- Home
- Entertainment
- Sandalwood
- ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ Sonu Nigam: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ
ಕನ್ನಡಿಗರನ್ನು ಉಗ್ರ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್, ಇದೀಗ ಕನ್ನಡಿಗರ ಕ್ಷಮೆ ಕೋರಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕನ್ನಡಿಗರು ನನ್ನ ಕುಟುಂಬದವರು ಎಂದಿದ್ದಲ್ಲದೆ, 'ಅನಿಸುತಿದೆ ಯಾಕೋ ಇಂದು' ಹಾಡನ್ನು ಹಾಡಿ ರಂಜಿಸಿದ್ದಾರೆ.

ಸುಮಧುರ ಕಂಠದ ಕಲಾವಿದ
ತಮ್ಮ ಅದ್ಭುತ ಕಂಠದಿಂದಲೇ ಖ್ಯಾತಿ ಪಡೆದಿರುವ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಕೊಟ್ಟವರು ಬಾಲಿವುಡ್ ಗಾಯಕ ಸೋನು ನಿಗಮ್. ಮುಂಗಾರು ಮಳೆ ಸಿನಿಮಾಕ್ಕೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳು ಇಂದಿಗೂ ಸೂಪರ್ ಹಿಟ್ಟೇ. ಆದರೆ, ಕೆಲ ತಿಂಗಳ ಹಿಂದೆ, 'ಪಹಲ್ಗಾಮ್ ದಾಳಿಯಾಗಿದ್ದು ಕನ್ನಡದಿಂದಲೇ' ಎಂಬರ್ಥ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿಸಿಕೊಂಡಿದ್ದರು ಸೋನು.
ಪೆಹಲ್ಗಾಮ್ ದಾಳಿಗೆ ಹೋಲಿಕೆ
ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದು ಕನ್ನಡದ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿ ಕುಚೇಷ್ಟೆ ಮೆರೆದಿದ್ದರು. ಇದರ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ ನಂತರ, ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಪುಂಡರು ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಬಳಿಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ನಡೆದು, ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಲಾಗಿತ್ತು.
ಕನ್ನಡಿಗರಿಗೆ ಶರಣು
ಕನ್ನಡ, ಕನ್ನಡಿಗರನ್ನು ಹಗುರವಾಗಿ ಭಾವಿಸಿದ್ದ ಸೋನು ನಿಗಮ್ ಅವರಿಗೆ ಇದೀಗ ಕನ್ನಡ, ಕನ್ನಡಿಗರ ತಾಕತ್ತು ಏನು ಎಂದು ತಿಳಿದಿದೆ. ಕನ್ನಡಿಗರ ಮುಂದೆ ತಲೆಬಾಗಿ ಶರಣಾಗಿದ್ದಾರೆ. ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿರುವ ಸೋನು ನಿಗಮ್ ಅವರು, ಕನ್ನಡವನ್ನು ಹಾಡಿ ಕೊಂಡಾಡಿದ್ದಾರೆ.
ಕನ್ನಡಿಗರು ನನ್ನ ಕುಟುಂಬ
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಅವರು ಪಾಲ್ಗೊಂಡು, ಮೊದಲಿಗೆ ಕನ್ನಡಿಗರ ಕ್ಷಮೆ ಕೋರಿದು. ಬಳಿಕ, ಕನ್ನಡಿಗರು ನನ್ನ ಕುಟುಂಬವರು ಎಂದು ಪೀಠಿಕೆ ಇಡುತ್ತಲೇ, ಅವರ ಫೇಮಸ್ ಹಾಡು, ಅನಿಸುತಿದೆ ಯಾಕೋ ಇಂದು ಹಾಡು ಹೇಳಿದರು. ಹಿಂದಿಯ ಎಲ್ಲಾ ಗಾಯನಕ್ಕಿಂತಲೂ ಇದು ತುಂಬಾ ಅದ್ಭುತ ಗಾಯನ ಎಂದು ಅದರ ಫುಲ್ ಹಾಡನ್ನು ಹೇಳುವ ಮೂಲಕ ಅಲ್ಲಿ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಆ ಜನಸಂದಣಿಯಲ್ಲಿ ಕಳೆದುಹೋದ ಬಾಲಕನನ್ನು ಪೋಷಕರಿಗೆ ಒಪ್ಪಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಎರಡು ದಿನಗಳ ಉತ್ಸವ
ಅಂದಹಾಗೆ ಹುಬ್ಬಳ್ಳಿಯ ಕುಸಗಲ್ ರೋಡ್ ಮೈದಾನದಲ್ಲಿ ಧಾರವಾಡ ಸಂಸದ ಕ್ರೀಡಾ ಮತ್ತು ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಗಾಳಿಪಟ ಉತ್ಸವವನ್ನು ಎರಡು ದಿನ ಆಯೋಜಿಸಲಾಗಿತ್ತು. ಸಂಸದ ಪ್ರಹ್ಲಾದ ಜೋಶಿ ಅವರು ಉದ್ಘಾಟನೆ ಮಾಡಿದ್ದರು.
ವಿವಿಧ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಗಾಳಿಪಟ ತಯಾರಿಕೆ, ಮುಖವರ್ಣ ಕಲೆ, ವಿವಿಧ ನೃತ್ಯಗಳು, ಸಣ್ಣಕಥೆ ಹೇಳುವುದು, ಫ್ರೀ ಹ್ಯಾಂಡ್ ಮೆಹಂದಿ, ಲಗೋರಿ, ಹಗ್ಗ ಜಗ್ಗಾಟ, ಯೋಗ, ಮಲ್ಲಕಂಬ, ಚಿನ್ನಿ-ದಾಂಡು ಹಾಗೂ ಗೋಣಿಚೀಲ ಜಿಗಿತ ಸೇರಿದಂತೆ ವಿವಿಧ ದೇಶಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ರಾಯಣ್ಣ ಫಿಲ್ಮ್ನಲ್ಲಿ ಸೋನು ನಿಗಮ್ ಅಂದು ಇಂದು ಶೇರ್ ಮಾಡಲಾಗಿದೆ. ಇಲ್ಲಿದೆ ನೋಡಿ ಲಿಂಕ್
https://www.threads.com/@rayanna_films_/post/DUkospnCdG0?xmt=AQF0l7GKzp-DxWYOr8MmT6AL97O1O4oXx8k-qy75NKDGfw
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

