Gruha Lakshmi scheme payment delay: ಗೃಹಲಕ್ಷ್ಮಿ ಯೋಜನೆ ಹಣ ಬಾಕಿ ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಉತ್ತರದಿಂದ ಅಸಮಾಧಾನಗೊಂಡ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭೆ (ಡಿ.17): ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಇರುವ ವಿಚಾರವಾಗಿ ಸದನದಲ್ಲಿ ಭಾರೀ ಕೋಲಾಹಲ ಮುಂದುವರಿಯಿತು. ವಿಪಕ್ಷಗಳ ಆಕ್ರೋಶಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 'ಈವರೆಗೆ 52,400.16 ಕೋಟಿ ರೂಪಾಯಿಗಳನ್ನು ಮಹಿಳೆಯರಿಗೆ ತಲುಪಿಸಿದ್ದೇವೆ. ಮಾಹಿತಿ ವ್ಯತ್ಯಾಸವಾಗಿದ್ದಕ್ಕೆ ನಾನು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದೇನೆ. ನನ್ನ ಪದ ಬಳಕೆಯಿಂದ ಸುರೇಶ್ ಕುಮಾರ್ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧಳಿದ್ದೇನೆ. ಆದರೆ, ಒಬ್ಬ ಮಹಿಳೆ ಎಂಬ ಕಾರಣಕ್ಕೆ ನೀವು ಈ ಮಟ್ಟಕ್ಕೆ ನನ್ನನ್ನು ಗುರಿ ಮಾಡುತ್ತಿದ್ದೀರಾ?' ಎಂದು ಪ್ರಶ್ನಿಸುವ ಮೂಲಕ ಭಾವುಕರಾಗಿ ಕೌಂಟರ್ ನೀಡಿದರು.

​'ಸರ್ಕಾರ ಬಿಕಾರಿಯಾಗಿದೆ'" ಆರ್. ಅಶೋಕ್ ತೀವ್ರ ವಾಗ್ದಾಳಿ

​ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಚಿವೆಯ ಅಸಮರ್ಪಕ ಉತ್ತರದ ವಿರುದ್ಧ ಕೆಂಡಾಮಂಡಲವಾದರು. 'ಸಚಿವರು ಏನು ಹೇಳುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿದ ಅಧಿಕಾರಿ ಯಾರು ಎಂಬ ಹೆಸರನ್ನು ಬಹಿರಂಗಪಡಿಸಲಿ. ಡಿಬಿಟಿ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದೆವು, ಇವರು ತಂದ 'ಫ್ರೂಟ್ಸ್' ಸಾಫ್ಟ್‌ವೇರ್ ಈಗ ಕೊಳೆತು ