ಚಿತ್ರಕಲಾ ಪರಿಷತ್ತಿನ ಆವರಣದಲ್ಲಿಇಂಡಿಯನ್ ಆರ್ಟಿಸಾನ್ಸ್ ಬಜಾರ್
ಒಂದು ಕಡೆ ನೋಡಿದರೆ ಆಕರ್ಷಕ ಕಲಾಕೃತಿಗಳು, ಇನ್ನೊಂದು ಕಡೆ ಕಣ್ಣು ಹಾಯಿಸಿದರೆ ನಾನಾ ವಿನ್ಯಾಸದ ಉಡುಪುಗಳು, ಮಕ್ಕಳನ್ನು ತನ್ನತ್ತ ಸೆಳೆಯುತ್ತಿರುವ ಬಣ್ಣ ಬಣ್ಣದ ಆಟಿಕೆಗಳು, ಹೆಂಗಳೆಯರ ಕಣ್ಣುಗಳಲ್ಲಿ ಮಿಂಚು ಮೂಡಿಸುತ್ತಿರುವ ಅಲಂಕಾರಿಕ ವಸ್ತುಗಳು ಹೀಗೆ ಒಂದು ಹೊಸ ಪ್ರಪಂಚವನ್ನೇ ತೆರೆದಿಟ್ಟಂತೆ ಚಿತ್ರಕಲಾ ಪರಿಷತ್ ಕಂಗೊಳಿಸುತ್ತಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಇಂಡಿಯನ್ ಆರ್ಟಿಸಾನ್ಸ್ ಬಜಾರ್’ (ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ) ನಡೆಯುತ್ತಿದೆ. ಜನವರಿ 20ರಿಂದ ಜನವರಿ 29ರ ವರೆಗೆ ನಡೆಯಲಿರುವ ಈ ಮೇಳಕ್ಕೆ ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ ಹಾಗೂ ನಟಿ ರಕ್ಷಿಕಾ ಶೆಟ್ಟಿ ಅವರು ಚಾಲನೆ ನೀಡಿದರು. ಹಾಗೇ ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ಎಲ್ ಶಂಕರ್ ಅವರು ಮುಖ್ಯ ಅತಿಥಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ನಾಗರಾಜ್ ಶೆಟ್ಟಿ ಮಾತನಾಡಿ, 'ನಮ್ಮ ದೇಶ ವಿಶೇಷವಾಗಿ ಕಲೆ ಹಾಗೂ ಸಂಸ್ಕೃತಿಯಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿದೆ. ನಮ್ಮ ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಕಲಾವಿದರು, ಶಿಲ್ಪಿಗಳು ಇದ್ದಾರೆ. ಆದರೆ ಅವರ ಕಲೆಗೆ ಒಂದು ಸರಿಯಾದ ವೇದಿಕೆ ಇಲ್ಲದೇ ಇರುವುದೇ ದೊಡ್ಡ ಕೊರತೆಯಾಗಿದೆ. ಚಿತ್ರಕಲಾ ಪರಿಷತ್ ಕಲಾವಿದರಿಗೆ ಈ ಮೂಲಕ ಒಂದೊಳ್ಳೆ ಅವಕಾಶ ನೀಡಿದೆ' ಎಂದರು.
ಮಾತ್ರವಲ್ಲ 'ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಕಲಾವಿದರು ಇಲ್ಲಿಗೆ ಬಂದಿದ್ದಾರೆ. ಪ್ರತಿಯೊಬ್ಬರು ಇಲ್ಲಿಗೆ ಬಂದು ಈ ಮೇಳವನ್ನು ನೋಡುವುದರ ಜೊತೆಗೆ ತಮಗೆ ಇಷ್ಟವಾದದ್ದನ್ನು ಖರೀದಿಸಿದರೆ ಕಲಾವಿದರಿಗೂ ಸಹಾಯವಾಗುತ್ತದೆ. ಈ ಮೂಲಕ ಕಲಾವಿದರನ್ನು ಬೆಂಬಲಿಸಿದಂತೆ ಆಗುತ್ತದೆ' ಎಂದು ಹೇಳಿದರು.
ಇನ್ನು ನಟಿ ರಕ್ಷಿಕಾ ಶೆಟ್ಟಿ ಮಾತನಾಡುತ್ತಾ 'ಚಿತ್ರಕಲಾ ಪರಿಷತ್ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಪ್ರತಿ ಬಾರಿಯೂ ಒಂದೊಂದು ವಿಭಿನ್ನ ಬಗೆಯಲ್ಲಿ ಪ್ರದರ್ಶನ ಹಾಗೂ ಮಾರಾಟಮೇಳವನ್ನು ಆಯೋಜಿಸುತ್ತಾ ಬಂದಿದೆ. ಜೈಪುರದಿಂದ, ಕಾಶ್ಮೀರದವರೆಗಿನ ಕಲಾವಿದರು ಇಲ್ಲಿಗೆ ಬಂದಿದ್ದಾರೆ. ವಿಭಿನ್ನ ಬಗೆಯ ವಸ್ತುಗಳು ಇಲ್ಲಿವೆ. ಒಂದಕ್ಕಿಂತ ಒಂದು ಚೆಂದವಿದೆ. ಎಲ್ಲರೂ ಭೇಟಿ ನೀಡಬೇಕಾದ ಮೇಳವಿದು. ತಪ್ಪದೇ ಭೇಟಿ ನೀಡಿ ಕಲಾವಿದರನ್ನು ಬೆಳೆಸಿ' ಎಂದು ಮನವಿ ಮಾಡಿದರು.
10 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಬಗೆ ಬಗೆಯ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ನಾನಾ ವಿನ್ಯಾಸದ ಉಡುಪುಗಳು, ಆಟಿಕೆಗಳು ಸೇರಿದಂತೆ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ನಾನಾ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತಿದೆ.
10 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಬಗೆ ಬಗೆಯ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು, ನಾನಾ ವಿನ್ಯಾಸದ ಉಡುಪುಗಳು, ಆಟಿಕೆಗಳು ಸೇರಿದಂತೆ ನಾನಾ ಬಗೆಯ ಉತ್ಪನ್ನಗಳು ಲಭ್ಯವಿವೆ.
ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿದೆ.