- Home
- Entertainment
- Sandalwood
- 'ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..' ಸಂಜುಗೆ ಕೈಕೊಟ್ಟ ಗೀತಾ 'ರಚಿತಾ ರಾಮ್' ರಿಯಾಕ್ಷನ್!
'ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..' ಸಂಜುಗೆ ಕೈಕೊಟ್ಟ ಗೀತಾ 'ರಚಿತಾ ರಾಮ್' ರಿಯಾಕ್ಷನ್!
ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರದಲ್ಲಿ ಭಾಗಿಯಾಗದಿರುವುದು ಮತ್ತು ಉಪ್ಪಿ ರುಪೀ ಸಿನಿಮಾಕ್ಕೆ ಹಣ ಪಡೆದು ದಿನಾಂಕ ನೀಡದಿರುವ ಆರೋಪಗಳಿಗೆ ರಚಿತಾ ರಾಮ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ರಚಿತಾ ರಾಮ್ ಖಂಡಿಸಿದ್ದಾರೆ.

ಸಂಜು ವೆಡ್ಸ್ ಗೀತಾ-2 ಸಿನಿಮಾದ ಪ್ರಮೋಷನ್‌ಗೆ ಭಾಗಿಯಾಗದ ಕುರಿತು ನಿರ್ದೇಶಕ ನಾಗಶೇಖರ್ ಅವರಿಂದ ಆರೋಪ ಬಂದ ಬೆನ್ನಲ್ಲಿಯೇ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಮಾಡುವ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ತಿರುಗೇಟು ನೀಡಿದ್ದಾರೆ.
ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗದೇ ಇರೋದು ಹಾಗೂ ಉಪ್ಪಿ ರುಪೀ ಸಿನಿಮಾಗೆ ಹಣ ತೆಗೆದುಕೊಂಡು ಡೇಟ್ಸ್ ನೀಡಿಲ್ಲ ಅನ್ನೋದರ ಬಗ್ಗೆ ರಚಿತಾ ಮಾತನಾಡಿದ್ದು, ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.
ಈ ಬಗ್ಗೆ ಅವರು ಮಾಡಿರುವ ವಿಡಿಯೋದ ಸಾಲುಗಳು ಇಲ್ಲಿವೆ.
ಈಗ ಒಂದು ವಾರದಿಂದ ನಡೆಯುತ್ತಿರುವ ವಿಚಾರ. ನನ್ನ ಮೇಲೆ ಬಂದಿರುವಂಥ ಎರಡು ಆರೋಪಗಳ ಬಗ್ಗೆ ನಾನಿಲ್ಲಿ ಮಾತನಾಡುತ್ತಿದ್ದೇನೆ. ಅದಕ್ಕಾಗಿ ಈ ವಿಡಿಯೋ ಮಾಡಿದ್ದೇನೆ.
ಮೊದಲಿಗೆ ನಾನು ಸಂಜು ವೆಡ್ಸ್ ಗೀತಾ-2 ಸಿನಿಮಾದಿಂದ ಆರಂಭ ಮಾಡುತ್ತೇನೆ. ನನ್ನ ತಂಡ ಅಂದರೆ, ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಇತ್ತೀಚೆಗೆ ಹಲವು ಪತ್ರಿಕಾಗೋಷ್ಠಿಗಳಲ್ಲಿ ಒಂದಷ್ಟು ವಿಚಾರಗಳನ್ನು ನನ್ನ ಬಗ್ಗೆ ಮಾತನಾಡಿದ್ದಾರೆ.
ಅವರು ಬಳಕೆ ಮಾಡಿದ ಪದಗಳು ಹಾಗೂ ಅವರು ನೀಡಿರುವಂಥ ಹೇಳಿಕೆಗಳು ನನಗೆ ಹರ್ಟ್ ಮಾಡಿದೆ. ನನಗೆ ಇದರಿಂದ ತುಂಬಾ ಬೇಸರ ಹಾಗೂ ನಿರಾಸೆಯಾಗಿದೆ. ಇದನ್ನು ನಾನು ಒಪ್ಪಿಕೊಳ್ಳಲು ಸಾಧ್ಯವೇ ಆಗದಿರುವಂಥ ವಿಚಾರ.
