- Home
- Entertainment
- Sandalwood
- ಅಸಲಿ ಆಟ ಈಗ ಶುರು... ಹುಟ್ಟುಹಬ್ಬದ ದಿನವೇ ಗುಡ್ ನ್ಯೂಸ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್
ಅಸಲಿ ಆಟ ಈಗ ಶುರು... ಹುಟ್ಟುಹಬ್ಬದ ದಿನವೇ ಗುಡ್ ನ್ಯೂಸ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್
ಕೃಷ್ಣಂ ಪ್ರಣಯ ಸಖಿ ಭಾಗ 2 ಆರಂಭವಾಗುತ್ತಿದೆ. ಬಹದ್ದೂರ್ ಚೇತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುನೇಗೌಡ ನಿರ್ಮಾಪಕರು.

ಗೋಲ್ಡನ್ ಸ್ಟಾರ್ ಗಣೇಶ್ ಇಂದು (ಜು.2) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ಕೃಷ್ಣಂ ಪ್ರಣಯಸಖಿ’ ಗೆಲುವಿನ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿರುವ ಅವರ ಕೈಯಲ್ಲಿ ಪ್ರಸ್ತುತ ಐದಾರು ಸಿನಿಮಾಗಳಿವೆ. ಇದೇ ಖುಷಿಯಲ್ಲಿ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಅವರ ಹುಟ್ಟುಹಬ್ಬ ಪ್ರಯುಕ್ತ ಕೆಲವು ಸಿನಿಮಾ ಘೋಷಣೆಯಾಗಿದೆ. ಇನ್ನು ಕೆಲವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಒಂದು ಸಿನಿಮಾ ಶೀರ್ಷಿಕೆ ಘೋಷಣೆಯಾಗಿದೆ. ವಿಶೇಷವಾಗಿ ‘ಕೃಷ್ಣಂ ಪ್ರಣಯ ಸಖಿ’ ಭಾಗ 2 ಆರಂಭವಾಗುತ್ತಿದೆ. ಬಹದ್ದೂರ್ ಚೇತನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುನೇಗೌಡ ನಿರ್ಮಾಪಕರು.
ಅರಸು ಅಂತಾರೆ ನಿರ್ದೇಶನದ, ಗಣೇಶ್ ನಟನೆಯ ಚಿತ್ರದ ‘ಡಿಜಾಂಗೋ ಕೃಷ್ಣಮೂರ್ತಿ’ ಎಂಬ ಶೀರ್ಷಿಕೆ ಬಿಡುಗಡೆಯಾಗಿದೆ. ಈ ಕುರಿತು ಅರಸು ಅಂತಾರೆ, ‘ಮೈಸೂರು, ಮಂಡ್ಯದಲ್ಲಿ ವಿಚಿತ್ರವಾಗಿ ಆಡುವವರಿಗೆ ಡಿಸ್ಕ್ ಡಿಜಾಂಗೋ ಅಂತ ಕರೀತಾರೆ. ನಾವು ಕಾಲೇಜಲ್ಲಿರುವಾಗ ಇಂಥ ಹೆಸರು ಫೇಮಸ್ ಇರ್ತಿತ್ತು. ಈ ಡಿಜಾಂಗೋ ಜೊತೆಗೆ ಕೃಷ್ಣಮೂರ್ತಿ ಸೇರಿಸಿದ್ದೇವೆ. ಚಿತ್ರದ ಶೂಟಿಂಗ್ ಶೇ.40ರಷ್ಟು ಕಂಪ್ಲೀಟ್ ಆಗಿದೆ’ ಎನ್ನುತ್ತಾರೆ.
ಎಆರ್ ವಿಖ್ಯಾತ್ ನಿರ್ದೇಶನದ ‘ಯುವರ್ಸ್ ಸಿನ್ಸಿಯರ್ಲೀ ರಾಮ್’ ಚಿತ್ರತಂಡ ಗಣೇಶ್ ಅವರ ಆಂಜನೇಯ ಲುಕ್ ರಿಲೀಸ್ ಮಾಡಿದೆ. ಸೈಕಲ್ ಮೇಲೆ ಆಂಜನೇಯ ಹಿಂದೆ ಕೂತಿದ್ದರೆ, ರಾಮನ ವೇಷದಲ್ಲಿ ಮತ್ತೋರ್ವ ನಾಯಕ ನಟ ರಮೇಶ್ ಅರವಿಂದ್ ಇದ್ದಾರೆ. ಹಿನ್ನೆಲೆಯಲ್ಲಿ ವಿಶಾಲ ಕಾಶ್ಮೀರ ಇದೆ. ಈ ಕುರಿತು ವಿಖ್ಯಾತ್, ‘ನೆಕ್ಸ್ಟ್ ಶೆಡ್ಯೂಲ್‌ಗಾಗಿ ಕಾಶ್ಮೀರಕ್ಕೆ ಹೋಗುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡುತ್ತಿದ್ದೇವೆ’ ಎಂದಿದ್ದಾರೆ. ಇದರ ಜೊತೆಗೆ ‘ಪಿನಾಕ’ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
ಮನೆ ಹತ್ರ ಬರಬೇಡಿ, ಕಷ್ಟದಲ್ಲಿರುವವರಿಗೆ ನೆರವಾಗಿ: ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಗಣೇಶ್ ನಿರ್ಧರಿಸಿದ್ದಾರೆ. ಈ ಕುರಿತು ಅವರು, ‘ಈ ಬಾರಿ ನಾನು ‘ಪಿನಾಕ’ ಹಾಗೂ ‘ಯುವರ್ಸ್ ಸಿನ್ಸಿಯರ್ಲೀ ರಾಮ್’ ಚಿತ್ರಗಳ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ನಿಮ್ಮನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರಣ ಯಾರೂ ಮನೆಯ ಬಳಿ ಬರದೆ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಇದ್ದಲ್ಲಿಂದಲೇ ಆಶೀರ್ವದಿಸಬೇಕು’ ಎಂದು ಹೇಳಿದ್ದಾರೆ.