- Home
- Entertainment
- Movie Reviews
- ‘ಅವನಲ್ಲ’ ‘ಅವಳು’ ಎಂಬ ತಿರುವಿನಲ್ಲಿದೆ ಈ ಸಿನಿಮಾ: ಉಸಿರುಗಟ್ಟಿಸುವ ಭಾವಾಂತರ ವಿಮರ್ಶೆ!
‘ಅವನಲ್ಲ’ ‘ಅವಳು’ ಎಂಬ ತಿರುವಿನಲ್ಲಿದೆ ಈ ಸಿನಿಮಾ: ಉಸಿರುಗಟ್ಟಿಸುವ ಭಾವಾಂತರ ವಿಮರ್ಶೆ!
ಭಾವಾಂತರ ಸಿನಿಮಾ ವಿಮರ್ಶೆ: ಕಾರ್ತಿಕ್ ಶರ್ಮಾ ನಿರ್ದೇಶನ ಹಾಗೂ ನಟನೆಯ ಈ ಚಿತ್ರ ಪ್ರೀತಿ, ಲಿಂಗ ಅಸ್ಮಿತೆ, ಭಾವನೆ ಮತ್ತು ಬದುಕಿನ ಹೋರಾಟವನ್ನು ವಿಭಿನ್ನವಾಗಿ ತೆರೆದಿಡುತ್ತದೆ. ಚಿತ್ರದ ಕಥೆ, ತಾರಾಗಣ ಮತ್ತು ರೇಟಿಂಗ್ ಇಲ್ಲಿದೆ.

ಆರ್.ಕೇಶವಮೂರ್ತಿ
ಅವನು ತುಂಬಾ ಒಳ್ಳೆಯ ಹುಡುಗ. ಎಷ್ಟು ಒಳ್ಳೆಯವನು ಅಂತ ಪದಗಳಲ್ಲಿ ಹೇಳಲಾಗದಷ್ಟು. ಅಂಥ ಒಳ್ಳೆಯ ಹುಡುಗನನ್ನು ಅಷ್ಟೇ ಮುಗ್ಧತೆಯಿಂದ ಕೂಡಿದ ಹುಡುಗಿ ಪ್ರೀತಿಸುತ್ತಿದ್ದಾಳೆ. ಈ ಇಬ್ಬರ ಸ್ನೇಹ, ಪ್ರೀತಿಗೆ ಅಂತ್ಯವೇ ಇಲ್ಲ ಎನ್ನುವ ಮಟ್ಟಿಗೆ ಈ ಜೋಡಿಯ ಪಯಣ. ಇನ್ನೇನು ಎಲ್ಲವೂ ಚೆನ್ನಾಗಿದೆಯಲ್ಲ ಎಂದುಕೊಳ್ಳುವಾಗಲೇ ಅಲ್ಲೊಂದು ತಿರುವು ಎದುರಾಗುತ್ತದೆ. ತಣ್ಣಗೆ ದಡ ತಟ್ಟುವ ನೀರಿನ ಅಲೆಗಳಿಗೆ ಗಾಢವಾಗಿ ಅಪ್ಪಿಕೊಳ್ಳುವ ಶಕ್ತಿ ಇರುವಂತೆ ಉಸಿರುಗಟ್ಟಿಸುವ ಅಪಾಯವೂ ಇರುತ್ತದೆ.
‘ಅವನಲ್ಲ’ ‘ಅವಳು’
ಈ ಜೋಡಿಯ ಪ್ರೀತಿಯಲ್ಲಿ ಉಸಿರುಗಟ್ಟುವುದು ಯಾರಿಗೆ ಮತ್ತು ಯಾಕೆ ಎನ್ನುವ ಪ್ರಶ್ನೆ ಮೂಡುವ ಹೊತ್ತಿಗೆ ಇವನು ‘ಅವನಲ್ಲ’ ‘ಅವಳು’ ಎಂಬ ತಿರುವಿನಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ ಈ ಸಿನಿಮಾ. ಭಾವಾಂತರ ಎನ್ನುವ ಚಿತ್ರದ ಹೆಸರಿನಂತೆ ಇದು ಭಾವನೆಗಳ ಅಲೆಗಳ ಮೇಲೆ ಹುಟ್ಟಿಕೊಳ್ಳುವ ಪ್ರೇಮದ ಕತೆ. ಅಲೆಗಳು ತುಂಬಾ ಹೊತ್ತು ಇರಲಾರವು! ಇಲ್ಲಿನ ಪ್ರೀತಿ, ಪ್ರೇಮವೂ ಇದಕ್ಕೆ ಹೊರತಾಗಿಲ್ಲ. ಮುಂದೇನು?
