ನಿಮ್ಮ ಶಕ್ತಿಯನ್ನು ನಿಮಗೆ ತಿಳಿಯದಂತೆ ಕುಂದಿಸುತ್ತವೆ ಈ ಚಟುವಟಿಕೆಗಳು.. ಎಚ್ಚರ!
ದೈಹಿಕ ಆಯಾಸಕ್ಕಿಂತ ಹೆಚ್ಚಾಗಿ ಮಾನಸಿಕ ಒತ್ತಡ ನಮ್ಮ ಶಕ್ತಿಯನ್ನು ಕುಂದಿಸುತ್ತದೆ. ನಮ್ಮ ಶಕ್ತಿಯನ್ನು ನಮಗೆ ತಿಳಿಯದಂತೆ ಕಡಿಮೆ ಮಾಡುವ ಕೆಲವು ಚಟುವಟಿಕೆಗಳು ಏನು ಎಂಬುದನ್ನು ಇಲ್ಲಿ ನೋಡೋಣ.

ನಿಮ್ಮ ಶಕ್ತಿಯನ್ನು ನಿಮಗೆ ತಿಳಿಯದಂತೆ ಇಲ್ಲವಾಗಿಸುತ್ತವೆ ಚಟುವಟಿಕೆಗಳು
ಇತ್ತೀಚೆಗೆ ಕಡಿಮೆಯಲ್ಲಿ ಶೇಕಡಾ 50ಕ್ಕೂ ಹೆಚ್ಚು ಜನ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಈ ಮಾನಸಿಕ ಒತ್ತಡ ದೈಹಿಕ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಈ ವಿಚಾರವನ್ನು ಅನೇಕರು ನಿರ್ಲಕ್ಷಿಸುವುದೇ ಹೆಚ್ಚು ಮಾನಸಿಕ ಆರೋಗ್ಯವನ್ನು ಅನೇಕರು ಕಡೆಗಣಿಸುವುದೇ ಹೆಚ್ಚು, ಆದರೆ ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯ ಮನುಷ್ಯನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುವುದು ಎಂಬುದು ಅನೇಕರಿಗೆ ಗೊತ್ತಿಲ್ಲ, ಅಲ್ಲದೇ ನಮ್ಮ ಈ ಕೆಲವು ಕೆಟ್ಟ ಚಟುವಟಿಕೆಗಳು ನಮ್ಮ ದೇಹದ ಬಹುತೇಕ ಶಕ್ತಿಯನ್ನು ನುಂಗಿ ಹಾಕಿ ಬಿಡುತ್ತವೆ ಎಂಬುದರ ಅರಿವಿಲ್ಲ.
ಅನಗತ್ಯ ವಿಚಾರಗಳಲ್ಲಿ ಶಕ್ತಿಯ ವ್ಯಯ
ಇತ್ತೀಚಿನ ದಿನಗಳಲ್ಲಿ ನಾವು ದೈಹಿಕವಾಗಿ ಆಯಾಸಕರವಾದ ಏನನ್ನೂ ಮಾಡದಿದ್ದರೂ ಸಹ, ಸುಲಭವಾಗಿ ಸುಸ್ತಾಗಿ ಬಿಡುತ್ತೇವೆ. ನಮ್ಮ ದೇಹದ ಶಕ್ತಿಯು ನಾವು ಮಾಡುವ ಮನೆಕೆಲಸ ಅಥವಾ ದೈಹಿಕ ಶಕ್ತಿಯಿಂದ ಮಾತ್ರ ಹೋಗುವುದಿಲ್ಲ. ನಾವು ವ್ಯವಹರಿಸುವ ಜನರು, ನಾವು ಮಾಡುವ ಆಲೋಚನೆಗಳು ಮತ್ತು ನಾವು ನಮ್ಮನ್ನು ಸಿಲುಕಿಸಿಕೊಳ್ಳುವ ಸನ್ನಿವೇಶಗಳಿಂದಲೂ ನಮ್ಮ ಶಕ್ತಿ ಕಳೆಯಲ್ಪಡುತ್ತದೆ. ನಮಗೆ ಅರಿವಿರದ ಮತ್ತೊಂದು ವಿಚಿತ್ರವೆಂದರೆ ನಾವು ನಮಗೆ ಬೇಡವಾದ ಅನಗತ್ಯ ವಿಚಾರಗಳಲ್ಲಿ ನಮ್ಮ ಶಕ್ತಿಯನ್ನು ವ್ಯಯಿಸುತ್ತೇವೆ ಎಂಬುದು.
