ಲಕ್ಷಾಂತರ ಮದುವೆ ಮಾಡಿಸಿ 2500 ಕೋಟಿ ರೂ.ಆದಾಯ ಗಳಿಸಿರೋ ವ್ಯಕ್ತಿ ಇವರು!
ಅನುಪಮ್ ಮಿತ್ತಲ್ Shaadi.com ಸ್ಥಾಪಿಸುವ ಮೂಲಕ ಇಲ್ಲಿಯವರೆಗೆ ಲಕ್ಷಾಂತರ ಮದುವೆಗಳನ್ನು ಮಾಡಿದ್ದಾರೆ. ಆ ಮೂಲಕ ಅವರು 50 ಮಿಲಿಯನ್ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದಾರೆ ಎಂದು ಅಧಿಕೃತ ಸೈಟ್ನಲ್ಲಿ ಹೇಳಲಾಗಿದೆ. ಬನ್ನಿ ಅನುಪಮ್ ಮಿತ್ತಲ್ ಯಶೋಗಾಥೆ ತಿಳಿಯೋಣ.
ಹುಟ್ಟು ಮತ್ತು ಸಾವು ಮಾನವ ಜೀವನದ ಪ್ರಮುಖ ಘಟ್ಟಗಳು ಅನ್ನೋದು ನಿಜ. ಈ ಎರಡನ್ನು ಹೊರತುಪಡಿಸಿ, ಜೀವನದ ಮತ್ತೊಂದು ಪ್ರಮುಖ ಘಟ್ಟ ಎಂದರೆ ಮದುವೆ. ಹುಟ್ಟು ಮತ್ತು ಸಾವು ಮನುಷ್ಯರ ಕೈಯಲ್ಲಿಲ್ಲ, ಆದರೆ ಮದುವೆಯ (marriage) ವಿಷಯಕ್ಕೆ ಬಂದಾಗ, ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಸ್ವಂತ ಇಚ್ಛೆಯ ಬಗ್ಗೆ ಯೋಚಿಸಿದ ನಂತರವೇ ನಿರ್ಧರಿಸುತ್ತಾರೆ. ಈ ಹೊಸ ಸಂಬಂಧ ಹುಟ್ಟುವ ಮೊದಲು, ಹುಡುಗ ಮತ್ತು ಹುಡುಗಿಯನ್ನು ಹೊರತುಪಡಿಸಿ, ಎರಡೂ ಕಡೆಯ ಕುಟುಂಬಗಳು ಸಂಪೂರ್ಣವಾಗಿ ಬೆರೆತು ಒಂದಾಗಲಿದೆ. ಈಗಂತೂ ಎರಡೂ ಕುಟುಂಬಗಳಲ್ಲದೆ, ಇನ್ನೂ ಒಬ್ಬ ವ್ಯಕ್ತಿ ಸಹ ಈ ಮದುವೆಯ ಬಂಧ ಬೆಸೆಯುವಲ್ಲಿ ಉಪಸ್ಥಿತರಿರುತ್ತಾರೆ, ಅವರಿಲ್ಲದೆ ಮದುವೆ ನಡೆಯಲು ಸಾಧ್ಯವಿಲ್ಲ. ಆ ವ್ಯಕ್ತಿಯನ್ನು ಮಿಡಲ್ ಮ್ಯಾನ್ ಎಂದು ಕರೆಯಲಾಗುತ್ತದೆ.
