- Home
- Life
- Relationship
- ಸಾಧನೆಗಿಂತ ಶ್ರಮ ಗುರುತಿಸಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗ್ಬೇಕೆಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಸಾಧನೆಗಿಂತ ಶ್ರಮ ಗುರುತಿಸಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗ್ಬೇಕೆಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆ ಆಗಲು ಪಾಲಕರೇ ಕಾರಣ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಗುಟ್ಟು ಗೊತ್ತಾದ್ರೆ ಪಾಲನೆ ಸುಲಭ, ಮಕ್ಕಳ ಭವಿಷ್ಯ ಕೂಡ ಉಜ್ವಲ. ಅತೀ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಮಕ್ಕಳಲ್ಲಾಗುವ ಬದಲಾವಣೆ ಗುರುತಿಸಿ.

ಮಕ್ಕಳಲ್ಲಿ ಆತ್ಮವಿಶ್ವಾಸ
ಆತ್ಮವಿಶ್ವಾಸ ಮನುಷ್ಯನಲ್ಲಿ ಸಹಜವಾಗಿ ಬರುವ ಗುಣವಲ್ಲ. ಇದನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಪ್ರಸಿದ್ದವಾದಂತೆ ಆತ್ಮವಿಶ್ವಾಸ ರಾತ್ರೋರಾತ್ರಿ ನಿರ್ಮಾಣವಾಗುವುದಿಲ್ಲ. ಇದಕ್ಕೆ ಸಮಯ ಮತ್ತು ತಾಳ್ಮೆ ಅಗತ್ಯ. ಪೋಷಕರು ತಮ್ಮ ಮಕ್ಕಳಿಗೆ ನಿತ್ಯದ ಕೆಲ್ಸದ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಬೇಕು. ಆತ್ಮವಿಶ್ವಾಸ ಅತ್ಯಂತ ಬಲವಾದ ರಕ್ಷಾಕವಚ. ಆತ್ಮವಿಶ್ವಾಸವಿರುವ ಮಗು ಎಂಥ ಪರಿಸ್ಥಿತಿಯನ್ನಾದ್ರೂ ಎದುರಿಸಬಹುದು.
ಬೇಷರತ್ತಾದ ಪ್ರೀತಿ
ಪಾಲಕರು ಬೇಷರತ್ತಾದ ಪ್ರೀತಿ ತೋರಿಸಿದ್ರೆ ಮಕ್ಕಳಲ್ಲಿ ಆತ್ಮವಿಶ್ವಾಸ ತಾನಾಗಿಯೇ ಬೆಳೆಯುತ್ತದೆ. ಅವರ ಸಾಧನೆಗಳನ್ನು ಲೆಕ್ಕಿಸದೆ ಅವರನ್ನು ಪ್ರೀತಿಸುತ್ತೀರಿ ಎಂಬುದು ಮಗುವಿಗೆ ತಿಳಿಯಬೇಕು. ಪಾಲಕರು ತಮ್ಮನ್ನು ಪ್ರೀತಿಸುತ್ತಾರೆ, ತಮ್ಮ ಸಾಧನೆಯನ್ನಲ್ಲ ಎಂಬುದು ಅವರಿಗೆ ಗೊತ್ತಾದಾಗ ಅವರು ಅಪಾಯಗಳನ್ನು ತೆಗೆದುಕೊಳ್ಳಲು, ತಪ್ಪುಗಳನ್ನು ಮಾಡಲು ಮತ್ತು ಭಯವಿಲ್ಲದೆ ಮುಂದುವರಿಯಲು ಪ್ರಯತ್ನಿಸ್ತಾರೆ. ಪಾಲಕರ ಪ್ರೀತಿಯಲ್ಲಿ ಮಕ್ಕಳು ಸುರಕ್ಷಿತವಾಗಿದ್ದಾಗ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ನ್ಯಾಯಯುತ ಆಟ
ಸಾಮಾಜಿಕ ಸ್ವೀಕಾರದ ಜೊತೆ ಆತ್ಮವಿಶ್ವಾಸ ಆಳವಾದ ಸಂಬಂಧ ಹೊಂದಿದೆ. ಹಾಗಾಗಿ ಮಕ್ಕಳಿಗೆ ನ್ಯಾಯಯುತ ಆಟವನ್ನು ಕಲಿಸಬೇಕು. ಸರದಿಗಾಗಿ ಕಾಯದ, ಮೋಸದ ಆಟ ಆಡುವ, ಸೋತಾಗ ಜಗಳ ಆಡುವ ಮಕ್ಕಳನ್ನು ಅವರ ಸ್ನೇಹಿತರು ದೂರ ಇಡ್ತಾರೆ. ಪಾಲಕರಾದವರು ಮಕ್ಕಳಿಗೆ ತಾಳ್ಮೆ, ಕ್ರೀಡಾ ಮನೋಭಾವವನ್ನು ಕಲಿಸಬೇಕು. ಅದಕ್ಕಾಗಿ ಮಕ್ಕಳ ಜೊತೆ ಆಟ ಆಡ್ಬೇಕು. ಮಕ್ಕಳು ಉತ್ತಮವಾಗಿ ಆಟ ಪ್ರದರ್ಶಿಸಿದಾಗ, ಹೊಂದಾಣಿಕೆ ಮಾಡ್ಕೊಂಡು ಪ್ರಾಮಾಣಿಕವಾಗಿದ್ದಾಗ ಇತರರು ಅವರ ಜೊತೆ ಆಟವಾಡ್ತಾರೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಪರಿಣಾಮವಲ್ಲ ಪ್ರಯತ್ನವನ್ನು ಬೆಂಬಲಿಸಿ
