- Home
- Entertainment
- Sandalwood
- ಚೈತ್ರಾ ಆಚಾರ್‌ಗೆ ಕೆಟ್ಟದಾಗಿ ಮೆಸೇಜ್ ಮಾಡಿದ ನೆಟ್ಟಿಗ; ಒಂದು ರಿಪೋಸ್ಟ್‌ನಿಂದ ಕಾಲು ಹಿಡಿಯುವಂತೆ ಮಾಡಿದ ನಟಿ!
ಚೈತ್ರಾ ಆಚಾರ್‌ಗೆ ಕೆಟ್ಟದಾಗಿ ಮೆಸೇಜ್ ಮಾಡಿದ ನೆಟ್ಟಿಗ; ಒಂದು ರಿಪೋಸ್ಟ್‌ನಿಂದ ಕಾಲು ಹಿಡಿಯುವಂತೆ ಮಾಡಿದ ನಟಿ!
ಸ್ಯಾಂಡಲ್‌ವುಡ್ ನಟಿ ಚೈತ್ರಾ ಜೆ. ಆಚಾರ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಸಭ್ಯ ಸಂದೇಶ ಕಳುಹಿಸಿದ ನೆಟ್ಟಿಗನಿಗೆ ಅವರು ತಕ್ಕ ಪಾಠ ಕಲಿಸಿದ್ದಾರೆ. ಪೊಲೀಸ್ ಸಮವಸ್ತ್ರದ ಫೋಟೋ ಹಾಕಿಕೊಂಡಿದ್ದ ವ್ಯಕ್ತಿಯ ಸಂದೇಶವನ್ನು ಸಾರ್ವಜನಿಕವಾಗಿ ಹಂಚಿಕೊಂಡು ಕಾನೂನು ಕ್ರಮಕ್ಕೆ ಮುಂದಾದಾಗ, ಆತ ಕ್ಷಮೆಯಾಚಿಸಿದ್ದಾನೆ.

ಸ್ಯಾಂಡಲ್‌ವುಡ್‌ನ ನಟಿ ಹಾಗೂ ಗಾಯಕಿ ಚೈತ್ರಾ ಜೆ. ಆಚಾರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಮೆಸೇಜ್ ಮಾಡಿದ ನೆಟ್ಟಿಗನಿಗೆ ಸರಿಯಾಗೇ ಪಾಠ ಕಲಿಸಿದ್ದಾರೆ. ನೆಟ್ಟಿಗನ ಕೆಟ್ಟ ಕಾಮೆಂಟ್ ಹಾಗೂ ಮೆಸೇಜ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ಗೆ ಹಾಕಿಕೊಂಡು ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಕೆಟ್ಟದಾಗಿ ಮೆಸೇಜ್ ಮಾಡಿದವನು ಮಾರುದ್ದದ ಮೆಸೇಜ್‌ನಲ್ಲಿ ಕ್ಷಮೆ ಕೇಳಿಕೊಂಡಿದ್ದು, ಇನ್ನೇನು ಕಾಲು ಹಿಡಿಯುವುದಷ್ಟೇ ಬಾಕಿ ಎಂಬಂತೆ ಬುದ್ಧಿ ಕಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ಸೆಲೆಬ್ರಿಟಿಗಳು, ರೀಲ್ಸ್ ಸ್ಟಾರ್‌ಟಗಳು ಹಾಗೂ ನಟಿಯರಿಗೆ ಅಸಭ್ಯವಾಗಿ ಕಾಮೆಂಟ್ ಮಾಡುವುದು ಮತ್ತು ಇನ್‌ಬಾಕ್ಸ್‌ನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡುವುದು ಒಂದು ಚಾಳಿಯಾಗಿದೆ. ಆದರೆ, ಈ ಬಾರಿ ಇಂತಹದ್ದೇ ಕೃತ್ಯ ಎಸಗಿದ ಕಿಡಿಗೇಡಿಯೊಬ್ಬನಿಗೆ ಚೈತ್ರಾ ಆಚಾರ್ ಅವರು ಸರಿಯಾದ ಪಾಠ ಕಲಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯ ವಿಕೃತಿ:
ಮಹೇಶ್ ಹೊಸಮನಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಅಸಭ್ಯವಾದ ಮೆಸೇಜ್‌ಗಳು ಬಂದಿದ್ದವು. ಗಮನಿಸಬೇಕಾದ ಅಂಶವೆಂದರೆ, ಈ ವ್ಯಕ್ತಿಯ ಪ್ರೊಫೈಲ್ ಚಿತ್ರದಲ್ಲಿ ಆತ ಪೊಲೀಸ್ ಸಮವಸ್ತ್ರದಲ್ಲಿದ್ದ. ನಟಿಯರ ಫೋಟೋಶೂಟ್‌ಗಳ ಬಗ್ಗೆ ಕೆಟ್ಟ ಪದಬಳಕೆ ಮಾಡಿದ್ದ ಈತ, ಬಳಿಕ ಮರ್ಯಾದೆಯ ಬಗ್ಗೆ ಭಾಷಣ ಬಿಗಿದಿದ್ದ. ಇದನ್ನು ಕಂಡು ಕೆಂಡಾಮಂಡಲವಾದ ಚೈತ್ರಾ, ಆತನ ಮೆಸೇಜ್‌ನ ಸ್ಕ್ರೀನ್‌ಶಾಟ್ ತೆಗೆದು ನೇರವಾಗಿ ಬೆಂಗಳೂರು ಸಿಟಿ ಪೊಲೀಸ್ (@BlrCityPolice) ಅವರಿಗೆ ಟ್ಯಾಗ್ ಮಾಡಿದ್ದಾರೆ.
'ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್ ಅವರೇ, ಹೊಸಮನಿ53 (@hosamani53) ಎಂಬುವವ ನಿಮ್ಮ ಡಿಪಾರ್ಟ್‌ಮೆಂಟ್ ಅನ್ಸುತ್ತೆ. ಅವನು ಕೇಳಿದ ಅಸಭ್ಯ ಪ್ರಶ್ನೆಗೆ ದಯವಿಟ್ಟು ನೀವು ಉತ್ತರ ಕೊಡಬಹುದೇ?' ಎಂದು ಚೈತ್ರಾ ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ.
ಮಾನ ಉಳಿಸಿಕೊಳ್ಳಲು ಗೋಗರೆದ 'ಅಭಿಮಾನಿ':
ಚೈತ್ರಾ ಆಚಾರ್ ಯಾವಾಗ ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡರೋ, ಆ ಕ್ಷಣವೇ ಆ ಕಿಡಿಗೇಡಿಗೆ ನಡುಕ ಶುರುವಾಗಿದೆ. ಕೂಡಲೇ ತನ್ನ ವರಸೆ ಬದಲಿಸಿದ ಮಹೇಶ್ ಹೊಸಮನಿ, 'ಸಾರಿ ಮೇಡಂ, ತಪ್ಪಾಯ್ತು. ನಾನು ನಿಮ್ಮ ಮೇಲಿನ ಕಾಳಜಿಗೆ (Concern) ಈ ರೀತಿ ಮೆಸೇಜ್ ಹಾಕಿದೆ. ಅಕ್ಷರಗಳು ತಪ್ಪಾಗಿರಬಹುದು ಅಷ್ಟೆ. ಪ್ಲೀಸ್ ಸ್ಟೋರಿ ತೆಗೆಯಿರಿ ಮೇಡಂ, ಇದು ನನ್ನ ಕೆರಿಯರ್‌ಗೆ ಸಮಸ್ಯೆಯಾಗುತ್ತದೆ. ನಾನು ನಿಮ್ಮ ದೊಡ್ಡ ಅಭಿಮಾನಿ' ಎಂದು ಗೋಗರೆದಿದ್ದಾನೆ. ಅಲ್ಲದೆ, ಪೊಲೀಸ್ ದೂರಿನ ಭೀತಿಯಿಂದ ತನ್ನ ಅಕೌಂಟ್‌ನಲ್ಲಿದ್ದ ಫೋಟೋ ಮತ್ತು ವಿವರಗಳನ್ನು ಹೈಡ್ ಮಾಡಿದ್ದಾನೆ.
ಚೈತ್ರಾ ಆಚಾರ್ ಅವರ ಖಡಕ್ ಪ್ರತಿಕ್ರಿಯೆ:
ಕ್ಷಮೆ ಕೇಳಿದ ಆತನ ಮೆಸೇಜ್ ಅನ್ನೇ ಮತ್ತೆ ಸ್ಕ್ರೀನ್‌ಶಾಟ್ ಹಾಕಿದ ಚೈತ್ರಾ, ಆತನ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. 'ಓರ್ವ ವ್ಯಕ್ತಿ ನನ್ನ ವೃತ್ತಿ ಅಥವಾ ಕೆಲಸದ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡುವಾಗ ನಾವೇನೂ ಮಾಡಬಾರದಾ? ಅದೇ ವಿಚಾರ ಅವರ ಬುಡಕ್ಕೆ ಬಂದಾಗ ನಿಯಮಗಳು ಬದಲಾಗುತ್ತವೆಯೇ?' ಎಂದು ಚೈತ್ರಾ ಕೇಳಿರುವ ಪ್ರಶ್ನೆ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ನಟಿ ಚೈತ್ರಾ ಆಚಾರ್ ಅವರ ಈ ಧೈರ್ಯವಂತ ಹೆಜ್ಜೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೇವಲ ಫೋಟೋ ಹಾಕಿದ ಮಾತ್ರಕ್ಕೆ ನಟಿಯರಿಗೆ ಏನು ಬೇಕಾದರೂ ಅನ್ನಬಹುದು ಎಂದುಕೊಂಡಿರುವ ಪುಂಡರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಬೆಂಗಳೂರು ಸಿಟಿ ಪೊಲೀಸರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

