ಅಪ್ಪ-ಅಮ್ಮ ಮಕ್ಕಳಿಗೆ ದಿನಾ ಮುತ್ತು, ಅಪ್ಪುಗೆ ಕೊಟ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
Parenting Tips: ತಂದೆ-ತಾಯಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಇರುತ್ತೆ. ಯಾವಾಗಲೂ ಅವರನ್ನು ಮುದ್ದು ಮಾಡುತ್ತಲೇ ಇರುತ್ತಾರೆ. ಆದರೆ ಪೋಷಕರು ಪ್ರೀತಿಯಿಂದ ಮಕ್ಕಳಿಗೆ ದಿನಾ ಒಂದು ಮುತ್ತು ಕೊಡುವುದು, ಅಪ್ಪಿಕೊಳ್ಳುವುದರಿಂದ ತುಂಬಾ ಪ್ರಯೋಜನಗಳಿವೆ ಅಂತಾರೆ ತಜ್ಞರು. ಅದೇನು ಅಂತ ತಿಳಿಯೋಣ.

ಪೋಷಕರಿಗೆ ಸಲಹೆ
ತಂದೆತಾಯಿ ಮಕ್ಕಳನ್ನು ಪ್ರೀತಿಸುವುದು ಮಾತ್ರವಲ್ಲ, ಆ ಪ್ರೀತಿಯನ್ನು ವ್ಯಕ್ತಪಡಿಸುವುದು ಕೂಡ ಮುಖ್ಯ. ದಿನಾ ಮಕ್ಕಳಿಗೆ ಒಂದು ಅಪ್ಪುಗೆ, ಮುತ್ತು ಕೊಡುವುದು ಸಣ್ಣ ವಿಷಯದಂತೆ ಕಂಡರೂ, ಮಕ್ಕಳ ಮನಸ್ಸಲ್ಲಿ ಅದು ಅಪಾರ ಭದ್ರತೆ, ಸಮಾಧಾನ, ಆತ್ಮವಿಶ್ವಾಸ ತುಂಬುತ್ತೆ. ಪೋಷಕರು ಮಕ್ಕಳ ಮೇಲಿನ ಪ್ರೀತಿಯನ್ನು ಮಾತಿನಲ್ಲಿ ಹೇಳುವುದಲ್ಲದೆ, ಕೃತಿಯಲ್ಲೂ ತೋರಿಸಿದರೆ ಅದು ಮಕ್ಕಳ ಮೆದುಳು, ಹೃದಯಕ್ಕೆ ಇನ್ನಷ್ಟು ಬಲವಾಗಿ ತಲುಪುತ್ತದೆ.
ಅಪ್ಪಿಕೊಳ್ಳುವುದರಿಂದ ಆಗುವ ಲಾಭಗಳು
ದಿನಾ ಅಪ್ಪಿಕೊಳ್ಳುವುದರಿಂದ ಮಕ್ಕಳ ಮೆದುಳಲ್ಲಿ 'ಆಕ್ಸಿಟೋಸಿನ್' ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತೆ. ಇದು ಮಕ್ಕಳಲ್ಲಿ ಒತ್ತಡ ಕಡಿಮೆ ಮಾಡುತ್ತೆ. ಭಯವನ್ನು ಹೋಗಲಾಡಿಸುತ್ತೆ. ಕೋಪವನ್ನು ನಿಯಂತ್ರಿಸುತ್ತೆ. ಮನುಷ್ಯರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಿಸಲು ಈ ಹಾರ್ಮೋನ್ ಮುಖ್ಯ ಪಾತ್ರ ವಹಿಸುತ್ತೆ. ಅದಕ್ಕೇ ಅಪ್ಪಿಕೊಂಡ ನಂತರ ಮಕ್ಕಳು ತಕ್ಷಣ ನಗುತ್ತಾರೆ. ಶಾಂತರಾಗುತ್ತಾರೆ.
