ರಾತ್ರಿ ಈ ಸಮಯ ದಾಟಿದ್ರೆ ಗಂಡಾಂತರ ತಪ್ಪಿದಂತೆ! Zuno ರಸ್ತೆ ಸುರಕ್ಷತಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ
India Road Safety Report 2026: ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಇಂಡಿಯಾ ರೋಡ್ ಸೇಫ್ಟಿ ರಿಪೋರ್ಟ್-2026' ಒಂದು ಆಘಾತಕಾರಿ ಸತ್ಯ ಹೊರಹಾಕಿದ್ದು, ಈ ಸಮಯದಲ್ಲಿ ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ.

ರಾತ್ರಿ 9 ರಿಂದ 10 ಗಂಟೆಯ ನಡುವಿನ ಸಮಯ
ರಾತ್ರಿ 9 ರಿಂದ 10 ಗಂಟೆಯ ನಡುವಿನ ಸಮಯ
ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ವಾಹನ ಚಾಲನೆಗೆ ದಿನದ ಒಂದು ನಿರ್ದಿಷ್ಟ ಸಮಯ ಮಾತ್ರ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ. 'ಝುನೋ ಜನರಲ್ ಇನ್ಸೂರೆನ್ಸ್' ಬಿಡುಗಡೆ ಮಾಡಿದ 'ಇಂಡಿಯಾ ರೋಡ್ ಸೇಫ್ಟಿ ರಿಪೋರ್ಟ್-2026' (IRSR) ಪ್ರಕಾರ, ಭಾರತದಲ್ಲಿ ರಾತ್ರಿ 9 ರಿಂದ 10 ಗಂಟೆಯ ನಡುವಿನ ಸಮಯ ಚಾಲನೆಗೆ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಕಾರಣವೇನು ಗೊತ್ತಾ?
ಈ ವರದಿಯ ಪ್ರಕಾರ, ಶೇಕಡ 80 ಕ್ಕಿಂತ ಹೆಚ್ಚು ಅಪಘಾತಗಳಿಗೆ ರಸ್ತೆಯ ಸ್ಥಿತಿಗತಿಗಿಂತ ಚಾಲಕರ ನಡವಳಿಕೆ ಮತ್ತು ಚಾಲನಾ ಅಭ್ಯಾಸಗಳೇ ಪ್ರಮುಖ ಕಾರಣವಾಗಿವೆ. ರಾತ್ರಿ 8 ಗಂಟೆಯ ನಂತರ ಚಾಲಕರ ಏಕಾಗ್ರತೆ ಕಡಿಮೆಯಾಗುವುದರಿಂದ ಈ ಅವಧಿಯಲ್ಲಿ ಅಪಘಾತಗಳ ಭೀತಿ ಹೆಚ್ಚಿರುತ್ತದೆ. ಆದರೆ, ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯ ನಡುವಿನ ಸಮಯ ದಿನದ ಅತ್ಯಂತ ಸುರಕ್ಷಿತ ಚಾಲನಾ ಸಮಯವೆಂದು ಗುರುತಿಸಲಾಗಿದೆ.
ಮಹಿಳೆಯರು ಬೆಸ್ಟ್
ಮಹಿಳೆಯರು ಬೆಸ್ಟ್
ಮಹಿಳೆಯರು ಅಪಾಯಕಾರಿಯಾಗಿ ಡ್ರೈವ್ ಮಾಡುತ್ತಾರೆ ಎಂಬ ಸಾಮಾಜಿಕ ನಂಬಿಕೆಯನ್ನು ಈ ವರದಿ ಸುಳ್ಳು ಮಾಡಿದೆ. ಮಹಿಳಾ ಚಾಲಕರ ಸರಾಸರಿ ಡ್ರೈವಿಂಗ್ ಸ್ಕೋರ್ ಶೇಕಡ 92.86 ರಷ್ಟಿದ್ದರೆ, ಪುರುಷರದ್ದು ಶೇಕಡ 92.43 ರಷ್ಟಿದೆ. ಇದರಿಂದ ಚಾಲನೆಯಲ್ಲಿ ಮಹಿಳೆಯರು ಪುರುಷರಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚು ಜಾಗರೂಕರಾಗಿದ್ದಾರೆ ಎಂಬುದು ಸಾಬೀತಾಗಿದೆ. ಝುನೋ ಸಂಸ್ಥೆಯ 'ಸ್ಮಾರ್ಟ್‌ಡ್ರೈವ್' ಆ್ಯಪ್ ಮೂಲಕ 17 ರಾಜ್ಯಗಳ ಸುಮಾರು 45 ಲಕ್ಷ ಪ್ರವಾಸಗಳ ಡೇಟಾವನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಚಾಲಕರ ದೌರ್ಬಲ್ಯಗಳೇನು?
ಚಾಲಕರ ದೌರ್ಬಲ್ಯಗಳೇನು?
ಭಾರತೀಯ ಚಾಲಕರಲ್ಲಿ ಕಂಡುಬಂದ ಅತ್ಯಂತ ದೊಡ್ಡ ದೌರ್ಬಲ್ಯವೆಂದರೆ ಸಕಾಲದಲ್ಲಿ ಬ್ರೇಕ್ ಹಾಕದಿರುವುದು. ಇದಕ್ಕೆ ಕೇವಲ 87 ಸ್ಕೋರ್ ಲಭಿಸಿದೆ. ಇದರೊಂದಿಗೆ ಅತಿ ವೇಗವಾಗಿ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಮತ್ತಷ್ಟು ವೇಗವನ್ನು ಹೆಚ್ಚಿಸುವುದು ಕೂಡ ಅಪಘಾತಗಳಿಗೆ ನಾಂದಿ ಹಾಡುತ್ತಿದೆ. ಆಶ್ಚರ್ಯಕರ ವಿಷಯವೆಂದರೆ, ಮಳೆಗಾಲ ಅಥವಾ ಚಳಿಗಾಲದ ಮಂಜಿನಂತಹ ವಾತಾವರಣದ ಬದಲಾವಣೆಗಳು ಒಟ್ಟಾರೆ ಡ್ರೈವಿಂಗ್ ಸ್ಕೋರ್ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಅಂದರೆ ಹವಾಮಾನಕ್ಕಿಂತ ಚಾಲಕನ ನಿರ್ಧಾರಗಳೇ ಇಲ್ಲಿ ಮುಖ್ಯವಾಗುತ್ತವೆ.
ಭೀಕರ ಅಂಕಿಅಂಶಗಳು
ಭೀಕರ ಅಂಕಿಅಂಶಗಳು
ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 1.73 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಾಗತಿಕ ರಸ್ತೆ ಅಪಘಾತದ ಸಾವುಗಳಲ್ಲಿ ಭಾರತದ ಪಾಲು ಶೇಕಡ 11 ರಷ್ಟಿದೆ. ಈ ಅಪಘಾತಗಳಿಂದಾಗಿ ದೇಶದ ಜಿಡಿಪಿಯಲ್ಲಿ (GDP) ಶೇಕಡ 3 ರಿಂದ 5 ರಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಒಟ್ಟು ಮರಣಗಳಲ್ಲಿ ಶೇಕಡ 44 ರಷ್ಟು ದ್ವಿಚಕ್ರ ವಾಹನ ಸವಾರರು ಮತ್ತು ಶೇಕಡ 19 ರಷ್ಟು ಪಾದಚಾರಿಗಳು ಇರುವುದು ಆತಂಕಕಾರಿ ವಿಷಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

