ಲೈಂಗಿಕ ಕ್ರಿಯೆ ವೇಳೆ ವಿಪರೀತ ನೋವಿಗೆ ಕಾರಣಗಳಿವು… ನಿರ್ಲಕ್ಷಿಸಬೇಡಿ
ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ನೋವು ಉಂಟಾಗುವುದು ಸಾಮಾನ್ಯ, ಆದರೆ ಈ ನೋವು ನಿಮ್ಮ ಲೈಂಗಿಕ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಅದು ಸಾಮಾನ್ಯವಲ್ಲ. ಈ ಸ್ಥಿತಿಗೆ ಹಲವಾರು ಆರೋಗ್ಯ ಪರಿಸ್ಥಿತಿಗಳು ಕಾರಣವಾಗಬಹುದು.
ಲೈಂಗಿಕ ಕ್ರಿಯೆಯ (penetrative sex) ಸಮಯದಲ್ಲಿ ನಿಮಗೆ ನೋವು ಉಂಟಾಗುತ್ತದೆಯೇ? ಲೈಂಗಿಕ ಕ್ರಿಯೆಯ ನಂತರ ನೀವು ಕೆಳ ಹೊಟ್ಟೆ ನೋವನ್ನು ಅನುಭವಿಸುತ್ತೀರಾ? ಹಾಗಿದ್ದರೆ, ನೀವು ಈ ವಿಷಯಗಳನ್ನು ನಿರ್ಲಕ್ಷಿಸಬಾರದು. ಲೈಂಗಿಕತೆಯ ಸಮಯದಲ್ಲಿ ವಿಭಿನ್ನ ರೀತಿಯಲ್ಲಿ ನೋವು ಉಂಟಾಗುವುದು ಸಾಮಾನ್ಯ, ಆದರೆ ಈ ನೋವು ನಿಮ್ಮ ಲೈಂಗಿಕ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಅದು ಸಾಮಾನ್ಯವಲ್ಲ. ಈ ಸ್ಥಿತಿಗೆ ಹಲವಾರು ಆರೋಗ್ಯ ಪರಿಸ್ಥಿತಿಗಳು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ, ಇದರಿಂದ ಪರಿಸ್ಥಿತಿ ಹೆಚ್ಚು ಗಂಭೀರವಾಗುವುದಿಲ್ಲ.
ಲೈಂಗಿಕ ಕ್ರಿಯೆಯ ನಂತರ ನೋವು ಏಕೆ ಉಂಟಾಗುತ್ತೆ ಗೊತ್ತ?
ಯೀಸ್ಟ್ ಮತ್ತು ಬ್ಯಾಕ್ಟೀರಿಯಾದ ಸೋಂಕು (Yeast and bacterial infection)
ವಜೈನಲ್ ಯೀಸ್ಟ್ ಸೋಂಕುಗಳು ಮತ್ತು ಮೂತ್ರನಾಳದ ಸೋಂಕುಗಳು (UTI) ಯೋನಿ ಉರಿಯೂತಕ್ಕೆ ಕಾರಣವಾಗಬಹುದು, ಇದನ್ನು ಯೋನಿಟಿಸ್ ಎಂದೂ ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಘರ್ಷಣೆಯಿಂದಾಗಿ ಯೋನಿಯಲ್ಲಿ ಉರಿಯೂತ ಉಂಟಾದಾಗ, ನೋವು ಮತ್ತು ಉರಿಯನ್ನು ಅನುಭವಿಸಬಹುದು. ಯೀಸ್ಟ್ ಸೋಂಕುಗಳು ಅಥವಾ ಯುಟಿಐಗಳು ಲೈಂಗಿಕತೆಯನ್ನು ಮತ್ತಷ್ಟು ನೋವಿನಿಂದ ಕೂಡುವಂತೆ ಮಾಡುತ್ತೆ. ಹೀಗೆ ಆದಾಗ ಸೆಕ್ಸ್ ಮಾಡೋದು ಮತ್ತಷ್ಟು ನೋವನ್ನು ಉಂಟು ಮಾಡುತ್ತೆ.