ಮುತ್ತು ಕೊಡುವುದರಿಂದ ಆಗುವ ಲಾಭಗಳು
ಮಕ್ಕಳಿಗೆ ಮುತ್ತು ಕೊಟ್ಟಾಗ ಅವರಲ್ಲಿ ಒಂದು ವಿಶೇಷ ಭಾವನೆ ಮೂಡುತ್ತೆ ಅಂತಾರೆ ತಜ್ಞರು. ಮುತ್ತು ಕೊಟ್ಟಾಗ ಅವರ ಹೃದಯ ಬಡಿತ ಬದಲಾಗುತ್ತೆ. ಉಸಿರಾಟ ನಿಧಾನವಾಗುತ್ತೆ, ಮನಸ್ಸಲ್ಲಿ ಪ್ರೀತಿಯ ವಾತಾವರಣ ಸೃಷ್ಟಿಯಾಗುತ್ತೆ. ಮುಖ್ಯವಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಬೆಳಗ್ಗೆ ಮನೆಯಿಂದ ಹೊರಡುವಾಗ ಒಂದು ಮುತ್ತು, ಅಪ್ಪುಗೆ ಕೊಟ್ಟರೆ ದಿನವಿಡೀ ಅವರ ಮನಸ್ಸು ಶಾಂತವಾಗಿರುತ್ತೆ. ಪೋಷಕರ ಪ್ರೀತಿ ನೆನಪಿಗೆ ಬರುತ್ತೆ. ಇದರಿಂದ ಒಂಟಿತನ ದೂರವಾಗುತ್ತೆ. ಶಾಲೆಯಲ್ಲಿ ಯಾವುದೇ ಕೆಲಸವನ್ನು ಧೈರ್ಯವಾಗಿ ಮಾಡುತ್ತಾರೆ.
ಮಕ್ಕಳು ತಪ್ಪು ಮಾಡಿದರೂ..
ಮಕ್ಕಳು ತಪ್ಪು ಮಾಡಿದರೂ, ಅವರು ನೋವಿನಲ್ಲಿದ್ದಾಗ, ಅಳುತ್ತಿರುವಾಗ ಅಪ್ಪಿಕೊಂಡರೆ ಅವರಿಗೆ ಶಕ್ತಿ ಸಿಗುತ್ತೆ. 'ನಾನು ನಿನ್ನ ಜೊತೆಗಿದ್ದೇನೆ, ಭಯಪಡುವ ಅಗತ್ಯವಿಲ್ಲ' ಎಂಬ ಭಾವನೆ ಅವರಲ್ಲಿ ಮೂಡುತ್ತೆ. ಇದರಿಂದ ಮಕ್ಕಳು ತಪ್ಪನ್ನು ಒಪ್ಪಿಕೊಳ್ಳಲು, ಕಲಿಯಲು, ಮತ್ತೆ ಪ್ರಯತ್ನಿಸಲು ಸಿದ್ಧರಾಗುತ್ತಾರೆ.
ಬಲವಾದ ಬಾಂಧವ್ಯ..
ದಿನಾ ಹೀಗೆ ಪೋಷಕರ ಪ್ರೀತಿ ಪಡೆದ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿಗಳಾಗುತ್ತಾರೆ. ಶಿಸ್ತಿನಿಂದ ಇರುತ್ತಾರೆ. ಇತರರನ್ನು ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಅಷ್ಟೇ ಅಲ್ಲ, ದಿನಾ ಮಕ್ಕಳನ್ನು ಹೀಗೆ ಪ್ರೀತಿಯಿಂದ ಹತ್ತಿರ ಸೆಳೆಯುವುದು ತಂದೆತಾಯಿಗೂ ಒಳ್ಳೆಯದು. ಮನಸ್ಸಿನ ಒತ್ತಡ ಕಡಿಮೆಯಾಗುತ್ತೆ. ದಿನವಿಡೀ ಕೆಲಸ ಮಾಡಿದ ಆಯಾಸ ದೂರವಾಗುತ್ತೆ. ಮನಸ್ಸು ಹಗುರವಾಗುತ್ತೆ. ಈ ಪ್ರೀತಿಯ ವಾತಾವರಣ ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