ಭಾರತೀಯ ಸಮಾಜದಲ್ಲಿ, ಈ ಬ್ರೋಕರ್ (broker) ಹುಡುಗ ಮತ್ತು ಹುಡುಗಿಯ ಕುಟುಂಬಗಳನ್ನು ಒಂದುಗೂಡಿಸುತ್ತಾನೆ ಮತ್ತು ಎರಡೂ ಪಕ್ಷಗಳನ್ನು ತೃಪ್ತಿಪಡಿಸಲು ಕೆಲಸ ಮಾಡುತ್ತಾನೆ. ಸಾಮಾನ್ಯವಾಗಿ, ಪಂಡಿತ ಅಥವಾ ಇತರ ಯಾವುದೇ ಸಂಬಂಧಿಕರು ಮಧ್ಯವರ್ತಿ ಪಾತ್ರವನ್ನು ವಹಿಸುತ್ತಾರೆ. ಆದರೆ, ಇಲ್ಲಿಯವರೆಗೆ 50 ಮಿಲಿಯನ್ ಮದುವೆ ಮಾಡಿದ ಭಾರತದ ಅತಿದೊಡ್ಡ ಮಧ್ಯವರ್ತಿ ಯಾರು ಎಂದು ನಿಮಗೆ ತಿಳಿದಿದೆಯೇ? ಈ ಮದ್ಯವರ್ತಿಯ ಕೆಲಸ ಮಾಡುವ ಮೂಲಕ ಆತ ಎಷ್ಟು ಸಂಪಾದಿಸಿದ್ದಾನೆ ಅನ್ನೋದು ಗೊತ್ತಾ? ಮಿಡಲ್ ಮ್ಯಾನ್ ಅಥವಾ ಬ್ರೋಕರ್ ಆಗಿ ಕೆಲಸ ಮಾಡಿದ ಆ ವ್ಯಕ್ತಿ ಇದೀಗ ದೂರದರ್ಶನದಲ್ಲಿ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಾರೆ, ದೊಡ್ಡ ಕಾರುಗಳಲ್ಲಿ ಓಡಾಡುತ್ತಾರೆ ಅವರ ಸ್ವಂತ ಕಂಪನಿಯ ಒಟ್ಟು ನಿವ್ವಳ ಮೌಲ್ಯ 2,500 ಕೋಟಿ ರೂ.
ಈ ವ್ಯಕ್ತಿ ಯಾರು ಎಂದು ನಿಮಗೆ ಇನ್ನೂ ಅರ್ಥವಾಗದಿದ್ದರೆ, ನಾವು ಹೇಳ್ತೀವಿ ಕೇಳಿ. ಆ ವ್ಯಕ್ತಿಯ ಹೆಸರು ಅನುಪಮ್ ಮಿತ್ತಲ್ (Anupam Mittal). ಅನುಪಮ್ ಮಿತ್ತಲ್, ಶಾದಿ ಡಾಟ್ ಕಾಮ್ (Shaadi.com) ಸ್ಥಾಪಕ. ಇತ್ತೀಚಿನ ದಿನಗಳಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.. ಹೊಸ ಬಿಜಿನೆಸ್ ಆರಂಭಿಸುವವರು ಅನುಪಮ್ ಮಿತ್ತಲ್ ತಮ್ಮ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಅವರು ಬಯಸುತ್ತಾರೆ. ಇಲ್ಲಿಯವರೆಗೆ 50 ಮಿಲಿಯನ್ ಸಂಬಂಧಗಳು ಶಾದಿ ಡಾಟ್ ಕಾಮ್ ನಿಂದ ಬೆಸೆದಿವೆ ಎಂದು Shaadi.com ತಿಳಿಸಿದೆ. ಇಷ್ಟೊಂದು ಯಶಸ್ಸು ಪಡೆದ ಅನುಪಮ್ ಮಿತ್ತಲ್ ಅವರ ಯಶಸ್ಸಿನ ಕಥೆ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.
