- Home
- Karnataka Districts
- ಕ್ಷೇತ್ರದಲ್ಲಿ ನಿರ್ಮಿಸಿದ ಹಿಂದೂ ದೇವಾಲಯ 'ಸಂಖ್ಯೆ' ಹೇಳಿ ಬಿಜೆಪಿಗೆ ಟಕ್ಕರ್ ಕೊಟ್ಟ ಸಚಿವೆ ಹೆಬ್ಬಾಳಕರ್
ಕ್ಷೇತ್ರದಲ್ಲಿ ನಿರ್ಮಿಸಿದ ಹಿಂದೂ ದೇವಾಲಯ 'ಸಂಖ್ಯೆ' ಹೇಳಿ ಬಿಜೆಪಿಗೆ ಟಕ್ಕರ್ ಕೊಟ್ಟ ಸಚಿವೆ ಹೆಬ್ಬಾಳಕರ್
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಿಂದೂ ಸಂಸ್ಕೃತಿ ಉಳಿಸುವ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರತಿ ಗ್ರಾಮಕ್ಕೆ ₹5 ರಿಂದ ₹10 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ತರುವ ಮೂಲಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದರು.

152 ದೇವಸ್ಥಾನ ನಿರ್ಮಾಣ
ಬಿಜೆಪಿಯವರು ಕೇವಲ ಭಾಷಣದಲ್ಲಿ ಮಾತ್ರ ಹಿಂದೂ ಹಿಂದೂ ಎನ್ನುತ್ತಾರೆ. ಆದರೆ, ಹಿಂದೂ ಸಂಸ್ಕೃತಿಗಾಗಿ ಏನೂ ಮಾಡುವುದಿಲ್ಲ. ನಾನು ಭಾಷಣಕ್ಕೆ ಸೀಮಿತವಾಗದೇ ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಕ್ಷೇತ್ರದಲ್ಲಿ 152 ದೇವಸ್ಥಾನಗಳನ್ನು ನಿರ್ಮಿಸಿ ಹಿಂದೂ ಸಂಸ್ಕೃತಿ ಉಳಿಸುವ ಕೆಲಸ ಮಾಡಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅಭಿವೃದ್ಧಿ ಮಾಡಿ ತೋರಿಸಿದ್ದೇನೆ
ಏಳು ವರ್ಷಗಳ ಹಿಂದೆ ಒಮ್ಮೆ ಅವಕಾಶ ಕೊಡಿ, ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಅದಕ್ಕಾಗಿಯೇ ಮತ್ತೊಮ್ಮೆ ಆಯ್ಕೆ ಮಾಡಿ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ. ಗ್ರಾಮೀಣ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಸ್ಪೀಡ್ ಕಡಿತಗೊಳಿಸಬೇಡಿ ಎಂದು ಸಚಿವರು ಮನವಿ ಮಾಡಿದರು.
ಪ್ರತಿ ಗ್ರಾಮಕ್ಕೂ ₹5 ರಿಂದ ₹10 ಕೋಟಿ ಅಭಿವೃದ್ಧಿ ಕಾಮಗಾರಿ
ಈ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ರಾಜ್ಯಕ್ಕೆ ಹೆಚ್ಚು ಪರಿಚಿತವಾಗಿರಲಿಲ್ಲ. ಇಂದು ಅಭಿವೃದ್ಧಿಯ ಮೂಲಕ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗಿದೆ ಎಂದ ಅವರು, ಒಂದು ಊರಲ್ಲಿ ಜಾತ್ರೆ ನಡೆದರೆ ಇಡೀ ಊರನ್ನು ಸುಧಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರತಿ ಗ್ರಾಮಕ್ಕೂ ₹5 ರಿಂದ ₹10 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ತರುತ್ತಿದ್ದೇನೆ. ಈ ಹಿಂದೆ ಯಾರೂ ಇಷ್ಟು ಅನುದಾನ ತಂದಿರಲಿಲ್ಲ ಎಂದರು.
ಇದನ್ನೂ ಓದಿ: ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳ್ಳಿ ಗ್ರಾಮದಲ್ಲಿ ಮಂಗಳವಾರ ಸುಮಾರು ₹ 7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಫೇವರ್ಸ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭೂಮಿಪೂಜೆ ನೆರವೇರಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುರೇಶ್ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಿಂಗಪ್ಪ ಶಹಾಪೂರಕರ್, ಸುರೇಶ್ ಮುಚ್ಚಂಡಿ, ನಾಗೇಶ ದೇಸಾಯಿ, ಸಿಪಿಐ ನಾಗನಗೌಡ, ಪ್ರಕಾಶ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

