ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ವಿಚಾರಣೆಗೆ ಬರಲಿದೆ.

ನವದೆಹಲಿ (ಜು.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ವಿಚಾರಣೆಗೆ ಬರಲಿದೆ. ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯಲಿದೆ.

2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ, 2024ರ ಡಿ.13 ರಂದು ಕರ್ನಾಟಕ ಹೈಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು. ಈ ಜಾಮೀನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇ 21ರಂದು ನ್ಯಾಯಮೂರ್ತಿ ಪಾರ್ದೀವಾಲ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿತ್ತು. ಹೀಗಾಗಿ, ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದೆ. ಈ ಮಧ್ಯೆ, ಮೇ 26ರಿಂದ ಸುಪ್ರೀಂಕೋರ್ಟ್​ಗೆ ಬೇಸಿಗೆ ರಜೆ ಶುರುವಾಗಿದ್ದು, ಜುಲೈ 13ರ ತನಕ ಸುಪ್ರೀಂಕೋರ್ಟ್​ಗೆ ರಜೆ ಇತ್ತು. ಈಗ ರಜೆಯ ಬಳಿಕ ಅರ್ಜಿ ವಿಚಾರಣೆಗೆ ಬರಲಿದೆ. ಈ ಮಧ್ಯೆ, ಹಿಂದೆ 262 ಸಾಕ್ಷಿಗಳಿದ್ದ ಪಟ್ಟಿಗೆ ಈಗ 10 ಹೆಚ್ಚುವರಿ ಸಾಕ್ಷಿದಾರರ ಹೇಳಿಕೆಗಳನ್ನು ಸೇರಿಸಲಾಗಿದೆ.

ಸಿನಿಮಾ ಸೆಟ್‌ ಫೋಟೋ ಲೀಕ್‌: ದರ್ಶನ್‌ ನಟನೆಯ ‘ಡೆವಿಲ್‌’ ಸಿನಿಮಾ ಸೆಟ್‌ನದು ಎನ್ನಲಾದ ಫೋಟೋ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಫೋಟೋದಲ್ಲೊಂದು ಕಟೌಟ್‌ ಇದೆ. ಅದರಲ್ಲಿ ಸಿಎಂ ಲುಕ್‌ನಲ್ಲಿ ಕೈಮುಗಿಯುತ್ತಿರುವ ದರ್ಶನ್‌ ಚಿತ್ರವಿದೆ. ‘ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್’ ಎಂದು ದರ್ಶನ್‌ ಪಾತ್ರವನ್ನು ಉಲ್ಲೇಖಿಸಲಾಗಿದೆ. ಕರುನಾಡ ಪ್ರಜಾ ಪಕ್ಷ ಎಂಬ ಪಾರ್ಟಿ ಹೆಸರೂ ಇದೆ. ಪ್ರಕಾಶ್‌ ವೀರ್‌ ನಿರ್ದೇಶನದ ‘ಡೆವಿಲ್‌’ ಚಿತ್ರದ ನಾಲ್ಕನೇ ಹಂತದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅಲ್ಲಿನ ಫೋಟೋವನ್ನು ಕಿಡಿಗೇಡಿಗಳು ಸೋಷಲ್‌ ಮೀಡಿಯಾದಲ್ಲಿ ಲೀಕ್‌ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.