ಹೊಸ ಸಾಹಸಕ್ಕಿಳಿದ ಶೈನ್ ಶೆಟ್ಟಿ; ಶಂಕರಾಭರಣ ಬಸ್ ಹತ್ತಿದ Bigg Boss 7 ವಿಜೇತ!
Actor Shine Shetty Movie: ರಂಗಸ್ಥಳ ಸ್ಟುಡಿಯೋಸ್ ನಿರ್ಮಾಣದ ಹೊಸ ಕನ್ನಡ ಸಿನಿಮಾ ಶಂಕರಾಭರಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶೈನ್ ಶೆಟ್ಟಿ, ದಿವಾಕರ್ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಈ ಸಿನಿಮಾದ ಕಥೆ ಏನು?
ಕರಾವಳಿ ಕರ್ನಾಟಕದ ಬದುಕಿನ ನೈಜತೆ ಮತ್ತು ಮಣ್ಣಿನ ಸುವಾಸನೆಯನ್ನು ಹೊತ್ತಿರುವ ಈ ಕಥೆಯ ಮಧ್ಯದಲ್ಲಿ ಒಂದು ಬಸ್ ಚಾಲಕ ಮತ್ತು ಅವನ ಬಸ್ “ಶಂಕರಾಭರಣ.” ದೂರದ ಹಳ್ಳಿಗೆ ಹೊಸ ಮಾರ್ಗ ನೀಡಲ್ಪಟ್ಟಾಗ, ಅದು ಕೇವಲ ಕೆಲಸದ ಬದಲಾವಣೆ ಅಲ್ಲ; ಅದು ಬದುಕಿನ ಪ್ರಯಾಣವಾಗುತ್ತದೆ. ಮಾರ್ಗದಲ್ಲಿ ಎದುರಾಗುವ ಸವಾಲುಗಳು, ಮೌನ ಹೊಣೆಗಾರಿಕೆಗಳು ಮತ್ತು ಸಿಕ್ಕುವ ಮಾನವೀಯ ಸಂಬಂಧಗಳು ಅವನ ಜೀವನವನ್ನು ರೂಪಿಸುತ್ತವೆ.
ಉಡುಪಿ-ಮಂಗಳೂರು ಭಾಗದ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಹಾಸ್ಯವನ್ನು ಪ್ರಾಮಾಣಿಕವಾಗಿ ತೆರೆಗೆ ತರುವ ಪ್ರಯತ್ನ ಈ ಚಿತ್ರದಲ್ಲಿದೆ. ಜೋರಾಗಿ ಮಾತನಾಡದರೂ ಜಗತ್ತನ್ನೇ ಹೊತ್ತು ನಡೆಯುವ ಮನುಷ್ಯರ ಕಥೆ ಇದು.
ದೇಶ-ವಿದೇಶಗಳಲ್ಲಿ ಮೆಚ್ಚುಗೆ
ಒಂದು ಮೊಟ್ಟೆಯ ಕಥೆ, ಜೇಮ್ಸ್ ಮತ್ತು ಕಾಂತಾರ ಸಿನಿಮಾಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿರುವ ಶೈನ್, ಈ ಸಿನಿಮಾದಲ್ಲಿ ಭಾವನಾತ್ಮಕ ಗಾಢತೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸುಮಂತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅವರ ಮೊದಲ ಸಿನಿಮಾ ಮಿಥ್ಯ ದೇಶ-ವಿದೇಶದ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರದಲ್ಲಿ ಅವರು ನೈಜ ಮತ್ತು ಪಾತ್ರಕೇಂದ್ರಿತ ಕಥನವನ್ನು ಮುಂದಿಟ್ಟಿದ್ದಾರೆ.
ಚರಣ್ ರಾಜ್ ಸಂಗೀತ
ಚರಣ್ ರಾಜ್ ಸಂಗೀತವನ್ನು ನೀಡಿದ್ದಾರೆ. ಬಹು ಪ್ರಶಸ್ತಿ ವಿಜೇತರಾದ ಅವರ ಸಂಗೀತ ಈ ಕಥೆಯ ಭಾವನಾತ್ಮಕ ಅಂತರಾಳವನ್ನು ಮತ್ತಷ್ಟು ಗಾಢಗೊಳಿಸುವ ನಿರೀಕ್ಷೆ ಇದೆ. ಉದಿತ್ ಖುರಾನಾ ಛಾಯಾಗ್ರಹಣವನ್ನು ನಿರ್ವಹಿಸಿದ್ದು, ಕರಾವಳಿಯ ಸೌಂದರ್ಯವನ್ನು ಜೀವಂತವಾಗಿ ತೆರೆಗೆ ತರಲು ವಿಶೇಷ ಗಮನ ಹರಿಸಲಾಗಿದೆ.
ಶೈನ್ ಶೆಟ್ಟಿ ಏನಂತಾರೆ?
ಶಂಕರಾಭರಣ – ಇದು ವೇಗದ ಕಥೆ ಅಲ್ಲ. ಇದು ಬದುಕಿನ ದಾರಿಯ ಕಥೆ. “ರಂಗಸ್ಥಳ ಸ್ಟುಡಿಯೋಸ್ ಮೂಲಕ ನಮ್ಮ ಉದ್ದೇಶ ನೈಜ ಹಾಗೂ ಹೃದಯಸ್ಪರ್ಶಿ ಕಥೆಗಳನ್ನು ಹೇಳುವುದು,” ಎಂದು ನಿರ್ಮಾಪಕರಾದ ಶೈನ್ ಶೆಟ್ಟಿ ಮತ್ತು ದಿವಾಕರ್ ಶೆಟ್ಟಿ ತಿಳಿಸಿದ್ದಾರೆ. 'ಶಂಕರಾಭರಣ' ನಮ್ಮ ಮಣ್ಣಿನಿಂದ ಬಂದ ಕಥೆ. ಮೌನವಾಗಿ ಬದುಕನ್ನೇ ಹೊತ್ತು ನಡೆಯುವ ಸಾಮಾನ್ಯ ಮನುಷ್ಯರಿಗೆ ಇದು ಗೌರವ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