ಇದು ನೀವು ಸಂಪರ್ಕ ಹೊಂದಿರುವ ಜನರ ಜೊತೆ ಒಡನಾಟ ಕಡಿತಗೊಳಿಸುವ ಬಗ್ಗೆ ಅಲ್ಲ, ನಿಮ್ಮ ಸಮಯ, ಗಮನ ಮತ್ತು ಭಾವನಾತ್ಮಕ ಪ್ರಯತ್ನ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ನಿಮಗೆ ಗಮನವಿರಬೇಕು ಎಂಬುದರ ಬಗ್ಗೆ ಏಕೆಂದರೆ ಎಲ್ಲವೂ ಅಥವಾ ಎಲ್ಲರೂ ನೀವು ನೀಡುವ ಗೌರವಕ್ಕೆ ಸ್ಥಾನಮಾನಕ್ಕೆ ಅರ್ಹರಾಗಬೇಕೆಂದೇನು ಇಲ್ಲ.
ಮೆಚ್ಚದವರ ಮೆಚ್ಚಿಸುವ ಪ್ರಯತ್ನ
ಸಾಮಾನ್ಯವಾಗಿ ಜನರು ನಮ್ಮನ್ನು ಮೆಚ್ಚಿದಾಗ ಖುಷಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಕಾಳಜಿ ಮಾಡುವ ವ್ಯಕ್ತಿಗಳು ನಮಗೆ ಅದೇ ರೀತಿ ಗೌರವಿಸಿದಾಗ ತುಂಬಾ ಖುಷಿಯಾಗುತ್ತದೆ. ಆದರೆ ನೀವು ನೀಡುವ ಗೌರವ ಪ್ರೀತಿಯನ್ನು ಒಬ್ಬರು ನಿರಂತರವಾಗಿ ನಿರ್ಲಕ್ಷಿಸುವುದು ಅಥವಾ ಕಡೆಗಣಿಸುವುದು ಮಾಡುತ್ತಿದ್ದರೆ, ಅಥವಾ ನಿಮಗೆ ಮಾನಸಿಕವಾಗಿ ಬೆಂಬಲ ಬೇಕು ಎಂದಾಗ ಅವರು ನಿಮ್ಮ ಜೊತೆಗೆ ನಿಲ್ಲುವುದಿಲ್ಲ ಎಂದು ತಿಳಿದ ನಂತರವೂ ನೀವು ಅವರ ಜೊತೆ ನಿಲ್ಲುವ ಅವರು ನೀಡದ ಗೌರವವನ್ನು ನಿರೀಕ್ಷಿಸುತ್ತಾ ನಿಲ್ಲುವ ಅಗತ್ಯವಿಲ್ಲ, ನೀವು ಯಾವಾಗಲೂ ನಿಮ್ಮನ್ನು ಸಾಬೀತುಪಡಿಸುತ್ತಲೇ ಇರುವ ಅಗತ್ಯವಿಲ್ಲ, ಯಾರಾದರೂ ನಿಮಗೆ ಗೌರವಿಸದೇ ಹೋದ ಮಾತ್ರಕ್ಕೆ ನಿಮ್ಮ ಮೌಲ್ಯ ಏನು ಕಡಿಮೆ ಆಗುವುದಿಲ್ಲ, ಹೀಗಿದ್ದೂ ನೀವು ಒಬ್ಬರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಲೇ ಹೋದರೆ ನಿಮ್ಮ ಮಾನಸಿಕ ಶಖ್ತಿ ಕಡಿಮೆಯಾಗುವುದೇ ಹೊರತು ಬೇರೇನೂ ಬದಲಾವಣೆ ಆಗುವುದಿಲ್ಲ.
ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತೆ
ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕರು ಬೇರೆಯವರು ಏನು ಹೇಳುತ್ತಾರೆ ಎಂದು ಯೋಚಿಸುವುದರಲ್ಲಿಯೇ ಬಹುತೇಕ ತಮ್ಮ ಶಕ್ತಿಯನ್ನು ವ್ಯಯ ಮಾಡುತ್ತಾರೆ. ಆದರೆ ಸತ್ಯವೆಂದರೆ, ಹೆಚ್ಚಿನ ಜನರು ತಮ್ಮ ಸ್ವಂತ ಜೀವನದಲ್ಲಿ ತುಂಬಾ ಬಿಡುವಿಲ್ಲದಷ್ಟು ಬ್ಯುಸಿಯಾಗಿರುತ್ತಾರೆ. ಅವರಿಗೆ ನಾವು ಭಯಪಡುವಷ್ಟು ನಮ್ಮ ಬಗ್ಗೆ ಯೋಚಿಸಲು ಸಮಯವಿರುವುದಿಲ್ಲ, ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ನಿಮ್ಮ ಕೆಲಸವಲ್ಲ. ಅವರ ಅಭಿಪ್ರಾಯಗಳ ಸುತ್ತ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವುದು ನಿಮ್ಮ ಮನಶಾಂತಿಯನ್ನು ಹಾಳು ಮಾಡಬಹುದು.
