- Home
- Life
- Relationship
- ಬೆಂಗ್ಳೂರಲ್ಲಿ 5 ತಿಂಗಳು ಲಿವ್ ಇನ್ ರಿಲೇಶನ್ಶಿಪ್; ಹಾಸನ ಗೆಳೆಯನ ಮನೆ ಮುಂದೆ ಯುವತಿ ಧರಣಿ
ಬೆಂಗ್ಳೂರಲ್ಲಿ 5 ತಿಂಗಳು ಲಿವ್ ಇನ್ ರಿಲೇಶನ್ಶಿಪ್; ಹಾಸನ ಗೆಳೆಯನ ಮನೆ ಮುಂದೆ ಯುವತಿ ಧರಣಿ
ಬೆಂಗಳೂರಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸೂರ್ಯ ಮತ್ತು ಗಾಯಿತ್ರಿ ಐದು ತಿಂಗಳು ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದ ಸೂರ್ಯ ಮತ್ತು ಆತನ ಪೋಷಕರು ಈಗ ಪರಾರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಶುರುವಾದ ಪ್ರೀತಿ
ಕಾಸರಗೋಡು ಮೂಲದ ಗಾಯಿತ್ರಿ (ಹೆಸರು ಬದಲಾಯಿಸಲಾಗಿದೆ) ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಲೇಸೋಮನಹಳ್ಳಿ ಗ್ರಾಮದ ಸೂರ್ಯ ಎಂಬುವವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಕಳೆದ ಐದು ತಿಂಗಳುಗಳಿಂದ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು.
ಮದುವೆಯಾಗುವುದಾಗಿ ನಂಬಿಸಿ ಪರಾರಿ
ಸೂರ್ಯ ಎಂಬ ಯುವಕನು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಈಗ ತನಗೆ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಯುವತಿ ಗಾಯಿತ್ರಿ ಆರೋಪಿಸಿದ್ದಾರೆ. ಯುವತಿ ಅನ್ಯ ಜಾತಿಯವಳು ಮತ್ತು ಬೇರೆ ರಾಜ್ಯದವಳು ಎಂಬ ಕಾರಣಕ್ಕೆ ಸೂರ್ಯನ ಪೋಷಕರು ಇವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವತಿಯ ಧರಣಿ ಮತ್ತು ಪ್ರತಿಭಟನೆ
ಮೋಸ ಹೋದ ಯುವತಿ ಗಾಯಿತ್ರಿ ಅವರು ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿರುವ ಸೂರ್ಯನ ಮನೆಯ ಮುಂಭಾಗದಲ್ಲಿಯೇ ಧರಣಿ ಕುಳಿತಿದ್ದಾರೆ. ಈ ಹಿಂದೆ ನ್ಯಾಯ ಸಿಗದಿದ್ದಾಗ ಯುವತಿ ಆತ್ಮ*ತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಈಗ ಹಗಲು-ರಾತ್ರಿ ಎನ್ನದೇ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೋಷಕರ ಎಸ್ಕೇಪ್ ಮತ್ತು ಪೊಲೀಸ್ ಮಧ್ಯಸ್ಥಿಕೆ
ಈ ವಿಷಯವಾಗಿ ಅಕ್ಟೋಬರ್ 22 ರಂದು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದರು. ಭಾನುವಾರ ಠಾಣೆಗೆ ಬರುವುದಾಗಿ ಹೇಳಿದ್ದ ಸೂರ್ಯನ ಪೋಷಕರು, ಈಗ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾರೆ.
ಕಾನೂನು ಕ್ರಮ
ಪ್ರಿಯಕರನ ಮೋಸದ ವಿರುದ್ಧ ಯುವತಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಿಯಕರ ಸೂರ್ಯ ಸಹ ಗಾಯಿತ್ರಿ ಸಂಪರ್ಕಕ್ಕೆ ಸಿಗದೇ ಎಸ್ಕೇಪ್ ಆಗಿದ್ದಾರೆ. ಲಿವ್ ಇನ್ ರಿಲೇಶನ್ಶಿಪ್ ನಲ್ಲಿರೋ ವಿಷಯ ಸೂರ್ಯನ ತಂಗಿಗೂ ಗೊತ್ತಿತ್ತು. ಆಕೆಯೂ ನಮ್ಮೊಂದಿಗೆ ಮೂರು ತಿಂಗಳು ನಮ್ಮೊಂದಿಗೆ ಇದ್ದಳು. ತಂಗಿ ಮದುವೆ ನಂತ್ರ ಸೂರ್ಯನಿಗೆ ಮದುವೆಯಾಗುವಂತೆ ಆತನ ಪೋಷಕರು ಹೇಳಿದ್ದರು ಎಂದು ಗಾಯಿತ್ರಿ ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.






