ರಾಗಿ ರೊಟ್ಟಿ ಗಟ್ಟಿಯಾಗ್ತಿದ್ಯಾ? ಈ ಟ್ರಿಕ್ಸ್ ಫಾಲೋ ಮಾಡಿ ಮೃದುವಾದ ರೊಟ್ಟಿ ತಯಾರಿಸಿ
ರಾಗಿ ಮುದ್ದೆ, ರಾಗಿ ರೊಟ್ಟಿ ಮಾಡೋದು ಸ್ವಲ್ಪ ಕಷ್ಟ ಎನ್ನುವ ಕಲ್ಪನೆ ಬಹುತೇಕರಲ್ಲಿದೆ. ಎಷ್ಟೇ ಮಾಡಿದ್ರೂ ರಾಗಿ ರೊಟ್ಟಿ ಮೃದುವಾಗಲ್ಲ, ಉಬ್ಬಿ ಬರೋದಿಲ್ಲ ಎನ್ನುವವರಿದ್ದಾರೆ. ಇನ್ಮುಂದೆ ಟೆನ್ಷನ್ ಬೇಡ, ಸರಿಯಾದ ವಿಧಾನದಲ್ಲಿ ಮಾಡಿದ್ರೆ ಮೃದುವಾದ ರಾಗಿ ರೊಟ್ಟಿಯನ್ನು ನೀವೂ ಮಾಡ್ಬಹುದು.

ರಾಗಿ ಪ್ರಯೋಜನ
ರಾಗಿ, ಅತಿ ಹೆಚ್ಚು ಪೋಷಕಾಂಶಗಳಿಂದ ಕೂಡಿದ ಧಾನ್ಯಗಳಲ್ಲಿ ಒಂದು. ಉತ್ತಮ ಪ್ರಮಾಣದ ಪ್ರೋಟೀನ್, ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳಿವೆ. ಇದು ತುಂಬಾ ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ರಾಗಿ ಭಕ್ಷ್ಯಗಳು ಫಿಟ್ನೆಸ್ ಪ್ರೇಮಿಗಳಲ್ಲಿ ಜನಪ್ರಿಯತೆ ಪಡೆದಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತೆ. ಇದರ ನಾರಿನ ಅಂಶ ಜೀರ್ಣಕ್ರಿಯೆಗೆ ಉತ್ತಮ. ಇದು ಗ್ಲುಟನ್-ಮುಕ್ತವಾಗಿದೆ.
ರಾಗಿ ರೊಟ್ಟಿ
ರಾಗಿ ರೊಟ್ಟಿ ಮಾಡೋದು ಗೋಧಿ ರೊಟ್ಟಿಯಷ್ಟು ಸುಲಭವಲ್ಲ. ಅದು ಗಟ್ಟಿಯಾಗುತ್ತೆ ಇಲ್ಲ ಬಿರುಕುಬಿಟ್ಟು, ಬಿಳಿ ಬಿಳಿ ಪ್ಯಾಚ್ ಕಾಣಿಸಿಕೊಳ್ಳುತ್ತದೆ. ರಾಗಿ ಹಿಟ್ಟನ್ನು ಬಳಸಿ ಮನೆಯಲ್ಲಿಯೇ ಸುಲಭವಾಗಿ ಮೃದುವಾದ ಮತ್ತು ಉಬ್ಬುವಂತ ರೊಟ್ಟಿಗಳನ್ನು ತಯಾರಿಸಲು ಸುಲಭವಾದ ಮಾರ್ಗ ಇಲ್ಲಿದೆ.
ರಾಗಿ ರೊಟ್ಟಿಗೆ ಅಗತ್ಯವಿರುವ ಪದಾರ್ಥ
ರಾಗಿ ರೊಟ್ಟಿ ತಯಾರಿಸಲು ನೀವು 1 ಕಪ್ ರಾಗಿ ಹಿಟ್ಟು, 3/4 ರಿಂದ 1 ಕಪ್ ಉಗುರು ಬೆಚ್ಚಗಿನ ನೀರು, 1 ಚಮಚ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಒಂದುವರೆ ಚಮಚ ಉಪ್ಪು, 1 ಚಮಚ ಎಣ್ಣೆ, 2 ಚಮಚ ನುಣ್ಣಗೆ ಕತ್ತರಿಸಿದ ಈರುಳ್ಳಿ, ಒಂದುವರೆ ಚಮಚ ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಅಗತ್ಯವಿರುತ್ತದೆ.
ರಾಗಿ ರೊಟ್ಟಿ ತಯಾರಿಸುವ ವಿಧಾನ
ಒಂದು ಬಟ್ಟಲಿಗೆ ರಾಗಿ ಹಿಟ್ಟು ಮತ್ತು ಉಪ್ಪನ್ನು ಹಾಕಿ. ಅದಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ನಿಧಾನವಾಗಿ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಮೃದುವಾದ ಮಿಕ್ಸ್ ಮಾಡಿ. ಉಗುರು ಬೆಚ್ಚಗಿನ ನೀರು ಬಳಸಿದ್ರೆ ರೊಟ್ಟಿ ತುಂಬಾ ಸಮಯ ಮೃದುವಾಗಿರುತ್ತದೆ.
ಎಣ್ಣೆ ಹಚ್ಚಿ ಬೇಯಿಸಿ
ಹಿಟ್ಟನ್ನು ಸಣ್ಣ ಉಂಡೆಗಳನ್ನು ಮಾಡಿ. ಒಂದು ಉಂಡೆಯನ್ನು ಬೆಣ್ಣೆ ಕಾಗದದ ಮೇಲೆ ಇರಿಸಿ, ತಟ್ಟಿ. ಮಧ್ಯಮ ಉರಿಯಲ್ಲಿ ಪ್ಯಾನ್ ಬಿಸಿ ಮಾಡಿ ಮತ್ತು ರೊಟ್ಟಿಯನ್ನು ಪ್ಯಾನ್ ಮೇಲೆ ಎಚ್ಚರಿಕೆಯಿಂದ ಹಾಕಿ. ಕೆಳಭಾಗವು ಲಘುವಾಗಿ ಬೇಯಿಸಿದಾಗ ಮತ್ತು ಮೇಲ್ಮೈಯಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಾಗ, ಸ್ವಲ್ಪ ಎಣ್ಣೆಯನ್ನು ಹಚ್ಚಿ ಅದನ್ನು ತಿರುಗಿಸಿ. ಇನ್ನೊಂದು ಬದಿಯಲ್ಲಿ ಚೆನ್ನಾಗಿ ಬೇಯಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
