ನಿನ್ ಜೊತೆ ಸುಳ್ಳು ಹೇಳೋದಿಲ್ಲಪ್ಪಾ… ಗಂಡಸ್ರು ಹೀಗನ್ನೋದೇ ಸುಳ್ಳಂತೆ !
ಯಾವುದೇ ಸಂಬಂಧವು ಪ್ರೀತಿ ಮತ್ತು ನಂಬಿಕೆಯ ಮೇಲೆ ನಿಂತಿರುತ್ತೆ, ವಿಶೇಷವಾಗಿ ಗಂಡ ಮತ್ತು ಹೆಂಡತಿ ಅಥವಾ ಗೆಳತಿ-ಗೆಳೆಯರ ಸಂಬಂಧದಲ್ಲಿ ವಿಶ್ವಾಸ ಹೊಂದಿರುವುದು ಬಹಳ ಮುಖ್ಯ. ಆದರೆ ಯಾವಾಗ ಸಂಬಂಧದ ನಡುವೆ ಸುಳ್ಳುಗಳು ಬರಲು ಪ್ರಾರಂಭಿಸುತ್ತವೆಯೋ, ಆಗ ಸಂಬಂಧವು ಕೊನೆಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಮಹಿಳೆಯರು, ಪುರುಷರು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಯಾರಾದರೂ ಒಂದಲ್ಲ ಒಂದು ವಿಷಯಕ್ಕೆ ಸುಳ್ಳು ಹೇಳುತ್ತಾರೆ. ಅನೇಕ ಬಾರಿ ಜನರು ಸತ್ಯವನ್ನು ಮರೆ ಮಾಚಲು ಸುಳ್ಳು ಹೇಳುತ್ತಾರೆ. ಇನ್ನು ಕೆಲ ಜನರು ತಪ್ಪನ್ನು ಮರೆಮಾಚಲು ಮತ್ತು ಕೆಲವೊಮ್ಮೆ ಮೋಸ ಮಾಡಲು ಸುಳ್ಳುಗಳನ್ನು ಆಶ್ರಯಿಸುತ್ತಾರೆ. ನಿಮ್ಮ ಸಂಗಾತಿಯೂ ಈ ವಿಷಯಗಳ ಬಗ್ಗೆ ನಿಮ್ಮ ಬಳಿ ಸುಳ್ಳು ಹೇಳಿರಬಹುದು ನೋಡಿ.
ಸುಳ್ಳುಗಳು ಕೇವಲ ನಕಾರಾತ್ಮಕ ವಿಷಯಗಳಲ್ಲಿ ಮಾತ್ರವಲ್ಲ. ಆಗಾಗ್ಗೆ ಜನರು ಸಂಗಾತಿಯನ್ನು ಮೆಚ್ಚಿಸಲು ಅಥವಾ ಸಂಗಾತಿಗೆ ಬೇಜಾರ್ ಆಗದೆ ಇರಲಿ ಅಂತ ಸಹ ಸುಳ್ಳು ಹೇಳುತ್ತಾರೆ. ರಿಲೇಶನ್ ಶಿಪ್ ನಲ್ಲಿ, ಪುರುಷರು ತಮ್ಮ ಸಂಗಾತಿಗೆ ಕೆಲವು ಸಾಮಾನ್ಯ ಸುಳ್ಳುಗಳನ್ನು ಹೇಳುತ್ತಾರೆ. ಪುರುಷರು ತಮ್ಮ ಹೆಂಡತಿ ಅಥವಾ ಗೆಳತಿಗೆ ಹೇಳುವ ಸುಳ್ಳುಗಳ ಬಗ್ಗೆ ತಿಳಿದುಕೊಳ್ಳೋಣ.
