ಉದ್ದ ಕೂದಲಿಗೆ ಮೆಹಂದಿ ಹಚ್ಚಲು ಒದ್ದಾಡುತ್ತೀರಾ? ಇಲ್ಲಿವೆ ಟ್ರಿಕ್ಸ್!
ಮೆಹಂದಿ ನಮ್ಮ ಕೂದಲಿಗೆ ಒಂದಲ್ಲ, ಎರಡಲ್ಲ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದಲ್ಲದೆ ಉದ್ದವಾಗಿ ಸೊಂಪಾಗಿ ಬೆಳೆಯುತ್ತದೆ. ಆದರೆ ನೀವು ಮೆಹಂದಿಗೆ ಹಾಕುವ ಕೆಲ ಪದಾರ್ಥಗಳನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ನಿಮ್ಮ ಕೂದಲು ಕಪ್ಪಾಗಿ, ಹೊಳೆಯುವಂತೆ ಆಗುತ್ತದೆ.
ಇತ್ತೀಚಿಗೆ ಹೆಚ್ಚಿನವರು ಕೂದಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂದಲು ಉದುರೋದ, ಒಣ ಕೂದಲು, ಎಣ್ಣೆಯುಕ್ತ ಕೂದಲು, ತಲೆ ಹೊಟ್ಟು, ಬಿಳಿ ಕೂದಲು ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆ, ಶಾಂಪೂ ಜೊತೆ ಗೆ ಹಲವು ಉತ್ಪನ್ನಗಳನ್ನು ಬಳಸುತ್ತಾರೆ. ಬಹಳ ಖರ್ಚು ಮಾಡುತ್ತಾರೆ. ಆದರೂ ಈ ಸಮಸ್ಯೆಗಳು ಕಡಿಮೆಯಾಗುತ್ತವೆಯೇ ಎಂದರೆ ಅದೂ ಇಲ್ಲ.
ಹಿಂದಿನ ಕಾಲದಲ್ಲಿ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಜನರು ಮೆಹಂದಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಇಂದಿಗೂ ಹಲವರು ಮೆಹಂದಿಯನ್ನೇ ಬಳಸುತ್ತಾರೆ. ನೈಸರ್ಗಿಕ ಬಣ್ಣ, ಚಿಕಿತ್ಸಕ ಮೆಹಂದಿ ನಮ್ಮ ಕೂದಲಿಗೆ ಉತ್ತಮ ಬಣ್ಣವನ್ನು ನೀಡುವುದಲ್ಲದೆ ಕೂದಲನ್ನು ಬಲಪಡಿಸುತ್ತದೆ. ಕೂದಲನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ ಕೂದಲು ಬಲವಾಗಿ, ಹೊಳೆಯುವಂತೆ, ಚೆನ್ನಾಗಿ ಕಾಣಬೇಕೆಂದರೆ ಮೆಹಂದಿಗೆ ಏನು ಮಿಕ್ಸ್ ಮಾಡಿ ಹಚ್ಚಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.
ಮೆಹಂದಿ ಕೂದಲಿಗೆ ನೈಸರ್ಗಿಕ ಬಣ್ಣ ನೀಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಕೂದಲಿನ ಬುಡವನ್ನೂ ಬಲಪಡಿಸುತ್ತದೆ. ಜೊತೆಗೆ ಹೊಟ್ಟಾಗದಂತೆ ತಡೆಯುತ್ತದೆ. ಇಷ್ಟೇ ಅಲ್ಲ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಮೆಹಂದಿಯನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ಹೊಳೆಯುತ್ತದೆ. ಜೊತೆಗೆ ಚೆನ್ನಾಗಿ ಬೆಳೆಯುತ್ತದೆ. ಆದರೆ ನೀವು ಮೆಹಂದಿಗೆ ಕೆಲವು ಪದಾರ್ಥಗಳನ್ನು ಸೇರಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಅವು ಯಾವುವು?
ಹೊಳೆಯುವ ಕೂದಲಿಗೆ ಮೆಹಂದಿಗೆ ಏನು ಮಿಕ್ಸ್ ಮಾಡಬೇಕು?
ಮೆಹಂದಿಗೆ ಟೀ ಪುಡಿ ಕುದಿಸಿ, ನೀರನ್ನು ಸೇರಿಸಿದರೆ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಇದಕ್ಕಾಗಿ ಮೊದಲು ಟೀ ಪುಡಿಯನ್ನು ನೀರಲ್ಲಿ ಕುದಿಸಿ. ಇದು ತಣ್ಣಗಾದ ನಂತರ ಸೋಸಿಕೊಂಡು ಆ ಟೀ ನೀರಿನಲ್ಲಿ ಮೆಹಂದಿ ಹಾಕಿ ಚೆನ್ನಾಗಿ ಕುದಿಸಿ. ಈ ಟೀ ನೀರು ನಮ್ಮ ಕೂದಲಿನ ಮೇಲೆ ರಕ್ಷಣಾತ್ಮಕ ಪದರವನ್ನು ಉಂಟು ಮಾಡುತ್ತದೆ. ಇದನ್ನು ಹಚ್ಚುವುದರಿಂದ ಕೂದಲು ಕವಲೊಡೆಯುವ ಸಾಧ್ಯತೆ ಇರುವುದಿಲ್ಲ. ಜೊತೆಗೆ ನಿಮ್ಮ ಕೂದಲು ಕಪ್ಪಾಗುತ್ತದೆ. ಕೂದಲು ಬಲವಾಗಿರುತ್ತದೆ.