ಮಗು ಯಾವುದೇ ಕೆಲ್ಸವನ್ನು ಶ್ರದ್ಧೆಯಿಂದ, ಶ್ರಮವಹಿಸಿ ಮಾಡಿದ್ದರೆ ಅದನ್ನು ಶ್ಲಾಘಿಸಿ. ಅದ್ರ ಫಲಿತಾಂಶಕ್ಕಿಂತ ಶ್ರಮಕ್ಕೆ ಮಹತ್ವ ನೀಡಿ. ಅವರ ಕೆಲ್ಸವನ್ನು ಹೊಗಳಿ. ಅವರು ಎಷ್ಟು ಕಷ್ಟಪಟ್ಟು ಅಧ್ಯಯನ ಮಾಡಿದ್ದರು ಎಂಬುದಕ್ಕೆ ಒತ್ತು ನೀಡಿ. ಇಲ್ಲಿ ಗೆಲುವಿಗಿಂತ ಅಭ್ಯಾಸದ ಸಮಯದಲ್ಲಿ ಅವರು ಎಷ್ಟು ಅರ್ಥಮಾಡಿಕೊಂಡರು, ಅಭ್ಯಾಸಕ್ಕೆ ಎಷ್ಟು ಮಹತ್ವ ನೀಡಿದ್ದರು, ಎಷ್ಟು ಸಮಯ ಮೀಸಲಿಟ್ಟಿದ್ದರು ಎಂಬುದು ಮುಖ್ಯ. ಅದನ್ನು ಮಗುವಿಗೆ ಹೇಳಿ. ಇದು ಒಳಗಿನಿಂದ ಆತ್ಮವಿಶ್ವಾಸವನ್ನು ಬೆಳೆಸಲು ನೆರವಾಗುತ್ತದೆ.
ಅವರ ಹುದ್ದೆ ಬದಲಿಸಿ
ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಇನ್ನೊಂದು ಉತ್ತಮ ಮಾರ್ಗವೆಂದ್ರೆ ಅವರ ಹುದ್ದೆ ಬದಲಿಸುವುದು. ಅವರನ್ನು ಶಿಕ್ಷಕರನ್ನಾಗಿ ಮಾಡಿ. ನಿಮಗೆ ಏನಾದ್ರೂ ಕಲಿಸಲು ಅವರಿಗೆ ಹೇಳಿ. ಅವರ ಜ್ಞಾನ ಹೆಚ್ಚಿಸಲು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ. ಅದಕ್ಕೆ ಅವರು ಉತ್ತರ ನೀಡಿದಾಗ ಅದನ್ನು ಗೌರವಿಸಿ. ಟೀಚಿಂಗ್ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ಬಲಪಡಿ.
ಸಕಾರಾತ್ಮಕ ಅಭ್ಯಾಸ
ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಉತ್ತಮ ಭವಿಷ್ಯಕ್ಕೆ ದಾರಿಮಾಡಿಕೊಡುತ್ತದೆ. ಪ್ರತಿದಿನ ಸಕಾರಾತ್ಮಕತೆಯನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ. ಇಂದು ಅವರು ಮಾಡಿದ ಅತ್ಯುತ್ತಮ ಕೆಲಸ ಏನು, ಇತರರು ಮಾಡಿದ ಕೆಲಸ ಏನು, ಜಗತ್ತಿನಲ್ಲಿ ನಡೆಯುತ್ತಿರುವ ಒಳ್ಳೆ ಕೆಲ್ಸ ಏನು ಎಂಬುದನ್ನು ಅವರಿಗೆ ಕೇಳಿ. ಇದು ಅವರ ಮನಸ್ಸನ್ನು ತಮ್ಮಲ್ಲಿ, ಇತರರಲ್ಲಿ ಮತ್ತು ಜಗತ್ತಿನಲ್ಲಿ ಒಳ್ಳೆಯದನ್ನು ನೋಡಲು ತರಬೇತಿ ನೀಡುತ್ತದೆ.
ಇದೇ ಅಂತಿಮ ಅಲ್ಲ
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಇದೇ ಮಾಂತ್ರಿಕ ಸೂತ್ರಗಳಲ್ಲ. ಇವು ಸರಳ ಹಂತಗಳು. ಭವಿಷ್ಯದಲ್ಲಿ ಇದು ಸಾಕಷ್ಟು ನೆರವಾಗುತ್ತದೆ. ಪೋಷಕರು ಇದನ್ನು ನಿತ್ಯ ಪಾಲಿಸ್ತಾ ಬಂದಲ್ಲಿ, ಮಕ್ಕಳಲ್ಲಿ ನಿಧಾನವಾಗಿ ಆತ್ಮವಿಶ್ವಾಸ ಹೆಚ್ಚಾಗೋದನ್ನು ನೀವು ಗಮನಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

