ವೀರ್ ಸಾವರ್ಕರ್ ಆಗಿ ಎಂಟ್ರಿ ಕೊಟ್ಟ ನಟ ಸುನಿಲ್ ರಾವ್: ಲುಕ್ ವೈರಲ್
ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಆಗಿ ನಟ ಸುನಿಲ್ ರಾವ್ ಎಂಟ್ರಿ ಕೊಟ್ಟಿದ್ದಾರೆ.
ಸ್ಯಾಂಡಲ್ ವುಡ್ ನಟ ಸುನಿಲ್ ರಾವ್ ಅನೇಕ ವರ್ಷಗಳ ಬಳಿಕ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ತುರ್ತು ನಿರ್ಗಮನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ರಾವ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಪಾತ್ರದಲ್ಲಿ ಸುನಿಲ್ ರಾವ್ ಕಾಣಿಸಿಕೊಂಡಿದ್ದಾರೆ.
ಹಿರಿಯ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರ ಸಾರಥ್ಯದಲ್ಲಿ ಸಾವರ್ಕರ್ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಸಿನಿಮಾ ಅನೌನ್ಸ್ ಆಗಿತ್ತು. ಆದರೆ ಸಾವರ್ಕರ್ ಆಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಆದರೀಗ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಸುನಿಲ್ ರಾವ್ ನಟಿಸುತ್ತಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ಸಾವರ್ಕರ್ ಲುಕ್ ನಲ್ಲಿ ಸುನಿಲ್ ರಾವ್ ಅನೇಕ ಪೋಸ್ ನೀಡಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಮಹಾತ್ಮ ಗಾಂಧಿ ಪಾತ್ರದಲ್ಲಿ ಹಿಂದಿಯ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಾವರ್ಕರ್ ಬಯೋಪಿಕ್ ಹಿಂದಿಯಲ್ಲಿ ಈಗಾಗಲೇ ಘೋಷಣೆಯಾಗಿದೆ. ಆದರೆ ಅದೇ ಬೇರೆ ಇದೆ ಎನ್ನಲಾಗಿದೆ. ಈಗಾಗಲೇ ಸಾವರ್ಕರ್ ಸಿನಿಮಾಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡುತ್ತಿದೆ ಸಿನಿಮಾತಂಡ.
ನಟ ಸುನಿಲ್ ರಾವ್ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದು ಫೋಟೋಶೂಟ್ಗೆ ಮಸ್ತ್ ಪೋಸ್ ನೀಡಿದ್ದಾರೆ. ಆದಷ್ಟು ನೈಜವಾಗಿ ಸಿನಿಮಾ ಮೂಡಿ ಬರುವಂತೆ ಚಿತ್ರತಂಡ ಪ್ಲಾನ್ ಮಾಡಿದ್ದು ದೊಡ್ಡ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದೆ.
ಸಾವರ್ಕರ್ ಸಿನಿಮಾದಲ್ಲಿ ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಸದ್ಯ ಫಸ್ಟ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಸಿನಿಮಾತಂಡ ಕುತೂಹಲ ಹೆಚ್ಚಿಸಿದೆ. ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕಾದುನೋಡಬೇಕಿದೆ.