Home Gardening Trick: ಈ ಟ್ರಿಕ್ಸ್ ಫಾಲೋ ಮಾಡಿ ಸಣ್ಣ ಜಾಗದಲ್ಲೇ ಆರೋಗ್ಯಕರ ಶುಂಠಿ ಬೆಳೀರಿ
Ginger Gardening Tips : ಮಸಾಲೆ ಅಡುಗೆಯಲ್ಲಿ ಶುಂಠಿ ವಿಶೇಷ ಪಾತ್ರವಹಿಸುತ್ತೆ. ಶುಂಠಿ, ಟೀ ರುಚಿ ಡಬಲ್ ಮಾಡೋದಲ್ದೆ ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆ ಸುಲಭಗೊಳಿಸುವ ಶುಂಠಿಯನ್ನು ನೀವು ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು.

ಬಾಲ್ಕನಿಯಲ್ಲಿ ಶುಂಠಿ ಬೆಳೆ
ಪ್ರತಿಯೊಬ್ಬರ ಮನೆಯಲ್ಲೂ ಶುಂಠಿ ಬಳಕೆ ಮಾಡ್ತಾರೆ. ಮಾಂಸಾಹಾರದಿಂದ ಹಿಡಿದು ಔಷಧಿಯಾಗಿ ಒಂದಲ್ಲ ಒಂದು ರೀತಿಯಲ್ಲಿ ಶುಂಠಿ ಬಳಕೆ ಆಗ್ತಿರುತ್ತದೆ. ಮಾರ್ಕೆಟ್ ನಿಂದ ತಂದ ಶುಂಠಿ ತುಂಬಾ ದಿನ ಬಾಳಿಕೆ ಬರೋದಿಲ್ಲ. ಅದನ್ನು ಫ್ರಿಜ್ ನಲ್ಲಿಟ್ರೆ ಕೊಳೆಯೋದು ಹೆಚ್ಚು. ಹೊರಗಿಟ್ರೆ ಒಣಗಿ ಹೋಗುತ್ತದೆ. ಅದೇ ಬಾಲ್ಕನಿಯಲ್ಲಿ ಶುಂಠಿ ಗಿಡವಿದ್ರೆ ಅಗತ್ಯವಿದ್ದಾಗ ಅದನ್ನು ಕಿತ್ತು ಬಳಕೆ ಮಾಡ್ಬಹುದು. ನೀವು ಮನೆಯಲ್ಲಿ ಶುಂಠಿಯನ್ನು ಆರಾಮವಾಗಿ ಬೆಳೆಯಬಹುದು. ತೋಟದಲ್ಲಿ ಇದನ್ನು ಬೆಳೆಸೋದು ಬಹಳ ಸುಲಭ.
ಏನು ಮಾಡ್ಬೇಕು?
ಮಾರ್ಕೆಟ್ ನಿಂದ ತಂದ ತಾಜಾ ಶುಂಠಿಯನ್ನೇ ನೀವು ಬಳಕೆ ಮಾಡ್ಬೇಕು. ಮಾರ್ಕೆಟ್ ನಲ್ಲಿ ಶುಂಠಿ ಆಯ್ಕೆ ಮಾಡಿಕೊಳ್ಳುವಾಗ ಈ ಬಗ್ಗೆ ಗಮನ ಇರಲಿ. ಒಣಗಿದ, ಕೊಳೆತ ಶುಂಠಿ ಖರೀದಿ ಮಾಡ್ಬೇಡಿ.
ಯಾವ ಸಮಯ ಬೆಸ್ಟ್?
ನೀವು ಎಲ್ಲ ಸಮಯದಲ್ಲೂ ಶುಂಠಿ ಬೆಳೆಸಬಹುದು. ಆದ್ರೆ ಶುಂಠಿ ಬೆಳೆಯಲು ಏಪ್ರಿಲ್ ನಿಂದ ಜೂನ್ ಅತ್ಯಂತ ಉತ್ತಮ ಸಮಯ. ಇಂದೇ ಶುಂಠಿಯನ್ನು ನೀವು ನೆಡಬಹುದು. ಶುಂಠಿ ಬೆಳೆಯಲು ದೊಡ್ಡ ಪಾಟ್ ಅಗತ್ಯವಿದೆ. ಚಿಕ್ಕದಾಗಿದ್ದರೆ ಶುಂಠಿ ಬೆಳೆ ಕಷ್ಟ. ಪಾಟ್ ಸುಮಾರು 10 ರಿಂದ 12 ಇಂಚು ಇರುವಂತೆ ನೋಡಿಕೊಳ್ಳಿ. ಪಾಟ್ ಕೆಳಗೆ ಸಣ್ಣ ರಂಧ್ರ ಮಾಡಿ. ಶುಂಠಿಯನ್ನು ಬೆಳೆಯಲು ಸಡಿಲವಾದ ಮಣ್ಣು ಉತ್ತಮ. ನೀವು ಶೇಕಡಾ 50 ರಷ್ಟು ತೋಟದ ಮಣ್ಣು ಹಾಗೂ ಶೇಕಡಾ 30 ರಷ್ಟು ಗೊಬ್ಬರವನ್ನು ಬಳಸಬೇಕು. ಇನ್ನು ಶೇಕಡಾ 20 ರಷ್ಟು ಕೊಕೊಪೀಟ್ ಅಥವಾ ಮರಳನ್ನು ಹಾಕಿ.
ಹೀಗೆ ನೆಡಿ
ನೀವು ಪಾಟ್ ನ ಮಧ್ಯ ಭಾಗದಲ್ಲಿ ಶುಂಠಿಯನ್ನು ನೆಡಬೇಕು. ಮೂರು ಇಂಚು ಆಳದಲ್ಲಿ ಶುಂಠಿ ಇದ್ದರೆ ಉತ್ತಮ. ಶುಂಠಿಯ ಕಣ್ಣಿನ ಭಾಗ ಮೇಲಿರಲಿ. ಒಂದೇ ಪಾಟ್ ನಲ್ಲಿ ಅನೇಕ ಶುಂಠಿ ನಡೆತ್ತಿದ್ದರೆ ಅಥವಾ ತೋಟದಲ್ಲಿ ಶುಂಠಿ ಬೆಳೆಸುತ್ತಿದ್ದರೆ ಒಂದರಿಂದ ಇನ್ನೊಂದರ ಮಧ್ಯೆ 7-10 ಇಂಚು ಅಂತರದಲ್ಲಿ ಇರಿಸಿ.
ಇದು ನೆನಪಿರಲಿ
ಮಣ್ಣು ಸಡಿಲವಾಗಿರಬೇಕು. ಶುಂಠಿ ಹಾಕಿದ ನಂತರ ಮಣ್ಣನ್ನು ಮುಚ್ಚಿ ನೀರು ಹಾಕಬೇಕು. ಮಣ್ಣು ಒಣಗಿದಂತೆ ಕಂಡುಬಂದಾಗ ಮಾತ್ರ ನೀರು ಹಾಕಿ. ಅತಿಯಾಗಿ ನೀರಿನ ಬಳಕೆ ಬೇಡ. ಶುಂಠಿ ಸಸ್ಯವನ್ನು ನೇರ ಸೂರ್ಯನ ಬೆಳಕಿಗೆ ಒಡ್ಡಬೇಡಿ. ಮಂದ ಸೂರ್ಯನ ಬೆಳಕಿನಲ್ಲಿ ಅದನ್ನು ಇಡಿ. ತಿಂಗಳಿಗೊಮ್ಮೆ ನೀವು ಸಾವಯವ ಗೊಬ್ಬರ ಸೇರಿಸುವುದು ಒಳ್ಳೆಯದು. ಕೀಟದಿಂದ ಶುಂಠಿ ರಕ್ಷಣೆಗೆ ನೀವು ಬೇವಿನ ಎಣ್ಣೆಯನ್ನು ಸ್ಪ್ರೇ ಮಾಡಬೇಕು. ನೀವು ಸರಿಯಾದ ಆರೈಕೆ ಮಾಡಿದ್ದು, ಶುಂಠಿ ಸರಿಯಾಗಿ ಬೆಳೆದಿದ್ದರೆ ಎಂಟರಿಂದ ಹತ್ತು ತಿಂಗಳಲ್ಲಿ ಬೆಳೆ ನಿಮ್ಮ ಕೈ ಸೇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