ಮುಂಬೈನಲ್ಲಿ ಜನಿಸಿದ ಅನುಪಮ್ ಮಿತ್ತಲ್ ಜೈ ಹಿಂದ್ ಕಾಲೇಜಿನಲ್ಲಿ ಆರಂಭಿಕ ಅಧ್ಯಯನ ಮತ್ತು ಅಮೆರಿಕದ ಬೋಸ್ಟನ್ ಕಾಲೇಜಿನಿಂದ ಆಪರೇಶನ್ ಮತ್ತು ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಪದವಿ ಪಡೆದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಯುಎಸ್ನಲ್ಲಿಯೇ ಉತ್ಪನ್ನ ವ್ಯವಸ್ಥಾಪಕರಾಗಿ (product manager) ಕೆಲಸ ಪಡೆದರು. ಈ ಕೆಲಸವು ಹೆಚ್ಚು ಕಾಲ ಉಳಿಯಲಿಲ್ಲ , ಹಾಗಾಗಿ ಅವರು ಅಮೆರಿಕವನ್ನು ತೊರೆದು ಭಾರತಕ್ಕೆ ಬಂದರು. ಭಾರತಕ್ಕೆ ಮರಳಿದ ನಂತರ, ಅವರು ತಮ್ಮ ತಂದೆಯ ಕಚೇರಿಯಲ್ಲಿ ವೆಬ್ ಡೆವಲಪರ್ (web developer) ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಅನುಪಮ್ ಗೆ 25 ವರ್ಷ ವಯಸ್ಸಾಗಿತ್ತು.
Shaadi.com ಕಲ್ಪನೆ ಹೇಗೆ ಬಂತು?
ತನ್ನ ತಂದೆಯ ಕಚೇರಿಯಲ್ಲಿ ಕೆಲಸ ಮಾಡುವಾಗ, ಅನುಪಮ್ ಮಿತ್ತಲ್ ಗೆ ಸಾಂಪ್ರದಾಯಿಕ ಬ್ರೋಕರ್ ಕಣ್ಣಿಗೆ ಬಿದ್ದರು. ಈ ಬ್ರೋಕರ್ ಅನುಪಮ್ ಅವರನ್ನು ತನ್ನ ಗ್ರಾಹಕರಿಗೆ ಪರಿಚಯಿಸಲು ಪ್ರಾರಂಭಿಸಿದನು. ಆಗ ಅನುಪಮ್ ಗೆ ಇದು ವ್ಯವಹಾರ ಎಂದು ಅರಿವಾಯಿತು. ಆದರೆ ಇಲ್ಲಿ ಜನರಿಗೆ ಹೆಚ್ಚಿನ ಆಯ್ಕೆಗಳಿರೋದಿಲ್ಲ. ಲಭ್ಯವಿರುವದರಿಂದ ಒಬ್ಬರು ಆಯ್ಕೆ ಮಾಡಬೇಕು. ಹಾಗಾಗಿ ಮಿತ್ತಲ್ ಜನರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲು, 1996 ರಲ್ಲಿ ಸಗಾಯಿ ಡಾಟ್ ಕಾಮ್ (Sagaai.com) ಎಂಬ ವೆಬ್ಸೈಟ್ ಪ್ರಾರಂಭಿಸಿದರು.
ಜನರಿಗೆ ವಧು ಮತ್ತು ವರನನ್ನು ಹುಡುಕಲು ವರ್ಚುವಲ್ ಸ್ಥಳವನ್ನು (virtual space) ಒದಗಿಸುವುದು ಏಕೈಕ ಉದ್ದೇಶದಿಂದ ಅವರು ಈ ವೆಬ್ಸೈಟ್ ಅನ್ನು ಪ್ರಾರಂಭಿಸಿದರು, ಆದರೆ ಈ ಕೆಲಸಕ್ಕೆ ಪೂರ್ಣ ಸಮಯವನ್ನು ನೀಡಲು ಸಾಧ್ಯವಾಗಲಿಲ್ಲ. 2000-2001ರಲ್ಲಿ, ಡಾಟ್-ಕಾಮ್ ಬಬಲ್ ಸ್ಫೋಟಗೊಳ್ಳಲು ಪ್ರಾರಂಭಿಸುವಷ್ಟು ಬಿಕ್ಕಟ್ಟು ಇತ್ತು. ಅನೇಕ ಕಂಪನಿಗಳು ದಿವಾಳಿಯಾದವು. ಅನುಪಮ್ ಮೈಕ್ರೋ ಸ್ಟ್ರಾಟಜಿ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಇದರ ಮೇಲೆ ಸಹ ಭಾರಿ ಪರಿಣಾಮ ಉಂಟಾಗಿತ್ತು.
