ನಟ ಚಿಕ್ಕಣ್ಣ ಅವರು ತಮ್ಮ ಸಿನಿಮಾ ಪಯಣದಲ್ಲಿ ನಟ ಯಶ್‌ ಹೆಚ್ಚು ಪ್ರಭಾವ ಬೀರಿದ್ದಾರೆ ಎಂದು ಹೇಳಿದ್ದಾರೆ. ‘ಲಕ್ಷ್ಮೀಪುತ್ರ’ ಚಿತ್ರದ ಮೂಲಕ ಎರಡನೇ ಬಾರಿಗೆ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

* ಹೀರೋ ಆಗಿ ಎರಡನೇ ಬಾರಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ. ಇದನ್ನು ಸಂಭ್ರಮವಾಗಿ ನೋಡುತ್ತೀರಾ, ಜವಾಬ್ದಾರಿಯಾಗಿ ನೋಡುತ್ತೀರಾ?

ಖುಷಿಯಿದೆ. ಜೊತೆಗೆ ಒತ್ತಡ, ಭಯವೂ ಇದೆ. ಹೀರೋ ಆಗುವುದು ದೊಡ್ಡ ಜವಾಬ್ದಾರಿ. ಚಿತ್ರರಂಗದ ಅನುಭವ ಪಡೆದ ನಂತರವೇ ನಾಯಕನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಈಗ ಆ ಜವಾಬ್ದಾರಿಯನ್ನು ಅರಿತುಕೊಂಡಿದ್ದೇನೆ. ನಮ್ಮ ಚಿತ್ರದ ಟ್ರೇಲರ್‌ಗೆ ಪಾಸಿಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರರಂಗದಲ್ಲೂ ‘ಲಕ್ಷ್ಮೀಪುತ್ರ’ದ ಬಗ್ಗೆ ನಿರೀಕ್ಷೆಗಳಿವೆ. ಸಂಭ್ರಮ ಎನ್ನುವುದು ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರು ಮೆಚ್ಚಿಕೊಂಡಾಗ. ಅದಕ್ಕಾಗಿಯೇ ಕಾಯುತ್ತಿದ್ದೇನೆ.

* ಕಾಮಿಡಿ ನಟರಾಗಿದ್ದವರು ಹೀರೋ ಆಗಿದ್ದೀರಿ. ಸಂಭಾವನೆಯೂ ಹೆಚ್ಚಾಗಿದೆಯೇ?

ನನ್ನ ಪ್ರಕಾರ ದುಡ್ಡಿಗಾಗಿ ಸಿನಿಮಾ ಮಾಡಬಾರದು. ಒಳ್ಳೆಯ ಸಿನಿಮಾ ಕೊಟ್ಟರೆ ದುಡ್ಡು ತಾನಾಗಿಯೇ ಬರುತ್ತದೆ. ಅಂಥ ಒಳ್ಳೆಯ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ ಎನ್ನುವುದೇ ನನಗೆ ತೃಪ್ತಿ.

* ಕಾಮಿಡಿ ನಟನಾಗಿ ಗುರುತಿಸಿಕೊಂಡಿರುವ ನಿಮ್ಮನ್ನು ಪ್ರೇಕ್ಷಕರು ನಾಯಕನಾಗಿಯೂ ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಹೇಗೆ ಮೂಡಿತು?

ನನ್ನ ಜರ್ನಿಯನ್ನು ಗಮನಿಸುತ್ತಿದ್ದ ಆತ್ಮೀಯರು ಸೇರಿದಂತೆ ಸಾಕಷ್ಟು ಜನರು ನಾಯಕನಾಗುವಂತೆ ಪ್ರೋತ್ಸಾಹಿಸುತ್ತಿದ್ದರು. ಅದೇ ಸಮಯಕ್ಕೆ ‘ಉಪಾಧ್ಯಕ್ಷ’ ಚಿತ್ರದ ಕತೆ ಬಂತು. ಆ ಕತೆ ನನಗೆ ಹೇಳಿ ಮಾಡಿಸಿದಂತಿತ್ತು. ಶೀರ್ಷಿಕೆಯೂ ನನಗೆ ಸೂಕ್ತವೆನಿಸಿತು. ಹೀಗೆ ಕತೆ ಮತ್ತು ಟೈಟಲ್ ಎರಡೂ ನಾಯಕನಾಗುವ ನಿರ್ಧಾರಕ್ಕೆ ಪ್ರೇರಣೆ ನೀಡಿದವು.