ಹೊಸ ಭಾವಾಂತರ
ಮಂಗಳಮುಖಿ, ಟ್ರಾನ್ಸ್ಜೆಂಡರ್, ತೃತೀಯ ಲಿಂಗಿಗಳು ಹೀಗೆ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ ಅಥವಾ ಗುರುತಿಸುತ್ತಿರುವವರ ಜಗತ್ತಿಗೆ ಕಾರ್ತಿಕ್ ಶರ್ಮಾ ಪ್ರವೇಶಿಸಿದ್ದಾರೆ. ಅವರ ಈ ಪ್ರವೇಶ ಹೊಸ ಭಾವಾಂತರವನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ಹೆಣ್ಣು, ಗಂಡು ಮತ್ತು ಅವನೊಳಗಿರುವ ‘ಆಕೆ’ಯ ಪ್ರೀತಿ, ಪ್ರೇಮ, ಬದುಕು, ಭಾವನೆ, ನೋವು, ಮತ್ತು ಅವರ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.
ನೈಜ ಘಟನೆಗಳಿಂದ ಪ್ರೇರಿತ
ಮಲ್ನೋಟಕ್ಕೆ ಇದು ತ್ರಿಕೋನ ಪ್ರೇಮ ಕತೆಯಾಗಿ ಕಂಡರೂ ಇದು ಅದಲ್ಲ. ಇದು ನೈಜ ಘಟನೆಗಳಿಂದ ಪ್ರೇರಿತವಾಗಿ ಮೂಡಿ ಬಂದಿರುವ ಬೇರೆಯದ್ದೇ ಕತೆ. ‘ಮಾಧವ’, ‘ಮಾಧವಿ’ಯಾಗುವ, ನನಗೆ ಮಾಧವನೇ ಬೇಕು ಎನ್ನುವ ರಾಧೆ, ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಮತ್ತೊಬ್ಬಳು ತ್ರಿವೇಣಿ... ಹೀಗೆ ಬೇರೆ ಬೇರೆ ದಾರಿಗಳಲ್ಲಿ ಕತೆ ಸಂಚರಿಸುತ್ತಾ, ಕೊನೆಗೊಂದು ಭಾವನೆಯ ದಡಕ್ಕೆ ಸೇರುತ್ತದೆ. ಅದೇ ಈ ಚಿತ್ರದ ಅಡಿಪಾಯ.
ರಾಧೆಯ ಪಾತ್ರ ಜೀವಾಳ
ಮಾಧವ ಹಾಗೂ ಮಾಧವಿಯಾಗಿ ಕಾರ್ತಿಕ್ ಶರ್ಮಾ ಪಾತ್ರ ಪೋಷಣೆ ಈ ಚಿತ್ರದ ಜೀವಾಳ. ತನ್ವಿ ರಾವ್ ಅವರ ರಾಧೆಯ ಪಾತ್ರ ಈ ಜೀವಾಳದ ಉಸಿರಿನಂತೆ. ಸಾಗರ್ ಆಥಡ್ಕರ್ ಛಾಯಾಗ್ರಹಣ, ಕಾರ್ತಿಕ್ ಶರ್ಮಾ ಸಂಗೀತ ಕತೆಯ ನಿರೂಪಣೆಗೆ ಹೆಗಲಾಗುತ್ತದೆ.
ಚಿತ್ರ: ಭಾವಾಂತರ
ತಾರಾಗಣ: ಕಾರ್ತಿಕ್ ಶರ್ಮಾ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್,
ನಿರ್ದೇಶನ: ಕಾರ್ತಿಕ್ ಶರ್ಮಾ
ರೇಟಿಂಗ್: 3
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













