ದರ್ಶನ್ 'ದಿ ಡೆವಿಲ್' ಸಿನಿಮಾ ಕೆಲಸ ಮುಗೀತು! ರಿಲೀಸ್ ಯಾವಾಗ?
ನಟ ದರ್ಶನ್ ತೂಗುದೀಪ ನಟನೆಯ 'ದಿ ಡೆವಿಲ್' ಸಿನಿಮಾ ಡಬ್ಬಿಂಗ್, ಶೂಟಿಂಗ್ ಕೆಲಸ ಮುಕ್ತಾಯವಾಗಿದೆ.

ನಟ ದರ್ಶನ್ ಅಭಿನಯಿಸಿರುವ 'ದಿ ಡೆವಿಲ್' ಸಿನಿಮಾದ ( Darshan Thoogudeepa The Devil Movie ) ಶೂಟಿಂಗ್, ಡಬ್ಬಿಂಗ್ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಬೆಂಗಳೂರು, ರಾಜಸ್ಥಾನ, ಬ್ಯಾಂಕಾಕ್ ಮುಂತಾದ ಕಡೆ ಶೂಟಿಂಗ್ ನಡೆದಿದೆ. ಈ ಸಿನಿಮಾವನ್ನು ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.
ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಎರಡು ಹಾಡುಗಳ ಶೂಟಿಂಗ್ ಮುಗಿಸಿ, ಚಿತ್ರತಂಡ ಭಾರತಕ್ಕೆ ಮರಳಿದೆ. ಇದರೊಂದಿಗೆ 'ದಿ ಡೆವಿಲ್' ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ದರ್ಶನ್ ಅವರು ಸೇರಿದಂತೆ ಎಲ್ಲ ಕಲಾವಿದರ ಡಬ್ಬಿಂಗ್ ಸಹ ಪೂರ್ಣವಾಗಿದೆ. ಸದ್ಯದಲ್ಲೇ ಈ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಆದಷ್ಟು ಬೇಗ ಈ ಸಿನಿಮಾವನ್ನು ತೆರೆಗೆ ತರುವುದಾಗಿ ಹೇಳಿದ್ದಾರೆ.
ಈ ಸಿನಿಮಾದ ದರ್ಶನ್ ಅವರ ಹೊಸ ಲುಕ್‌ಗಳ ಪೋಸ್ಟರ್‌ಗಳಿಂದ 'ದಿ ಡೆವಿಲ್' ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಸಿನಿಮಾಕ್ಕೆ ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನವಿದೆ.
ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ. ಅಂದಹಾಗೆ ತುಳಸಿ, ಅಚ್ಯುತ್‌ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು , ಶೋಭ್ ರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.