ವಿಪತ್ತು ಅವಕಾಶವಾಗಿ ಬದಲಾಯಿತು
ಅದೇ ಸಮಯದಲ್ಲಿ, ಅನುಪಮ್ ಮಿತ್ತಲ್ ಅನೇಕ ಅಮೆರಿಕನ್ನರು ತಮಗಾಗಿ ಸಂಗಾತಿಯನ್ನು ಹುಡುಕುತ್ತಿರುವ ಸೈಟ್ ಅನ್ನು ನೋಡಿದರು. ಮಿತ್ತಲ್ ಅವರ ಮನಸ್ಸು ಕೆಲಸ ಮಾಡಿತು ಮತ್ತು ಅವರು ಅದನ್ನೇ ಬ್ಯುಸಿನೆಸ್ ಮಾಡುವ ಬಗ್ಗೆ ಯೋಚಿಸಿದರು. ಆ ಸಮಯದಲ್ಲಿ ಭಾರತದಲ್ಲಿ ಕೆಲವೇ ಇಂಟರ್ನೆಟ್ ಬಳಕೆದಾರರಿದ್ದರು (internet user), ಇದು ಅವರ ಕೆಲಸದಲ್ಲಿ ದೊಡ್ಡ ಬಿಕ್ಕಟ್ಟಾಗಿತ್ತು. ಭಾರತದಲ್ಲಿ ಇಂಟರ್ನೆಟ್ ಇನ್ನೂ ಹೆಚ್ಚಾಗಿ ಬಳಕೆಯಲ್ಲಿ ಇಲ್ಲದ ಸಮಯದಲ್ಲಿ, ಮಿತ್ತಲ್ ಯುಎಸ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡರು. ಯುಎಸ್ ಮತ್ತು ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಅಂತಹ ಅಗತ್ಯಗಳು ಇದ್ದವು.
ಸಗಾಯಿ ಡಾಟ್ ಕಾಮ್ ಹೆಸರು ಮದುವೆಗೆ ಸೂಕ್ತವಲ್ಲ ಎಂದು ಅನುಪಮ್ ಮಿತ್ತಲ್ ಗೆ ಬಳಿಕ ಅನಿಸಿತು. ಅವರು USAನಲ್ಲಿ ತಮ್ಮ ಕೆಲಸವನ್ನು ತೊರೆದಾಗ, ಅವರು ತಮ್ಮ ಪೋರ್ಟಲ್‌ನ ಹೆಸರನ್ನು Shaadi.com (Shaadi.com) ಎಂದು ಬದಲಾಯಿಸಿದರು. ಮದುವೆಗಾಗಿ ವಧು ಮತ್ತು ವರನನ್ನು ಹುಡುಕಲು ಪ್ರತ್ಯೇಕ ಪೋರ್ಟಲ್ ನಿರ್ಮಾಣವಾದದ್ದು ಅನುಪಮ್ ಮಿತ್ತಲ್ ಅವರಿಂದಲೇ.
ಇಂಟರ್ನೆಟ್ ಇಲ್ಲದೇ ಇದ್ದಾಗ, ಕೆಲಸ ಆದದ್ದಾದರು ಹೇಗೆ?
2001ರಲ್ಲಿ ಕೂಡ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಡಿಮೆ ಇತ್ತು. ಎರಡನೆಯದು ಆತ್ಮವಿಶ್ವಾಸದ ಸಮಸ್ಯೆ. ಇಲ್ಲಿಯವರೆಗೆ ಪಂಡಿತರು ಮತ್ತು ಸಂಬಂಧಿಕರ ಮೂಲಕ ಮಾಡಿದ ಇಂತಹ ಕೆಲಸವನ್ನು ಪೋರ್ಟಲ್ ಮೂಲಕ ಹೇಗೆ ಮಾಡಲು ಸಾಧ್ಯ? ಅನುಪಮ್ ಮಿತ್ತಲ್ ತಮ್ಮ ಮತ್ತೊಮ್ಮೆ ಯೋಚಿಸಿ ಆಫ್ಲೈನ್ ಕೇಂದ್ರ ತೆರೆದರು. 2004 ರಲ್ಲಿ ತೆರೆಯಲಾದ ಈ ಕೇಂದ್ರ ವೈವಾಹಿಕ ಸೇವೆಗಳನ್ನು (marriage service) ನೀಡಿತು. ಈ ಕೇಂದ್ರಕ್ಕೆ 'ಶಾದಿ ಕೇಂದ್ರ' ಎಂದು ಹೆಸರಿಡಲಾಯಿತು.