ನಾನು ನಿಮ್ಮೆಲ್ಲರಿಗೂ ಒಂದು ಪ್ರಶ್ನೆ ಕೇಳುತ್ತೇನೆ. 'ಇದೇ ತಂಡದ ಜೊತೆ ನಾನು ಸಿನಿಮಾ ಮಾಡಿರುತ್ತೇನೆ. ಒಂದೂ ಮುಕ್ಕಾಲು ವರ್ಷ ಸಿನಿಮಾ ಮಾಡಿದ್ದೇನೆ. ಜ.17ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ. ಮೊದಲ ರಿಲೀಸ್. ಹಲವಾರು ಪ್ರೆಸ್ ಮೀಟ್‌ಗಳು ಮೀಡಿಯಾ ಜೊತೆಗೂ ನಡೆದಿತ್ತು. ಈ ಎಲ್ಲಾ ವೇದಿಕೆಗಳಲ್ಲಿ ನನ್ನ ಬಗ್ಗೆ ಇವರೇ ತುಂಬಾ ಒಳ್ಳೆ ಮಾತನಾಡಿದ್ದರು. ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನ್ನ ನಟನೆ, ಕೆಲಸದ ಬದ್ಧತೆ ಬಗ್ಗೆ ಖುಷಿಯಿಂದ ಮಾತನಾಡಿದ್ದರು. ಇಡೀ ತಂಡ ಕೂಡ ನಾನು ತುಂಬಾ ಸಪೋರ್ಟಿವ್ ಆಗಿದ್ದೆ ಎಂದಿದ್ದರು. ಸಿನಿಮಾ ಪ್ರಮೋಷನ್ ಕೆಲಸಕ್ಕೆ ಇಡೀ ತಂಡದ ಜೊತೆ ನಿಂತಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳಿದ್ದರು.
ಆದರೆ, ಈಗ ಅದೇ ನನ್ನ ತಂಡ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದೆ. ಇಲ್ಲಿ ಒಂದು ಗೊಂದಲವಿದೆ. ನಾನಿದ್ದಾಗಲೇ ಮಾಧ್ಯಮಗಳ ಮುಂದೆ ಇದೇ ಮಾತನ್ನು ಅಂದೂ ಆಡಬೇಕಿತ್ತು. ಯಾಕೆ ಆಗ ಆ ಮಾತುಗಳು ಬಂದಿರಲಿಲ್ಲ. ಅಲ್ಲಿ ಹೊಗಳಿದ್ದು ಏಕೆ? ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ? ನಾನು ಸುಳ್ಳು, ನಾಟಕ ಮಾಡ್ತಿದ್ದೇನೆ ಅಂತಾ ಹೇಳ್ತಿದ್ದಾರೆ. ಇಲ್ಲಿ ಸುಳ್ಳು ಹೇಳುತ್ತಿರುವವರು ಯಾರು? ನಾಟಕ ಮಾಡುತ್ತಿರುವವರು ಯಾರು?
ನಾನು ಒಂದು ವಿಚಾರ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಸಂಜು ವೆಡ್ಸ್ ಗೀತಾ ಸಿನಿಮಾ ಶೂಟಿಂಗ್ ನಡೆಯುವಾಗಲೇ, ನನ್ನ ಇನ್ನೊಂದು ಸಿನಿಮಾ ರಿಲೀಸ್‌ಗೆ ರೆಡಿ ಇರುತ್ತೆ. ನನ್ನ ಇಡೀ ಚಿತ್ರತಂಡ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿತ್ತು. ನಿರ್ಮಾಪಕ, ನಿರ್ದೇಶಕರು ನನಗೆ ನನ್ನ ಮ್ಯಾನೇಜರ್‌ಗೆ ಕಾಲ್ ಮಾಡ್ತಾ ಇದ್ದರು. ಒಂದು ದಿನ ಪ್ರಮೋಷನ್‌ಗೆ ಬನ್ನಿ ಅಂತಾ ಕೇಳ್ತಿದ್ದರು. ಆಗ ನಾನು ನಾಗಶೇಖರ್ ಸರ್ ಹಾಗೂ ಕಿಟ್ಟಿ ಅವರಿಗೆ ಕೋಆರ್ಡಿನೇಟ್ ಮಾಡುತ್ತಿದ್ದೆ. ಆದರೆ, ಒಂದೇ ಒಂದು ದಿನ ನನ್ನ ಟೀಮ್ ಜೊತೆ ಪ್ರಮೋಷನ್‌ಗೆ ಹೋಗೋಕೆ ಇವರು ಬಿಡಲಿಲ್ಲ. ಇದನ್ನ ಪ್ರಾಮಾಣಿಕವಾಗಿ ಹೇಳ್ತಿದ್ದೇನೆ.
