್ನೆ ನನಗೆ ಅರ್ಥವಾಯಿತು. ಆದರೆ ಆ ಖಾಲಿತನ ಎನ್ನುವುದು ಮೇಲ್ನೋಟಕ್ಕೆ ಇದೆ. ಆದರೆ ಆಕೆ ಇಂದಿಗೂ ನನ್ನ ಮನಸ್ಸಿನಲ್ಲಿ ಜೀವಂತವಾಗಿ ಇದ್ದಾರೆ ಎಂದರು.
ಹಿತೈಷಿಗಳು ಇದ್ದಾರೆ...
ನನ್ನ ಮತ್ತು ಮಗನ ಜೊತೆ ಅವರು ಇದ್ದಾರೆ. ಅದೇ ಪ್ರೀತಿಯನ್ನು ಅಭಿಮಾನಿಗಳು ಹೊರಗಡೆಯಿಂದ ತೋರಿಸುತ್ತಿದ್ದಾರೆ. ನನಗೆ ಸಿಕ್ಕಾಗ ಒಳ್ಳೆಯ ಮಾತುಗಳನ್ನಾಡಿಸಿ ಅವರನ್ನು ಜೀವಂತವಾಗಿ ಇರಿಸಿದ್ದಾರೆ. ಯಾವಾಗಲೂ ಪಕ್ಕದ ಸೀಟೇ ಫಿಲ್ ಆಗಬೇಕೆಂದೇನೂ ಇಲ್ಲ. ಅದು ಆಗಬೇಕೆಂದೇನೂ ಇಲ್ಲ. ಪಕ್ಕದಲ್ಲಿ ಮಗ ಇದ್ದಾನೆ. ಆ ಕಡೆ ಈ ಕಡೆ ಸ್ನೇಹಿತರು ಇದ್ದಾರೆ, ಹಿತೈಷಿಗಳು ಇದ್ದಾರೆ. ಸಿನಿಮಾ ಕಲೀಗ್ಸ್ ಇದ್ದಾರೆ. ಅಷ್ಟೇ ಸಾಕು ಎನ್ನುವ ಮೂಲಕ 2ನೇ ಮದುವೆಯ ಬಗ್ಗೆ ಮತ್ತೆ ಕೇಳಬೇಡಿ ಎಂದು ಪರೋಕ್ಷವಾಗಿ ನುಡಿದಿದ್ದಾರೆ. ‘
ಮೇಘನಾ ರಾಜ್ ಜೊತೆ...
ಇನ್ನು, ನಟಿ ಮೇಘನಾ ರಾಜ್ ಜೊತೆ ವಿಜಯ್ ಅವರ ಮದುವೆ ಎನ್ನುವ ಸುದ್ದಿಯನ್ನು ಹರಡಿ, ಸಾಕಷ್ಟು ಯುಟ್ಯೂಬರ್ಗಳು ಅದನ್ನು ಬಂಡವಾಳವಾಗಿಸಿಕೊಂಡರು. ತಮ್ಮ ಚಾನೆಲ್ಗೆ ವ್ಯೂವ್ಸ್ ಹೆಚ್ಚು ಬರಲಿ ಎನ್ನುವ ಕಾರಣಕ್ಕೆ ಯಾರಯಾರದ್ದೋ ಜೀವನದ ಜೊತೆ ಚೆಲ್ಲಾಟ ಆಡುವುದು ಕೆಲವರಿಗೆ ತುಂಬಾ ಸಲೀಸಾದ ಕೆಲಸ. ಅದರಲ್ಲಿಯೂ ಹೆಸರು ಮಾಡಿದ ಸೆಲೆಬ್ರಿಟಿಗಳ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೂ ಇದ್ದಾರೆ. ಅದೇ ರೀತಿ ವಿಜಯ ರಾಘವೇಂದ್ರ ಮತ್ತು ಮೇಘನಾ ರಾಜ್ ಅವರ ವಿಷಯದಲ್ಲಿಯೂ ಆಗಿದೆ.
ವಿಜಯ ರಾಘವೇಂದ್ರ ಸ್ಪಷ್ಟೀಕರಣ
ಈ ಬಗ್ಗೆ ಕೆಲ ದಿನಗಳ ಹಿಂದೆ ವಿಜಯ ರಾಘವೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದರು. ಈ ವಿಷಯದಲ್ಲಿ ಸ್ಪಷ್ಟೀಕರಣ ಕೊಡುವುದೇ ಹಿಂಸೆ ಆಗುತ್ತದೆ, ಜೊತೆಗೆ ಕೋಪನೂ ಬರುತ್ತದೆ. ಕೆಲವು ಅಭಿಮಾನಿಗಳಿಗೆ ಕನ್ಸರ್ನ್ ಇರುವುದು ತಿಳಿಯುತ್ತದೆ. ಹಾಗೆಂದು ಏನೇನೋ ಸುದ್ದಿಗಳನ್ನು ಹರಡುವಲ್ಲಿ ಅರ್ಥವಿಲ್ಲ. ಎಲ್ಲರಿಗೂ ಅವರ ಕುಟುಂಬ ಕೂಡ ಇರುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನನಗೂ ಮಗ ಇದ್ದಾನೆ. ಇಂಥ ಗಾಸಿಪ್ಗಳೆಲ್ಲಾ ಕುಟುಂದವರ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದು ನೋವಿನಿಂದ ನುಡಿದಿದ್ದರು.
ಮೇಘನಾ ಕುರಿತು ವಿಜಯ ರಾಘವೇಂದ್ರ
ಮೇಘನಾ ಆಗಲಿ ಅಥವಾ ಇನ್ಯಾರೇ ಆಗಲಿ, ಎರಡನೆಯ ಮದುವೆಯ ಬಗ್ಗೆ ಯಾವುದೇ ಸದ್ಯ ಯೋಚನೆಗಳಿಲ್ಲ. ಅವೆಲ್ಲಾ ಸುಮ್ಮನೇ ಗಾಸಿಪ್ಗಳಷ್ಟೇ. ನನ್ನ ಲೈಫ್ನಲ್ಲಿ ಇನ್ನೊಬ್ಬರನ್ನು ಬರಮಾಡಿಕೊಳ್ಳುವುದು ಆಗದೇ ಇರುವ ಕೆಲಸ ಎನ್ನುತ್ತಲೇ ಎರಡನೆಯ ಮದುವೆಯ ವಿಷಯವನ್ನೂ ಅಲ್ಲಗಳೆದಿದ್ದಾರೆ ವಿಜಯ ರಾಘವೇಂದ್ರ. ಇದನ್ನು ಕೇಳಿಯಾದರೂ ಸುಮ್ಮನೇ ಗಾಸಿಪ್ ಹರಡುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ ವಿಜಯ ರಾಘವೇಂದ್ರ ಫ್ಯಾನ್ಸ್.
ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಮದುವೆ
ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು. ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್ ಅವರ ವಿಡಿಯೋಗೆ ಕಮೆಂಟ್ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.