ಎಲ್ಲರ ಬಾಯಲ್ಲೂ ಡಾರ್ಲಿಂಗ್ ಕೃಷ್ಣ 'ಬ್ರ್ಯಾಟ್' ಸಿನಿಮಾದ 'ನಾನೇ ನೀನಂತೆ' ಹಾಡು!
ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ ‘ಬ್ರ್ಯಾಟ್’ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿದೆ. ʼನಾನೇ ನೀನಂತೆʼ ಎಂಬ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದೆ. ಕನ್ನಡ, ತೆಲುಗಿನಲ್ಲಿ ಈ ಹಾಡನ್ನು ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ಕನ್ನಡದ ಫಿಮೇಲ್ ವರ್ಷನ್ "ಸರಿಗಮಪ" ಶೋ ಖ್ಯಾತಿಯ ಲಹರಿ ಮಹೇಶ್ ಹಾಡಿದ್ದಾರೆ. ಉಳಿದ ನಾಲ್ಕು ಭಾಷೆಗಳಲ್ಲಿ ಫೀಮೇಲ್ ವರ್ಷನ್ ಸಿರೀಶ ಹಾಡಿದ್ದಾರೆ. ಹಿಂದಿಯಲ್ಲಿ ಮೇಲ್ ವರ್ಷನ್ ನಿಹಾಲ್ ತವ್ರು, ತೆಲುಗು, ತಮಿಳಿನಲ್ಲಿ ಶ್ರೀಕಾಂತ್ ಹರಿಹರನ್ ಹಾಡಿದ್ದಾರೆ.
ಈ ಹಿಂದೆ ಶಶಾಂಕ್, ಅರ್ಜುನ್ ಜನ್ಯ, ಸಿದ್ ಶ್ರೀರಾಮ್ ಕಾಂಬಿನೇಶನ್‌ನಲ್ಲಿ ʼಲವ್ 360ʼ ಸಿನಿಮಾದ ʼಜಗವೇ ನೀನು ಗೆಳತಿಯೇʼ ಹಾಡು ಭರ್ಜರಿ ಯಶಸ್ಸು ಕಂಡಿತ್ತು. ಈಗ ಈ ಹಾಡಿಗೂ ಎಲ್ಲ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ನಂತರ ನನ್ನ, ಶಶಾಂಕ್ ಅವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ʼಬ್ರ್ಯಾಟ್ʼ. ನನ್ನ ಈ ಸಿನಿಮಾದ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ನಿರ್ದೇಶಕ ಶಶಾಂಕ್ ಹಾಗೂ ತಂಡಕ್ಕೆ ಕಾರಣ. ಇಂದು ರಿಲೀಸ್ ಆದ ಹಾಡು ತುಂಬಾ ಚೆನ್ನಾಗಿದೆ. ಮುಂದಿನ ತಿಂಗಳು ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಆ ಹಾಡಂತೂ ನನ್ನ ಮಗಳಿಗೆ ಬಹಳ ಇಷ್ಟ” ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
“ನನ್ನ ಹಾಗೂ ಅರ್ಜುನ್ ಜನ್ಯ ಕಾಂಬಿನೇಶನ್‌ನಲ್ಲಿ ಬಂದಿರುವ ಎಲ್ಲ ಹಾಡುಗಳು ಹಿಟ್ ಆಗಿವೆ. ಈಗ ಆ ಸಾಲಿಗೆ "ನಾನೇ ನೀನಂತೆ" ಹಾಡು ಕೂಡ ಸೇರಲಿದೆ. ನನ್ನ ಸಿನಿ ಜರ್ನಿಯಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಹಾಡಿದು. ಈ ಹಾಡಿನ ಟ್ಯೂನ್ ಕಂಪ್ಲೀಟ್ ಮಾಡಲು ಸುಮಾರು 6 ತಿಂಗಳು ಬೇಕಾಯಿತು. ನಿರ್ಮಾಪಕ ಮಂಜುನಾಥ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಈ ಹಾಡನ್ನು ನಾನೇ ಬರೆದಿದ್ದೇನೆ” ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.
“ನಮ್ಮ ಮೊದಲ ನಿರ್ಮಾಣದ “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ಗೆಲುವಿಗೆ ನೀವೆಲ್ಲಾ ನೀಡಿದ ಪ್ರೋತ್ಸಾಹವೇ ಕಾರಣ. ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಸಿನಿಮಾ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡು ಮಧುರವಾಗಿದೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ” ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.
“ನಾನು ಕನ್ನಡದವಳು. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಈ ಚಿತ್ರದಲ್ಲಿ ನಾನು ಮಧ್ಯಮವರ್ಗದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾದಲ್ಲೂ ನನ್ನ ಪಾತ್ರದ ಹೆಸರು ಮನಿಶಾ. ಇಂದು ಬಿಡುಗಡೆಯಾಗಿರುವ "ನಾನೇ ನೀನಂತೆ" ನನ್ನ ಇಷ್ಟದ ಹಾಡು” ಎಂದರು ನಾಯಕಿ ಮನಿಶಾ ಕಂದಕೂರ್. ಗಾಯಕಿ ಲಹರಿ, ಆನಂದ್ ಆಡಿಯೋ ಶ್ಯಾಮ್, ನೃತ್ಯ ನಿರ್ದೇಶಕ ಕಲೈ ಮಾಸ್ಟರ್, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಸಹ "ನಾನೇ ನೀನಂತೆ" ಹಾಡಿನ ಕುರಿತು ಮಾತನಾಡಿದ್ದಾರೆ.