ಅದನ್ನ ಮಾಡಿದ್ದು ಯಾಕೆ? ಆ ನಿರ್ಮಾಪಕರು ಸಿನಿಮಾಗೆ ಹಾಕಿದ್ದು ಹಣವಲ್ಲವೇ? ಅವರು ಲೇಡಿ ಪ್ರೊಡ್ಯೂಸರ್. ಅವರದು ಸಿನಿಮಾ ಅಲ್ವಾ? ನನ್ನನ್ನು ಒಂದು ದಿನ ಆ ಸಿನಿಮಾದ ಪ್ರಮೋಷನ್‌ಗೆ ಇವರು ಕಳಿಸಲಿಲ್ಲ. ಇವತ್ತು ನಾನು ಇವರ ಸಿನಿಮಾ ಪ್ರಮೋಷನ್‌ಗೆ ಬರುತ್ತಿಲ್ಲ ಅಂತಾ ಹೇಳ್ತಿದ್ದಾರೆ. ನಾನು ಈ ಸಿನಿಮಾಗೆ ಏನು ಮಾಡಬೇಕು ಅಂತಾ ಇದ್ದೆನೋ ಅದೆಲ್ಲವನ್ನೂ ಸಂಪೂರ್ಣವಾಗಿ ಮಾಡಿದ್ದೇನೆ.
ಈ ಬಾರಿ ನನಗೆ ಬೇರೆ ಸಿನಿಮಾ ಕಮೀಟ್‌ಮೆಂಟ್ ಇರುತ್ತೆ. ಅಂದು ಅವರು ಏನು ಮಾಡಿದ್ದರೋ, ಇಂದು ಈಗ ಸಿನಿಮಾ ಶೂಟಿಂಗ್ ಮಾಡುತ್ತಿರುವ ತಂಡ ಕೂಡ ಅದನ್ನೇ ಹೇಳುತ್ತಿದ್ದೆ. ಅದು ರೀರಿಲೀಸ್ ಆಗುತ್ತಿರುವ ಸಿನಿಮಾ. ನಮ್ಮದು ಲೊಕೇಷನ್ ಸಮಸ್ಯೆ ಇದೆ. ಈ ಡೇಟ್ಸ್ ಕೊಟ್ಟಿದ್ದೀರಿ ಮುಗಿಸಿಬಿಡಿ ಎಂದು ಹೇಳುತ್ತಿದ್ದಾರೆ. ಇಷ್ಟೇ ವಿಚಾರ. ನಾನು ತಪ್ಪು ಮಾಡಿದ್ದೇನೋ? ಇಲ್ಲವೋ ಅನ್ನೋದನ್ನು ನೀವು ಹೇಳಿ. ನನಗೆ ನಾನು ತಪ್ಪು ಮಾಡಿದ್ದೀನಿ ಎಂದು ಅನಿಸುತ್ತಿಲ್ಲ. ನಾನು ಎಲ್ಲಾ ಪ್ರಮೋಷನ್ ಕಾರ್ಯಕ್ರಮದಲ್ಲೂ ಇದ್ದೆ. ರೀರಿಲೀಸ್ ಸಮಯದಲ್ಲಿ ನನಗೆ ನನ್ನ ಸಿನಿಮಾದ ಕಮೀಟ್‌ಮೆಂಟ್ ಇದ್ದವು. ಆದರೆ, ಪ್ರತಿದಿನ ನನ್ನ ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಅಪ್‌ಡೇಟ್ ನೀಡುತ್ತಿದೆ. ಕೊನೇ ಕ್ಷಣದಲ್ಲಿ ಅವರುಗಳು ಮಾಡಿದ ಬದಲಾವಣೆಗೆ ನಾನು ಹೊಣೆಗಾರಳಾಗಲು ಹೇಗೆ ಸಾಧ್ಯ? ಇದಕ್ಕೆ ನಾನು ಏನು ಹೇಳಬೇಕು ಅನ್ನೋದು ನನಗೆ ಗೊತ್ತಿಲ್ಲ.