ದಾಸವಾಳ ಹೂವನ್ನು ಕೂಡ ಹಾಕಬಹುದು. ಇದಕ್ಕಾಗಿ ಒಣಗಿದ ದಾಸವಾಳ ಹೂವನ್ನು ಮೆಹಂದಿಗೆ ಹಾಕಿ. ಇದು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವುದರಿಂದ, ಕೂದಲಿನ ಬಣ್ಣ ಹೆಚ್ಚುತ್ತದೆ. ಕೂದಲು ಚೆನ್ನಾಗಿ ಬೆಳೆಯುತ್ತದೆ. ಇದಕ್ಕಾಗಿ ಒಣಗಿದ ದಾಸವಾಳ ಹೂವನ್ನು ಪುಡಿ ಮಾಡಿ, ಮೆಹಂದಿ ಪೇಸ್ಟ್‌ನಲ್ಲಿ ಹಾಕಿ ಹಚ್ಚಿ. ಇದು ನಿಮ್ಮ ಕೂದಲನ್ನು ಸುಂದರವಾಗಿ, ಹೊಳೆಯುವಂತೆ ಮಾಡುತ್ತದೆ.
ಮೆಂತೆ:ಮೆಹಂದಿಗೆ ಮೆಂತ್ಯವನ್ನೂ ಮಿಕ್ಸ್ ಮಾಡಬಹುದು. ಇದಕ್ಕಾಗಿ ರಾತ್ರಿ ಇಡೀ ಮೆಂತೆಯನ್ನು ನೆನೆಸಿಡಿ. ಬೆಳಗ್ಗೆ ಇದನ್ನು ರುಬ್ಬಿಕೊಂಡು ಮೆಹಂದಿ ಪೇಸ್ಟ್‌ನಲ್ಲಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ಮೃದುವಾಗುತ್ತದೆ. ಸುಂದರವಾಗಿ ಹೊಳೆಯುತ್ತದೆ. ಮೆಂತ್ಯದಲ್ಲಿರುವ ಪೋಷಕಾಂಶಗಳು ಕೂದಲನ್ನು ಶಕ್ತಿಶಾಲಿಯನ್ನಾಗಿಸಿ, ಆರೋಗ್ಯವಾಗಿಡುತ್ತವೆ.
ಲೋಳೆಸರ:ಮೆಹಂದಿಗೆ ತಾಜಾ ಅಲೋವೆರಾ (ಲೋಳೆಸರ) ತಿರುಳನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ, ಕೂದಲು ಚೆನ್ನಾಗಿ ಹೈಡ್ರೇಟ್ ಆಗುತ್ತದೆ. ಲೋಳೆಸರ ಕೂದಲನ್ನು ಮೃದುವಾಗಿಸಿ, ಬಲವಾಗಿ ಮಾಡುತ್ತದೆ. ಅಷ್ಟೇ ಅಲ್ಲ, ಇದನ್ನು ಕೂದಲಿಗೆ ಹಚ್ಚುವುದರಿಂದ, ಹೊಳೆಯುತ್ತದೆ. ಅಷ್ಟೇ ಅಲ್ಲದೆ, ಕೂದಲು ಒಣಗಿದಂತೆ, ನಿರ್ಜೀವವಾಗಿ ಕಾಣುವುದಿಲ್ಲ. ಲೋಳೆಸರ ಜೆಲ್‌ನಲ್ಲಿರುವ ಪೋಷಕಾಂಶಗಳು, ತೇವಾಂಶ ನಮ್ಮ ಕೂದಲನ್ನು ಬಲ ಪಡಿಸುತ್ತದೆ.
ಮೊಟ್ಟೆ : ಪ್ರೋಟೀನ್‌ನ ಉತ್ತಮ ಮೂಲ ಮೊಟ್ಟೆ. ಇವನ್ನು ಮೆಹಂದಿಗೆ ಮಿಕ್ಸ್ ಮಾಡಿ, ಕೂದಲಿಗೆ ಹಚ್ಚಿದರೆ ಹೆಚ್ಚುವರಿ ಪೋಷಣೆ ಸಿಗುತ್ತದೆ. ಮೊಟ್ಟೆ ನಮ್ಮ ಕೂದಲನ್ನು ಬಲಪಡಿಸುತ್ತವೆ. ಜೊತೆಗೆ ಕೂದಲು ಹೆಚ್ಚು ಹೊಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಉದುರುವಿಕೆಯನ್ನು ಬಹಳ ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ಒಡೆಯುವುದು, ಉದುರುವುದು ಕೂಡ ಬಹಳ ಕಡಿಮೆಯಾಗುತ್ತದೆ.
ಸ್ವಲ್ಪ ಸ್ವಲ್ಪವೇ ಕೂದಲನ್ನು ತೆಗೆದು, ಬುಡದಿಂದ ಎಲ್ಲವನ್ನೂ ಸೇರಿಸಿದ ಮೇಹಂದಿ ಹಚ್ಚಿ, ಫೋಲ್ಡ್ ಮಾಡಿ ನೆತ್ತಿಯಲ್ಲಿ ಸುತ್ತಿಟ್ಟರೆ ಎಲ್ಲಿಯೂ ಮಿಸ್ ಆಗದಂತೆ ಮೆಹಂದಿ ಚೆನ್ನಾಗಿ ಹಿಡಿಯುತ್ತದೆ.