* ‘ಲಕ್ಷ್ಮೀಪುತ್ರ’ದಲ್ಲಿ ನಿಮ್ಮ ಕಾಮಿಡಿ ಶೈಲಿಯ ಜತೆಗೆ ಹೊಸ ಬಗೆಯ ಪಾತ್ರವನ್ನೂ ನೋಡಬಹುದೇ?

ನನ್ನ ಪ್ಲೇವರ್‌ನ ಕಾಮಿಡಿ ಖಂಡಿತ ಇದೆ. ಅದರ ಜತೆಗೆ ಹೊಸ ಇಮೇಜ್‌ನಲ್ಲಿ ಕಾಣಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದೇನೆ. ಮೊದಲ ಬಾರಿಗೆ ಭಾವನಾತ್ಮಕ ದೃಶ್ಯಗಳಲ್ಲೂ ನಟಿಸಿದ್ದೇನೆ. ಇದು ನನಗೆ ಹೊಸ ಅನುಭವ. ನನ್ನನ್ನು ಕಾಮಿಡಿ ನಟನಾಗಿ ನೋಡಿದ ಪ್ರೇಕ್ಷಕರು ಭಾವುಕ ದೃಶ್ಯಗಳಲ್ಲೂ ಒಪ್ಪಿಕೊಳ್ಳುತ್ತಾರೆಯೇ ಎಂಬ ಕುತೂಹಲವಿದೆ.

* ನಾಯಕನಾಗಿ ನಟಿಸುವಾಗ ಎದುರಾದ ದೊಡ್ಡ ಸವಾಲು ಯಾವುದು?

ಮೊದಲನೆಯದಾಗಿ ಸುತ್ತಮುತ್ತಲಿನವರ ಮಾತುಗಳನ್ನು ಎದುರಿಸುವುದು. ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಾಗ ಥಿಯೇಟರ್‌ಗಳು, ಕಲೆಕ್ಷನ್‌, ಪ್ರೇಕ್ಷಕರ ಪ್ರತಿಕ್ರಿಯೆ ಹೀಗೆ ಹಲವು ವಿಚಾರಗಳ ಒತ್ತಡ ಇರುತ್ತದೆ. ಕ್ಯಾರೆಕ್ಟರ್‌ ಆರ್ಟಿಸ್ಟ್‌ ಆಗಿದ್ದಾಗ ಟೆನ್ಷನ್‌ ಫ್ರೀ ಆಗಿರಬಹುದು. ಆದರೆ ಹೀರೋ ಆದ ಮೇಲೆ ಹಾಗಿರಲು ಸಾಧ್ಯವಿಲ್ಲ. ಜವಾಬ್ದಾರಿ ಹೆಚ್ಚಾಗುತ್ತದೆ.

* ನಿಮ್ಮ ಚಿತ್ರರಂಗದ ಪಯಣದಲ್ಲಿ ಯಾರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಹೆಚ್ಚು ಪ್ರಭಾವ ಬೀರಿದೆ?

ಮಾರ್ಗದರ್ಶನ ನೀಡಿದವರ ಪಟ್ಟಿಯಲ್ಲಿ ತುಂಬಾ ಜನರಿದ್ದಾರೆ. ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯಲ್ಲಿ ನೆರವಾಗಿದ್ದಾರೆ. ಆದರೆ ನನ್ನ ಸಿನಿಮಾ ಪಯಣದಲ್ಲಿ ಹೆಚ್ಚು ಪ್ರಭಾವ ಬೀರಿದವರು ಯಶ್‌ ಅವರು. ಹಾಗಾಗಿ ಅವರನ್ನು ಯಾವತ್ತಿಗೂ ಮರೆಯುವುದಿಲ್ಲ.