ಕ್ರಮೇಣ, ಇಂಟರ್ನೆಟ್ ಬಳಕೆದಾರರು ಹೆಚ್ಚಾಗಲು ಪ್ರಾರಂಭಿಸಿದರು ಮತ್ತು ಜನರು ವೈಯಕ್ತಿಕಗೊಳಿಸಿದ ಸೇವೆಗಳನ್ನು ಇಷ್ಟಪಟ್ಟಿದ್ದರಿಂದ Shaadi.com ಬ್ರಾಂಡ್ ಆಗಿ ಹೊರಹೊಮ್ಮಲು ಪ್ರಾರಂಭಿಸಿದರು. 2008 ರಲ್ಲಿ, ಪೋರ್ಟಲ್ 10 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು ಮತ್ತು 1 ಮಿಲಿಯನ್ ಜನರು ಶಾದಿ ಡಾಟ್ ಕಾಮ್ ಮೂಲಕ ವಿವಾಹವಾದರು. ಈ ಹೊತ್ತಿಗೆ ಇದು ದೇಶದ ಅತಿದೊಡ್ಡ ಮತ್ತು ಜನಪ್ರಿಯ ಪೋರ್ಟಲ್ ಆಗಿ ಮಾರ್ಪಟ್ಟಿತ್ತು. ಇಂದು 50 ಮಿಲಿಯನ್ ಮದುವೆ ಮಾಡಿಸಿದ ಕೀರ್ತಿ ಇವರದ್ದು. ಅಷ್ಟೇ ಯಾಕೆ ಇಂದಿಗೂ, ಅಂತರ್ಜಾಲದಲ್ಲಿ ಮದುವೆಗಾಗಿ ಹುಡುಗ, ಹುಡುಗಿ ಹುಡುಕಲು ಮೊದಲ ಆಯ್ಕೆಯಾಗಿ Shaadi.com ಉಳಿದಿದೆ. 27 ವರ್ಷಗಳ ಪ್ರಯಾಣದಲ್ಲಿ, ಭಾರತದ 72 ನಗರಗಳಲ್ಲಿ 123 ವಿವಾಹ ಕೇಂದ್ರಗಳನ್ನು ಮಿತ್ತಲ್ ಆರಂಭಿಸಿದ್ದಾರೆ.
ಶಾದಿ ಡಾಟ್ ಕಾಮ್ ಮೂಲಕ ಅನುಪಮ್ ಮಿತ್ತಲ್ ಕೋಟ್ಯಾಂತರ ಹಣ ಗಳಿಸಿದೆ. ಇವರ ನೆಟ್ ವರ್ತ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಅನೇಕ ಮಾಧ್ಯಮ ವರದಿಗಳು ಮಿತ್ತಲ್ 158 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ ಎಂದು ಸೂಚಿಸುತ್ತವೆ. ಅನುಪಮ್ ಮಿತ್ತಲ್, ಪತ್ನಿ ಆಂಚಲ್ ಕುಮಾರ್ (Anchal Kumar) ಮತ್ತು ಮಗಳು ಅಲಿಸ್ಸಾ ದಕ್ಷಿಣ ಮುಂಬೈನ ಐಷಾರಾಮಿ ಪ್ರದೇಶದಲ್ಲಿ 6 ಬಿಎಚ್ಕೆ ಮನೆಯಲ್ಲಿ ವಾಸಿಸುತ್ತಿದ್ದಾರೆ..