ಏಕಪಕ್ಷೀಯ ಅಥವಾ ಒನ್ ವೇ ಸಂಬಂಧಗಳು
ಸ್ನೇಹ, ಕುಟುಂಬ ಸಂಬಂಧಗಳು, ಪ್ರೀತಿ ಯಾವುದೇ ಸಂಬಂಧ ಇರಲಿ ಚೆನ್ನಾಗಿರುವುದಕ್ಕೆ ಎರಡೂ ಕಡೆಯಿಂದ ಪ್ರಯತ್ನ ಇರಬೇಕು. ನೀವು ಯಾವಾಗಲೂ ಅವರ ಕಷ್ಟಕ್ಕೆ ಓಡುತ್ತಿದ್ದರೆ, ಅವರೊಂದಿಗೆ ಮಾತನಾಡುತ್ತಿದ್ದರೆ ಅವರಿಗಾಗಿ ಹೊಂದಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆಯಿಂದಲೂ ನಿಮಗೆ ಅದೇ ರೀತಿಯ ಸ್ಪಂದನೆ ಇರಬೇಕು. ನಿಮ್ಮಂತೆಯೇ ನಿಮ್ಮ ಪಾರ್ಟನರ್ ಸಂಬಂಧದಲ್ಲಿ ಸಮಾನವಾಗಿ ಹೂಡಿಕೆ ಮಾಡಿದ್ದಾರಾ ಎಂದು ಕೇಳುವುದು ಬಹಳ ಅಗತ್ಯ, ಒಂದು ವೇಳೆ ಇಲ್ಲ ಎಂದಾದಲ್ಲಿ ಇದು ಕೂಡ ವೇಸ್ಟ್ ಇನ್ವೆಸ್ಟ್‌ಮೆಂಟ್. ಇದು ಕೂಡ ನಿಮ್ಮ ಮಾನಸಿಕ ಆರೋಗ್ಯದ ಜೊತೆ ನಿಮ್ಮ ಶಕ್ತಿಯನ್ನು ಕುಂದುವಂತೆ ಮಾಡಬಹುದು.
ನಿಮ್ಮದಲ್ಲದ ವಿಷಯಗಳಿಗೆ ಮೂಗು ತೂರಿಸಿ ಜವಾಬ್ದಾರಿ ತೆಗೆದುಕೊಳ್ಳುವುದು
ಸಹಾಯ ಮಾಡುವುದು ಒಳ್ಳೆಯದು, ಆದರೆ ನಿಮ್ಮದಲ್ಲದ ವಿಚಾರದಲ್ಲಿ ಎಲ್ಲವನ್ನೂ ನೀವೇ ಸರಿಪಡಿಸುವುದು ಒಳ್ಳೆಯದಲ್ಲ, ವಿಶೇಷವಾಗಿ ಬೇರೆಯವರದಾದ ಜವಾಬ್ದಾರಿಯನ್ನು ಅವರೇ ನಿಭಾಯಿಸಲು ಅಥವಾ ಸರಿಪಡಿಸಲು ಮನಸ್ಸು ಮಾಡದೇ ಇದ್ದಾಗ ನೀವು ಮುಂದೆ ಹೋಗಿ ಅವರ ಜವಾಬ್ದಾರಿಯನ್ನು ನೀವು ತೆಗೆದುಕೊಂಡು ಗೊಂದಲದಲ್ಲಿ ಸಿಲುಕಿಕೊಳ್ಳುವುದು ಸರಿಯಲ್ಲ, ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಎಲ್ಲದಕ್ಕೂ ಒಂದು ಆರೋಗ್ಯಕರ ಮಿತಿಯನ್ನು ಹಾಕಿ. ಕರುಣೆ ತೋರಿಸುವುದು ಎಂದರೆ ಇಡೀ ಜವಾಬ್ದಾರಿಯನ್ನು ನೀವೇ ಹೊರುವುದಲ್ಲ.
ಸದಾ ಆಕ್ಟಿವ್ ಆಗಿರುವುದು:
ನಾವು ಪ್ರತಿದಿನವೂ ನಮ್ಮನ್ನು ನಾವು ಆಕ್ಟಿವ್ ಆಗಿ ಇಟ್ಟುಕೊಳ್ಳುವುದಕ್ಕೆ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸುತ್ತೇವೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಸ್ಕ್ರೋಲಿಂಗ್ ಮಾಡುವುದು ಇತರ ಕೆಲಸಗಳನ್ನು ಮಾಡುವುದು ಹೀಗೆ ನಮ್ಮನ್ನು ನಾವು ಬ್ಯುಸಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಈ ಬ್ಯುಸಿಲೈಫ್ ಯಾವಾಗಲೂ ಒಳ್ಳೆಯದಲ್ಲ, ನೀವು ನಿಮ್ಮನ್ನು ಅರಿತುಕೊಳ್ಳುವುದಕ್ಕೆ ಕೆಲವೊಮ್ಮೆ ಮೌನ ನಿಶ್ಚಲತೆಗಳು ಕೂಡ ಅಗತ್ಯ, ಇವು ನಿಮಗೆ ಶಕ್ತಿ ತುಂಬುವುದು.