ಬ್ರಾಯ್ಲರ್ ಕೋಳಿಗಳು 45 ದಿನದಲ್ಲಿ ಬೆಳೆಯೋ ರಹಸ್ಯವೇನು? ಕಾರಣ ತಿಳಿದ್ರೆ ಶಾಕ್ ಆಗ್ತೀರಾ!
ಬ್ರಾಯ್ಲರ್ ಕೋಳಿಗಳು ತುಂಬಾನೇ ವೇಗವಾಗಿ ಬೆಳೆಯುತ್ತವೆ. ಹಾಗಾಗಿ, ಇವುಗಳಿಗೆ ಗ್ರೋತ್ ಹಾರ್ಮೋನ್ ಇಂಜೆಕ್ಷನ್ ಕೊಡ್ತಾರೆ, ಇದನ್ನು ತಿಂದರೆ ಆರೋಗ್ಯಕ್ಕೆ ಕೆಟ್ಟದ್ದು ಅಂತ ಜನ ಹೆದರುತ್ತಾರೆ. ಇದರಲ್ಲಿ ನಿಜವೆಷ್ಟು?

ಗ್ರೋತ್ ಹಾರ್ಮೋನ್ ನೀಡುತ್ತಾರೆ
ಆರೋಗ್ಯವಾಗಿರಲು ನಮಗೆ ಪ್ರತಿದಿನ ಪ್ರೋಟೀನ್ ಬೇಕು. ಚಿಕನ್‌ನಲ್ಲಿ ಇದು ಹೇರಳವಾಗಿದೆ. ಆದರೆ, ಬ್ರಾಯ್ಲರ್ ಚಿಕನ್ ತಿನ್ನಬಾರದು, ನಾಟಿ ಕೋಳಿ ಮಾತ್ರ ತಿನ್ನಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಬ್ರಾಯ್ಲರ್ ಕೋಳಿಗಳಿಗೆ ಗ್ರೋತ್ ಹಾರ್ಮೋನ್ ನೀಡುತ್ತಾರೆ, ಇದರಿಂದಾಗಿ 8 ವರ್ಷಕ್ಕೇ ಹೆಣ್ಣುಮಕ್ಕಳು ದೊಡ್ಡವರಾಗುತ್ತಾರೆ, ಬೇರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಹಲವರು ನಂಬುತ್ತಾರೆ. ಇದರಲ್ಲಿ ಸತ್ಯವಿದೆಯೇ? ಈ ಕೋಳಿಗಳು ಅಷ್ಟು ಬೇಗ ಹೇಗೆ ಬೆಳೆಯುತ್ತವೆ? ತಿಳಿಯೋಣ ಬನ್ನಿ.

ಜನರಲ್ಲಿರುವುದು ಕೇವಲ ಭಯ
ಬ್ರಾಯ್ಲರ್ ಕೋಳಿಗಳು ವೇಗವಾಗಿ ಬೆಳೆಯಲು ಗ್ರೋತ್ ಹಾರ್ಮೋನ್ ನೀಡುತ್ತಾರೆ ಎನ್ನುವುದು ಕೇವಲ ಒಂದು ಸುಳ್ಳು ಸುದ್ದಿ ಎಂದು ಹ್ಯೂಮನ್ ಲೀಗ್ ವರದಿ ಹೇಳುತ್ತದೆ. ಲಕ್ಷಾಂತರ ಕೋಳಿಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡುವುದು ಅಸಾಧ್ಯದ ಮಾತು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, 'ಬ್ರಾಯ್ಲರ್ ಕೋಳಿಗಳ ಬಗ್ಗೆ ಜನರಲ್ಲಿರುವುದು ಕೇವಲ ಭಯ. ಅವುಗಳ ವೇಗದ ಬೆಳವಣಿಗೆಗೆ ಯಾವುದೇ ಕೃತಕ ಹಾರ್ಮೋನ್ ಬಳಸುವುದಿಲ್ಲ.
ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತವೆ
ಪ್ರತಿ ಕೋಳಿಗೆ ಪ್ರತಿದಿನ ಇಂಜೆಕ್ಷನ್ ನೀಡುವುದು ಸಾಧ್ಯವಿಲ್ಲ. ಒಂದು ವೇಳೆ ಆಹಾರದ ಮೂಲಕ ಹಾರ್ಮೋನ್ ನೀಡಿದರೂ, ಜೀರ್ಣಾಂಗ ವ್ಯವಸ್ಥೆಯು ಅದನ್ನು ಸಾಮಾನ್ಯ ಪ್ರೋಟೀನ್‌ನಂತೆ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ಪರಿಣಾಮ ಇರುವುದಿಲ್ಲ' ಎಂದು ವಿವರಿಸಿದ್ದಾರೆ. ಹಾಗಾದರೆ, ಯಾವುದೇ ಇಂಜೆಕ್ಷನ್ ಇಲ್ಲದೆ ಬ್ರಾಯ್ಲರ್ ಕೋಳಿಗಳು ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತವೆ ಎಂಬ ಅನುಮಾನ ಬರಬಹುದು.
ಭಿನ್ನವಾದ ತಳಿ
'ಆರ್ಗಾನಿಕ್ ಫೀಡ್ಸ್' ಪ್ರಕಾರ, ಬ್ರಾಯ್ಲರ್ ಕೋಳಿಗಳು ಸಾಮಾನ್ಯ ನಾಟಿ ಕೋಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ತಳಿ. ಈ ತಳಿಯ ಕೋಳಿಗಳು ವೇಗವಾಗಿ, ಅಂದರೆ ಸುಮಾರು 45 ದಿನಗಳಲ್ಲಿಯೇ ಸಂಪೂರ್ಣವಾಗಿ ಬೆಳೆಯುತ್ತವೆ. ದಶಕಗಳಿಂದ ಪೌಲ್ಟ್ರಿ ತಜ್ಞರು ಆರೋಗ್ಯಕರ ಮತ್ತು ವೇಗವಾಗಿ ಬೆಳೆಯುವ ಕೋಳಿಗಳನ್ನೇ ಆಯ್ದು ಸಾಕುತ್ತಿದ್ದಾರೆ (Selective breeding). ಇವುಗಳಿಗೆ ಪ್ರೋಟೀನ್, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೆಚ್ಚಿರುವ ಸಮತೋಲಿತ ಆಹಾರವನ್ನು ನೀಡುತ್ತಾರೆ.
ಆ್ಯಂಟಿಬಯೋಟಿಕ್‌ಗಳನ್ನು ನೀಡುತ್ತಾರೆ
ಇದೇ ಕಾರಣಕ್ಕೆ ಅವು ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತವೆ. ಆದರೆ, ಕೆಲವು ಫಾರ್ಮ್‌ಗಳಲ್ಲಿ ರೋಗ ಬರದಂತೆ ತಡೆಯಲು ಆ್ಯಂಟಿಬಯೋಟಿಕ್‌ಗಳನ್ನು ನೀಡುತ್ತಾರೆ. ಇದು ಕೂಡ ಅಪಾಯಕಾರಿ. ಆದರೆ, ಆ್ಯಂಟಿಬಯೋಟಿಕ್ ನೀಡದೆ ಬೆಳೆಸಿದ ಕೋಳಿಗಳನ್ನು ನಾವು ತಿನ್ನಬಹುದು. ಒಂದು ವೇಳೆ ಆ್ಯಂಟಿಬಯೋಟಿಕ್ ನೀಡಿದ್ದರೂ, ಮಾರುಕಟ್ಟೆಗೆ ಕಳುಹಿಸುವ ಕೆಲವು ದಿನಗಳ ಮೊದಲು ಅದನ್ನು ನಿಲ್ಲಿಸಬೇಕು. ಅಂತಹ ಚಿಕನ್ ತಿಂದರೆ ಯಾವುದೇ ಸಮಸ್ಯೆ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