ಯೀಸ್ಟ್ ಸೋಂಕಿನಲ್ಲಿ ಕ್ಯಾಂಡಿಡಾ ಯೀಸ್ಟ್ ಬೆಳವಣಿಗೆಯು ತುರಿಕೆ, ಗಾಢ ಬಿಳಿ ವಿಸರ್ಜನೆ ಮತ್ತು ಮೂತ್ರ ವಿಸರ್ಜನೆ ಮಾಡುವಾಗ ನೋವಿಗೆ ಕಾರಣವಾಗಬಹುದು. ನೀವು ಸೋಂಕಿಗೆ ಒಳಗಾಗಿದ್ದರೆ, ನೀವು ಕೂಡಲೇ ಆಂಟಿಫಂಗಲ್ ಔಷಧಿಗಳ ಮೂಲಕ ಸೋಂಕನ್ನು ಗುಣಪಡಿಸುವತ್ತ ಗಮನ ಹರಿಸಬೇಕು. ಇದು ಲೈಂಗಿಕ ಕ್ರಿಯೆಯ ಸಮಯದಲ್ಲಿ ಉಂಟಾಗುವ ನೋವಿನಿಂದ ಪರಿಹಾರ ನೀಡುತ್ತೆ.
ಪೆಲ್ವಿಕ್ ಉರಿಯೂತದ ಕಾಯಿಲೆ (pelvic inflammatory disease)
ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎಂಬುದು ಹೆಣ್ಣಿನ ಸಂತಾನೋತ್ಪತ್ತಿ ಅಂಗದ ಸೋಂಕು ಇದು ಹೆಚ್ಚಾಗಿ ಗೊನೊರಿಯಾ ಅಥವಾ ಕ್ಲಮೈಡಿಯಾದಿಂದ ಉಂಟಾಗುತ್ತದೆ. ಪೆಲ್ವಿಕ್ ಉರಿಯೂತದ ಕಾಯಿಲೆಯ ಸಂದರ್ಭದಲ್ಲಿ, ನೋವಿನ ಸಂಭೋಗ, ಪೆಲ್ವಿಕ್ ನೋವು, ಬಂಜೆತನ, ಫೆಲೋಪಿಯನ್ ಟ್ಯೂಬ್ ಗೆ ಹಾನಿ, ಜ್ವರ, ಹುಣ್ಣು (ಸೋಂಕಿತ ಕೀವು ತುಂಬಿದ ಉಂಡೆ), ಲೈಂಗಿಕತೆಯ ಸಮಯದಲ್ಲಿ ಅಥವಾ ಮುಟ್ಟಿನ ನಡುವೆ ರಕ್ತಸ್ರಾವ, ಮೂತ್ರ ವಿಸರ್ಜನೆ ಮಾಡುವಾಗ ನೋವು, ಹೊಟ್ಟೆಯ ಕೆಳಭಾಗದಲ್ಲಿ ನೋವು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
ಯೋನಿ ಶುಷ್ಕತೆ (Vaginal dryness)
ನಿಮ್ಮ ಯೋನಿ ಡ್ರೈ ಆಗಿದ್ದರೆ, ಸಂಭೋಗದ ಸಮಯದಲ್ಲಿ ನಿಮಗೆ ಉರಿ ಮತ್ತು ನೋವು ಉಂಟಾಗಬಹುದು. ನೀವು ಉದ್ರೇಕಗೊಳ್ಳುವ ಮೊದಲು ಪೆನೆಟ್ರೇಟೀವ್ ಸೆಕ್ಸ್ ಮಾಡಿದ್ರೆ, ಅಥವಾ ನೀವು ಹಾರ್ಮೋನುಗಳ ಬದಲಾವಣೆ ಸಮಸ್ಯೆ ಹೊಂದಿದ್ರೆ, ವಜೈನಲ್ ಡ್ರೈನೆಸ್ ಸಮಸ್ಯೆ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತೆ.