ನನ್ನ ಮೇಲೆ ಸುಳ್ಳು, ನಾಟಕ ಅಂತಾ ಆಪಾದಾನೆ ಹೊರಿಸ್ತಾ ಇದ್ದಾರೆ. ಇಲ್ಲಿ ಯಾರು ಸುಳ್ಳು ಹೇಳ್ತಿದ್ದಾರೆ, ನಾಟಕ ಮಾಡ್ತಿದ್ದಾರೆ ಅನ್ನೋದನ್ನ ನೀವೇ ನೋಡಿ.
ಇನ್ನೊಂದು ಆರೋಪ ಏನೆಂದರೆ, ಸಿನಿಮಾ ಹಣ ತಗೊಂಡು ನಾನು ಡೇಟ್ಸ್ ಕೊಟ್ಟಿಲ್ಲ ಅನ್ನೋದು. ಈ ವಿಚಾರದ ಬಗ್ಗೆ ನಾನು ಮಾತಾಡೋ ಹಾಗೆ ಇಲ್ಲ. ಯಾಕೆ ಅಂದರೆ ಈ ವಿಚಾರವನ್ನ ಸಾರಾ ಗೋವಿಂದು ಸರ್ ಅವರು ಹ್ಯಾಂಡಲ್ ಮಾಡ್ತಾ ಇದ್ದಾರೆ. ಅವರ ಫಿಲ್ಮ್ ಚೇಂಬರ್‌ಗೆ ಈ ವಿಚಾರ ಹೋಗಿದೆ. ಅವರು ಹೇಳೋವರೆಗೂ ಇದರ ಬಗ್ಗೆ ಮಾತನಾಡುವಂತಿಲ್ಲ ಎಂದಿದ್ದಾರೆ. ಅದಕ್ಕೆ ಗೌರವ ನೀಡ್ತೀನಿ.
ನನ್ನ ಒಂದು ಮನವಿ ಏನೆಂದರೆ, 2ನೇ ವಿಚಾರದ ಬಗ್ಗೆ ಯಾರೂ ಚರ್ಚೆ ಮಾಡೋದು ಬೇಡ. ಇಷ್ಟು ವಿಚಾರಗಳನ್ನು ನಾನು ನಿಮ್ಮ ಬಳಿ ಹೇಳಿಕೊಳ್ಳಬೇಕು ಅಂತಾ ಅನಿಸಿತ್ತು. ಅದಕ್ಕಾಗಿ ಈ ವಿಡಿಯೋ ಮಾಡಿದ್ದೇನೆ. ನಾನು ತಪ್ಪು ಅಂತಾ ಮಾಡಿದ್ದರೆ, ಚಿಕ್ಕ ಮಕ್ಕಳ ಕಾಲಿಗೂ ಬೀಳ್ತೇನೆ. ನಾನು ತಪ್ಪು ಮಾಡಿಲ್ಲ ಅಂದ್ರೆ ದೇವ್ರೆ ಮುಂದೆ ನಿಂತ್ರೂ ನಾನು ಕ್ಷಮೆ ಕೇಳೋದಿಲ್ಲ. ನನ್ನ ಅಭಿಮಾನಿಗಳಿಗೆ ಏನಾದರೂ ಇದರಿಂದ ಬೇಸರವಾಗಿದ್ದರೆ ನನ್ನ ಕ್ಷಮೆ ನಿಮಗೆ ಮಾತ್ರ ಇರಲಿದೆ.