ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದೆ. ವಿಚಾರಣೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, 2027ರ ಮೇ 15ರೊಳಗೆ ವಿಚಾರಣೆ ಮುಗಿಸಲು ಗಡುವು ನೀಡಿದ್ದು, ದರ್ಶನ್‌ಗೆ ಜೈಲಿನಲ್ಲಿ ಮೂಲ ಸೌಲಭ್ಯ ಒದಗಿಸಲು ಸೂಚಿಸಿದೆ.

ನವದೆಹಲಿ/ಬೆಂಗಳೂರು (ಮೇ 15): ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದಾಗಿ ದರ್ಶನ್ ಅವರು ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿಯೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

Add Asianetnews Kannada as a Preferred SourcegooglePreferred

ವಿಚಾರಣೆ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ:

ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಪೀಠವು ಪ್ರಕರಣದ ವಿಚಾರಣೆ ನಡೆಯುತ್ತಿರುವ ವೇಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದಾರೆ. ಆದರೆ, ಕಳೆದ 7 ತಿಂಗಳುಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ತಿಳಿದ ನ್ಯಾಯಾಲಯವು ಗರಂ ಆಯಿತು. "ಹೀಗೆ ವಿಚಾರಣೆ ನಡೆದರೆ ಪ್ರಕರಣ ಮುಕ್ತಾಯವಾಗಲು ತುಂಬಾ ಸಮಯ ಬೇಕಾಗುತ್ತದೆ. ವಿಚಾರಣೆ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಖಡಕ್ ಗಡುವು ನೀಡಿದ ನ್ಯಾಯಾಲಯ:

ವಿಚಾರಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಗಡುವನ್ನು ವಿಧಿಸಿದೆ. ಮುಂದಿನ ವರ್ಷ ಅಂದರೆ 2027ರ ಮೇ 15ರ ಒಳಗಾಗಿ ಈ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಮುಗಿಸಬೇಕು ಎಂದು ಆದೇಶಿಸಿದೆ. ಇಂದಿನಿಂದ ಒಂದು ವರ್ಷದೊಳಗೆ ವಿಚಾರಣೆ ಪ್ರಕ್ರಿಯೆ ಅಂತ್ಯಗೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಪ್ರತಿದಿನ (Daily Basis) ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದೆ. ಈ ಗಡುವಿನ ನಂತರವೇ ಜಾಮೀನು ಅರ್ಜಿಯನ್ನು ಮರು ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜೈಲಿನಲ್ಲಿ ಸೌಲಭ್ಯ ನೀಡಲು ಸೂಚನೆ:

ಜಾಮೀನು ನಿರಾಕರಿಸಿದರೂ ಸಹ, ದರ್ಶನ್ ಅವರಿಗೆ ಜೈಲಿನಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆ ನ್ಯಾಯಾಲಯವು ಜೈಲು ಅಧೀಕ್ಷಕರಿಗೆ ಸೂಚನೆ ನೀಡಿದೆ. ‘ಬೇರೆ ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೆಯೋ, ಅಂತಹ ಸೌಲಭ್ಯಗಳು ದರ್ಶನ್‌ಗೂ ಸಿಗಬೇಕು. ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ಅಧಿಕಾರಿಯ ಕರ್ತವ್ಯ’ ಎಂದು ನ್ಯಾಯಾಲಯ ಹೇಳಿದೆ.

ಕ್ವಾರಂಟೈನ್ ಸೆಲ್‌ನಲ್ಲೇ ವಾಸ್ತವ್ಯ:

ಇನ್ನು ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸುವ ಬಗ್ಗೆ ಅಥವಾ ಬೇರೆಡೆಗೆ ಬದಲಾಯಿಸುವ ಬಗ್ಗೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ಆದೇಶವನ್ನು ನೀಡಿಲ್ಲ. ಹೀಗಾಗಿ ದರ್ಶನ್ ಸದ್ಯಕ್ಕೆ ಕ್ವಾರಂಟೈನ್ ಸೆಲ್‌ನಲ್ಲೇ ಮುಂದುವರಿಯಬೇಕಿದೆ.

ಸುಪ್ರೀಂಕೋರ್ಟ್‌ನ ಈ ನಿರ್ಧಾರದಿಂದ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಇನ್ನು ಕನಿಷ್ಠ ಒಂದು ವರ್ಷದ ಕಾಲ ವಿಚಾರಣೆಯ ಹಂತವನ್ನು ಎದುರಿಸಬೇಕಾದ ಅನಿವಾರ್ಯತೆ ನಟನಿಗೆ ಎದುರಾಗಿದೆ.