ಇತ್ತೀಚೆಗೆ ತಾಯಿಯಾಗಿದ್ದರೆ ಅಥವಾ ಸ್ತನ್ಯಪಾನ ಮಾಡುತ್ತಿದ್ದರೆ, ಹಾರ್ಮೋನುಗಳ ಬದಲಾವಣೆಗಳು (hormonal changes) ನಿಮ್ಮ ದೇಹದಲ್ಲಿನ ಈಸ್ಟ್ರೊಜೆನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಯೋನಿ ಶುಷ್ಕತೆಗೆ ಕಾರಣವಾಗಬಹುದು, ಇದು ಲೈಂಗಿಕತೆಯ ಸಮಯದಲ್ಲಿ ನೋವಿಗೆ ಕಾರಣವಾಗುತ್ತದೆ. ಈ ಪರಿಸ್ಥಿತಿಯಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸುವತ್ತ ಗಮನ ಹರಿಸಿ.
ಬಾಗಿದ ಗರ್ಭಾಶಯ (Tilted uterus)
ಗರ್ಭಾಶಯವು ಮುಂದಕ್ಕೆ ವಾಲುವ ಬದಲು ಹಿಂದಕ್ಕೆ ವಾಲುತ್ತದೆ, ಇದು ಸಂಭೋಗದ ಸಮಯದಲ್ಲಿ ನೋವನ್ನು ಉಂಟುಮಾಡಬಹುದು. ಗರ್ಭಾಶಯವು ಹಿಂದಕ್ಕೆ ಬಾಗಿದಾಗ, ಗರ್ಭಕಂಠವು ಯೋನಿ ಸುರಂಗಕ್ಕೆ ಹತ್ತಿರವಾಗಿ ವಾಲುತ್ತದೆ, ಇದು ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವನ್ನು ಉಂಟು ಮಾಡುತ್ತೆ, ಹಾಗಾಗಿ ಕೂಡಲೇ ವೈದ್ಯರನ್ನು ಕಾಣೋದು ಮುಖ್ಯ.
ಎಂಡೊಮೆಟ್ರಿಯೋಸಿಸ್ (Endometriosis)
ಎಂಡೊಮೆಟ್ರಿಯೋಸಿಸ್ ಸ್ಥಿತಿಯಲ್ಲಿ, ಲೈಂಗಿಕ ಕ್ರಿಯೆಯ ಸಮಯದಲ್ಲಿ ಅಥವಾ ನಂತರ ಯೋನಿ ಅಥವಾ ಗರ್ಭಾಶಯದಲ್ಲಿ ಆಳವಾದ, ತೀಕ್ಷ್ಣವಾದ ನೋವು ಉಂಟಾಗುತ್ತೆ. ಎಂಡೊಮೆಟ್ರಿಯೋಸಿಸ್ ಎಂಬುದು ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುವ ಸ್ಥಿತಿ, ಇದು ಗರ್ಭಾಶಯ, ಅಂಡಾಶಯಗಳು, ಫೆಲೋಪಿಯನ್ ನಾಳಗಳು ಮತ್ತು ಮೂತ್ರಕೋಶದ ಸುತ್ತಲೂ ಉರಿಯೂತವನ್ನು ಉಂಟುಮಾಡುತ್ತದೆ.
ಅಲರ್ಜಿ (Allergic reaction)
ಸಾಮಾನ್ಯವಾಗಿ ಲ್ಯಾಟೆಕ್ಸ್ ಕಾಂಡೋಮ್ಸ್ ಬಳಕೆಯಿಂದ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇದೆ, ಇದರಲ್ಲಿ ತುರಿಕೆ, ಉರಿ, ನೋವು ಇತ್ಯಾದಿಗಳು ಸೇರಿವೆ. ಅದೇ ಸಮಯದಲ್ಲಿ, ಲೈಂಗಿಕ ಸಂಭೋಗದ ಸಮಯದಲ್ಲಿ ಈ ಎಲ್ಲಾ ರೋಗಲಕ್ಷಣಗಳು ಹೆಚ್ಚಾಗುತ್ತವೆ. ಇದನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಸುವ ಕಾಂಡೋಮ್ ಮುಂತಾದ ವಸ್ತುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.