ನಾನು ಅವಳನ್ನು ನೋಡೆ ಇಲ್ಲ
ಪುರುಷರು ತಮ್ಮ ಹೆಂಡತಿ ಅಥವಾ ಗೆಳತಿಯೊಂದಿಗೆ ಎಲ್ಲೋ ಹೊರಗೆ ಹೋಗುತ್ತಾರೆ, ಈ ಟೈಮ್ಲಿ ಅವರ ಮುಂಭಾಗದಿಂದ ಇನ್ನೊಬ್ಬ ಮಹಿಳೆ ಹೋಗ್ತಾ ಇರೋದನ್ನು ಸಹ ಇವರು ನೋಡ್ತಾರೆ. ಆದರೆ ಸಂಗಾತಿ ಈ ಬಗ್ಗೆ ಹೇಳಿ ಗದರಿದಾಗ, ಅಯ್ಯೋ ನಾನು ಯಾವ ಹುಡುಗಿಯನ್ನು ಸಹ ನೋಡೇ ಇಲ್ಲ ಎಂದು ಹೇಳುತ್ತಾನೆ. ಇದು ಶುದ್ಧ ಸುಳ್ಳಾಗಿರುತ್ತೆ.
ನೀನು ತುಂಬಾ ಸುಂದರವಾಗಿ ಕಾಣುತ್ತಿರುವೆ
ಅನೇಕ ಬಾರಿ ಹುಡುಗರು ತಮ್ಮ ಗೆಳತಿ/ ಹೆಂಡ್ತಿ ಜೊತೆ ಡೇಟಿಂಗ್‌ಗೆ (dating) ಹೋದಾಗ, ಅವರನ್ನು ಮೆಚ್ಚಿಸೋದಕ್ಕಾಗಿ ಅವರು ಸಂಗಾತಿಯನ್ನು ಸುಮ್ ಸುಮ್ನೆ ಹೊಗಳುತ್ತಾರೆ. ಪುರುಷರು ಹೆಚ್ಚಾಗಿ ಮಹಿಳೆಯ ಲುಕ್, ಕೇಶ ವಿನ್ಯಾಸ ಅಥವಾ ಉಡುಪನ್ನು ಹೊಗಳುತ್ತಾರೆ, ಇವುಗಳ ಬಗ್ಗೆ ಅವರು ಹೆಚ್ಚಿನ ಗಮನ ಹರಿಸದಿದ್ದರೂ ಸಹ ನೀವು ಯಾವಾಗಲೂ ಚೆನ್ನಾಗಿ ಕಾಣುತ್ತೀರಿ ಎಂದು ಅವರು ಆಗಾಗ್ಗೆ ಸುಳ್ಳು ಹೇಳುತ್ತಾರೆ.
ನೀನು ನನ್ನ ಮೊದಲ ಪ್ರೇಮಿ
ಸಂಬಂಧದ ಆರಂಭಿಕ ಹಂತಗಳಲ್ಲಿ ಹುಡುಗರು ಆಗಾಗ್ಗೆ ತಮ್ಮ ಪ್ರೀತಿಯ ಜೀವನದ (love life) ಬಗ್ಗೆ ಸುಳ್ಳು ಹೇಳುತ್ತಾರೆ. ಒಬ್ಬ ಹುಡುಗಿಯನ್ನು ಇಷ್ಟಪಡುತ್ತಿದ್ದರೆ, ಅವನು ತನ್ನನ್ನು ತಾನು ಸಿಂಗಲ್ ಎಂದು ಹೇಳಿಕೊಳ್ಳುತ್ತಾನೆ. ಅಲ್ಲದೇ ತನ್ನ ಜೀವನದಲ್ಲಿ ಬೇರೆ ಯಾವುದೇ ಹುಡುಗಿಯನ್ನು ಕಣ್ಣೆತ್ತಿ ಸಹ ನೋಡಿಲ್ಲ ಎಂದು ತನ್ನ ಸಂಗಾತಿಗೆ ಹೇಳ್ತಾನೆ. ಇದೆಲ್ಲಾ ಶುದ್ಧ ಸುಳ್ಳಾಗಿರುತ್ತೆ.