* ‘ಲಕ್ಷ್ಮೀಪುತ್ರ’ ನಿಮ್ಮ ವೃತ್ತಿಜೀವನಕ್ಕೆ ಯಾವ ರೀತಿಯ ತಿರುವು ನೀಡಬಹುದು?

ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಚಿತ್ರಮಂದಿರಕ್ಕೆ ಕರೆತರುವ ಗುಣ ಇದರಲ್ಲಿದೆ. ಹಾಗಾಗಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಸಿನಿಮಾ ನನ್ನ ವೃತ್ತಿಜೀವನಕ್ಕೆ ಮತ್ತೊಂದು ತಿರುವು ನೀಡಿ, ಎರಡ್ಮೂರು ಮೆಟ್ಟಿಲು ಮೇಲೇರಲು ನೆರವಾಗುತ್ತದೆ ಎಂಬ ನಂಬಿಕೆಯಿದೆ.

* ಮುಂದಿನ ಸಿನಿಮಾ ಯೋಜನೆಗಳೇನು?

‘ಜೋಡೆತ್ತು’ ಸಿನಿಮಾ ಇದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಇದರ ಜತೆಗೆ ಎರಡ್ಮೂರು ಕತೆಗಳನ್ನು ಕೇಳಿದ್ದೇನೆ. ಎಲ್ಲವೂ ಚೆನ್ನಾಗಿವೆ. ಸದ್ಯದಲ್ಲೇ ಅವುಗಳನ್ನು ಘೋಷಿಸುತ್ತೇನೆ. ನಾಯಕನಾಗಿ ವರ್ಷಕ್ಕೆ ಎರಡು ಸಿನಿಮಾ ಮಾಡುವ ಯೋಜನೆಯಿದೆ.

* ಹಾಗಾದರೆ ಇನ್ನು ಕ್ಯಾರೆಕ್ಟರ್‌ ರೋಲ್‌ಗಳಲ್ಲಿ ನಟಿಸುವುದಿಲ್ಲವೇ?

ನಾನು ನಟಿಸುತ್ತೇನೆ ಎಂದರೂ ನಿರ್ಮಾಪಕರು ಒಪ್ಪುವುದಿಲ್ಲ. ಯಾಕೆಂದರೆ ನಾಯಕನಾಗಿ ನಟಿಸುತ್ತಿರುವಾಗ ಬೇರೆ ಚಿತ್ರಗಳಲ್ಲಿ ಕ್ಯಾರೆಕ್ಟರ್‌ ರೋಲ್‌ ಮಾಡಿದರೆ ನನ್ನನ್ನು ನಾಯಕನನ್ನಾಗಿ ಪರಿಚಯಿಸಿದ ನಿರ್ಮಾಪಕರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಪ್ರೇಕ್ಷಕರು ನನ್ನನ್ನು ವಿಶೇಷವಾಗಿ ನೋಡಲು ಬರುವಂತಾಗಬೇಕು. ಎಲ್ಲ ಚಿತ್ರಗಳಲ್ಲೂ ಕಾಣಿಸಿಕೊಂಡರೆ ಆ ವಿಶೇಷತೆ ಉಳಿಯುವುದಿಲ್ಲ.

* ನಟನೆ ಹೊರತಾಗಿ ನಿರ್ದೇಶನ, ನಿರ್ಮಾಣದ ಆಸಕ್ತಿಯೂ ಇದೆಯೇ?

ಖಂಡಿತ ಇದೆ. ಅಷ್ಟೋ ಇಷ್ಟೋ ಬರವಣಿಗೆಯ ಜ್ಞಾನವಿದೆ. ನಿರ್ದೇಶನ ಮತ್ತು ನಿರ್ಮಾಣದ ಬಗ್ಗೆಯೂ ಆಸಕ್ತಿಯಿದೆ. ಮುಂದೆ ನೋಡೋಣ.