ಮೈಸೂರು ಯುವತಿಗೆ ಕನ್ನಡದ ವಚನ ಹೇಳಿ ತಾಳಿ ಕಟ್ಟಿದ ನೆದರ್‌ಲ್ಯಾಂಡ್ ಯುವಕ!
ಮೈಸೂರಿನ ಯುವತಿ ವಿದ್ಯಾಳನ್ನು ನೆದರ್‌ಲ್ಯಾಂಡ್‌ನ ರುಟ್ಗೆರ್ ಭಾರತೀಯ ಸಂಪ್ರದಾಯದಂತೆ ವಚನ ಹೇಳಿ ಮದುವೆಯಾದರು. ವಿದ್ಯಾ ವಿದೇಶದಲ್ಲಿ ಓದುತ್ತಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕುಟುಂಬದವರ ಆರಂಭಿಕ ವಿರೋಧದ ನಂತರ, ಮದುವೆಗೆ ಒಪ್ಪಿಗೆ ಸೂಚಿಸಿದರು.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಯುವತಿ ವಿದ್ಯಾಳನ್ನು ಪ್ರೀತಿ ಮಾಡಿದ ನೆದರ್‌ಲ್ಯಾಂಡ್‌ನ ಯುವಕ ರುಟ್ಗೆರ್ ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಭಾರತೀಯ ಪದ್ದತಿಯಂತೆ ವಚನ ಹೇಳಿ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾರೆ.
ಭಾರತೀಯ ಸಂಸ್ಕೃತಿಗೆ ವಿದೇಶಿ ಯುವಕ ಮಾರು ಹೋಗಿದ್ದಾರೆ. ಹೀಗಾಗಿ, ಮೈಸೂರು ಮೂಲದ ಯುವತಿಯನ್ನು ನೆದರ್‌ಲ್ಯಾಂಡ್ ಯುವಕ ಇಂದು ಮದುವೆ ಮಾಡಿಕೊಂಡಿದ್ದಾನೆ. ಮೈಸೂರಿನ ವಿಜಯನಗರ 2ನೇ ಹಂತದ ಖಾಸಗಿ ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ಮದುವೆ ನಡೆದಿದೆ. ವಚನ ಕಲ್ಯಾಣ ಮಹೋತ್ಸವದ ಮೂಲಕ ಮೈಸೂರು ಯುವತಿಗೆ ತಾಳಿ ಕಟ್ಟಿದ ವಿದೇಶಿ ಯುವಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೈಸೂರಿನ ಹೂಟಗಳ್ಳಿಯ ನಿವಾಸಿ ಟಿ.ಎಸ್. ವಿದ್ಯಾ ಅವರನ್ನು ನೆದರ್‌ಲ್ಯಾಂಡ್ ದೇಶದ ರುಟ್ಗೆರ್ ಮದುವೆ ಮಾಡಿಕೊಂಡಿದ್ದಾನೆ. ವಿದ್ಯಾ ಫಾರಿನ್‌ಗೆ ಓದಲು ಹೋಗಿದ್ದ ವೇಳೆ ಇಬ್ಬರ ನಡುವೆ ಕಾಲೇಜು ಸಮಯದಲ್ಲಿಯೇ ಪ್ರೇಮಾಂಕುರ ಆಗಿತ್ತು. ಇದಾದ ನಂತರ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇದಕ್ಕೆ ವಿದ್ಯಾ ಮನೆಯವರು ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರದದ ದಿನಗಳಲ್ಲಿ ಮಗಳ ಇಚ್ಛೆಯಂತೆ ಮದುವೆ ಮಾಡಿಕೊಡಲು ಒಪ್ಪಿಗೆ ಸೂಚಿಸಿದರು.
ಮಗಳ ಮದುವೆಯನ್ನು ವಚನ ಕಲ್ಯಾಣ ಮಹೋತ್ಸವದ ಮೂಲಕ ಮದುವೆ ಮಾಡಿಕೊಡಲು ನಿರ್ಧರಿಸಿದರು. ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದ ಪೀಠಾಧಿಪತಿ ಡಾ. ಗುರುಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿಂದು ವಚನ ಕಲ್ಯಾಣ ಮಹೋತ್ಸವ ನೆರವೇರಿತು. ಅಪರೂಪದ ಮದುವೆಗೆ ಎರಡು ಕಡೆಯ ಕುಟುಂಬಗಳ ಸದಸ್ಯರು ಸಾಕ್ಷಿಯಾದರು.
ವಿದ್ಯಾಳನ್ನು ಮದುವೆಯಾಗಲು ಯುವಕ ರುಟ್ಗೆರ್ ಹಾಗೂ ಆತನೊಂದಿಗೆ ಸಂಬಂಧಿಕರು, ಸ್ನೇಹಿತರು ಸೇರಿ 35 ಜನರು ನೆದರ್‌ಲ್ಯಾಂಡ್‌ನಿಂದ ಮೈಸೂರಿಗೆ ಆಗಮಿಸಿದ್ದರು. ಇನ್ನು ವಿದ್ಯಾಳ ಕುಟುಂಬದ ಎಲ್ಲ ಬಂಧುಗಳೂ ಕೂಡ ಮದುವೆಗೆ ಹಾಜರಾಗಿದ್ದರು. ಎಲ್ಲರೂ ನವ ದಂಪತಿಗಳಿಗೆ ಶುಭ ಕೋರಿದರು.