ಸಂಜು ವೆಡ್ಸ್ ಗೀತಾ 2 ಕತೆ ಕೊಟ್ಟಿದ್ದು ಕಿಚ್ಚ ಸುದೀಪ್: ನಿರ್ದೇಶಕ ನಾಗಶೇಖರ್
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ, ಛಲವಾದಿ ಕುಮಾರ್ ನಿರ್ಮಾಣದ ‘ಸಂಜು ವೆಂಡ್ಸ್ ಗೀತಾ 2’ ಚಿತ್ರದ ಎರಡನೇ ಹಾಡನ್ನು ಸುದೀಪ್ ಬಿಡುಗಡೆ ಮಾಡಿದರು.
ನನಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಪ್ರೇಮ ಕತೆಯ ಎಳೆಯನ್ನು ಕೊಟ್ಟಿದ್ದೇ ನಟ ಸುದೀಪ್ ಅವರು. ನಾನು ಇಂಥ ಕತೆಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡುತ್ತೇನೆಂದು ಮೆಚ್ಚಿಕೊಂಡು ಕತೆ ಕೊಟ್ಟರು.
ಹೀಗೆ ಹೇಳಿದ್ದು ನಿರ್ದೇಶಕ ನಾಗಶೇಖರ್. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ, ಛಲವಾದಿ ಕುಮಾರ್ ನಿರ್ಮಾಣದ ‘ಸಂಜು ವೆಂಡ್ಸ್ ಗೀತಾ 2’ ಚಿತ್ರದ ಎರಡನೇ ಹಾಡನ್ನು ಸುದೀಪ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಾಗಶೇಖರ್, ‘ಜ.10ಕ್ಕೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಈ ಕತೆಯನ್ನು ಸುದೀಪ್ ನನಗೆ ಕೊಟ್ಟಿದ್ದು ‘ಮಾಣಿಕ್ಯ’ ಶೂಟಿಂಗ್ ಸಂದರ್ಭದಲ್ಲಿ. ಅವರು ಕೊಟ್ಟ ಪ್ರೇಮ ಕತೆಗೆ ಶಿಡ್ಲಘಟ್ಟದ ನೈಜ ಘಟನೆಗಳನ್ನು ಸೇರಿಸಿದ್ದೇನೆ’ ಎಂದರು.
ನಿರ್ಮಾಪಕ ಛಲವಾದಿ ಕುಮಾರ್, ‘ನವಿರಾದ ಪ್ರೇಮದ ಜತೆ ರೈತರ ಕತೆಯನ್ನು ಒಳಗೊಂಡ ಈ ಚಿತ್ರವು ಡಾ ರಾಜ್‌ಕುಮಾರ್ ಅವರ ‘ಬಂಗಾರದ ಮನುಷ್ಯ’ ಚಿತ್ರವನ್ನು ನೆನಪಿಸುತ್ತದೆ’ ಎಂದರು. ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ನಟಿಸಿದ್ದಾರೆ.
ಸಂಜು ವೆಡ್ಸ್ ಗೀತಾ 2 ಚಿತ್ರದ ಹಾಡು ಚೆನ್ನಾಗಿದೆ: ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಕಾಂಬಿನೇಶ್‌ನ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ‘ಅವನು ಸಂಜು ಅವಳು ಗೀತಾ’ ಎಂದು ಸಾಗುವ ಶೀರ್ಷಿಕೆ ಹಾಡನ್ನು ಉಪೇಂದ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರು, ‘ಈ ಚಿತ್ರದ ಕತೆ ಕೇಳಿದಾಗಲೇ ಈ ಸಿನಿಮಾ ಸೂಪರ್ ಹಿಟ್ ಆಗೋದು ನೂರಕ್ಕೆ ನೂರು ಗ್ಯಾರಂಟಿ ಅಂತ ಹೇಳಿದ್ದೆ. ಈಗ ಹಾಡು ನೋಡಿದ ಮೇಲೆ ನನ್ನ ಮಾತು ನಿಜವಾಗುತ್ತದೆ ಎಂಬ ನಂಬಿಕೆ ಬಂದಿದೆ. ಹಾಡು ತುಂಬಾ ಚೆನ್ನಾಗಿ ಬಂದಿದೆ’ ಎಂದರು.
ನಿರ್ದೇಶಕ ನಾಗಶೇಖರ್, ‘ಈಗ ಬಿಡುಗಡೆ ಆಗಿರುವ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ’ ಎಂದರು. ಶ್ರೀನಗರ ಕಿಟ್ಟಿ, ‘ಮೊದಲ ಬಾರಿಗೆ ರೇಶ್ಮೆ ಬೆಳೆಗಾರನ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು. ಛಲವಾದಿ ಕುಮಾರ್ ನಿರ್ಮಾಣದ ಚಿತ್ರವಿದು.