ಟ್ರಾಫಿಕ್ ಮಧ್ಯೆ ಸಿಕ್ಕಾಕಿಕೊಂಡಿದೀನಿ
ಯಾವುದೇ ಕಾರಣಕ್ಕೂ ಸಂಗಾತಿ ಲೇಟ್ ಆಗಿ ಬಂದ್ರೆ ಅವರಿಂದ ಬರುವ ಒಂದೇ ರೀಸನ್ ಏನಂದ್ರೆ ನಾನು ಟ್ರಾಫಿಕ್ ಮದ್ಯೆ ಸಿಕ್ಕಾಕಿ ಕೊಂಡಿದೀನಿ ಎಂದು. ಅವರಿನ್ನು ಹೊರಟೇ ಇರೋದಿಲ್ಲ, ಅಥವಾ ತುಂಬಾನೆ ಲೇಟ್ ಆಗಿ ಹೊರಟಿರುತ್ತಾರೆ, ಆದರೆ ರೀಸನ್ ಮಾತ್ರ ಟ್ರಾಫಿಕ್ ಎಂದು ಸುಳ್ಳು ಹೇಳುತ್ತಾರೆ.
ನಾನು ನಿನ್ನ ಬಗ್ಗೆ ಮಾತ್ರ ಯೋಚಿಸುತ್ತೇನೆ
ಪುರುಷರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅವರ ಬಗ್ಗೆ ಮಾತ್ರ ಯೋಚಿಸುತ್ತಾರೆ (thinking about you) ಎಂದು ಹೇಳುತ್ತಾರೆ. ನೀವು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಸಂಗಾತಿಯು ಪ್ರಶ್ನಿಸಿದಾಗ, ಅವನು ಇಡೀ ದಿನ ಸಂಗಾತಿಯನ್ನು ಮಿಸ್ ಮಾಡಿಕೊಂಡಿರೋದಾಗಿ ಸುಳ್ಳು ಹೇಳುತ್ತಾನೆ.
ವಿಶೇಷ ದಿನಾಂಕ
ಹೌದು ಗಂಡಸರು ಯಾವಾಗಲೂ ದಿನಾಂಕಗಳನ್ನು (special dates) ಮರೆತು ಬಿಡ್ತಾರೆ. ಅದು ಮದುವೆ ಡೇಟ್ ಇರಲಿ, ಹೆಂಡತಿಯ ಬರ್ತ್ ಡೇ ದಿನ, ಮೊದಲ ಬಾರಿ ಪ್ರಪೋಸ್ ಮಾಡಿದ ದಿನ ಹೀಗೆ ಎಲ್ಲಾ ದಿನವನ್ನು ಮರೆತಿರುತ್ತಾರೆ. ಆದರೆ ಸಂಗಾತಿ ಕೇಳಿದಾಗ ಮಾತ್ರ ಇಲ್ಲ ಇದನ್ನೆಲ್ಲಾ ನಾನು ಹೇಗೆ ಮರೆಯೋದು? ಎಲ್ಲಾ ನನಗೆ ಗೊತ್ತಿದೆ ಎಂದು ಸುಳ್ಳು ಹೇಳ್ತಾರೆ.
ನಾನು ಸುಳ್ಳು ಹೇಳೊದೆ ಇಲ್ಲ
ಇದು ಸಾಮಾನ್ಯವಾಗಿ ಪುರುಷರು ಹೇಳುವಂತಹ ದೊಡ್ಡ ಸುಳ್ಳು. ಹೆಂಡ್ತಿ ಏನಾದ್ರೂ ಯಾಕೆ ನನ್ ಹತ್ರ ಸುಳ್ಳು ಹೇಳೋದು ಅಂತ ಕೇಳಿದ್ರೆ, ಪುರುಷರು ಫಟ್ ಅಂತಾ ಹೇಳಿ ಬಿಡ್ತಾರೆ, ಸುಳ್ಳಾ…. ಇಲ್ಲಾಪ್ಪಾ ನಾನು ಯಾವತ್ತೂ ನಿನ್ ಜೊತೆ ಸುಳ್ಳು ಹೇಳಿಯೇ ಇಲ್ಲ ಎಂದು.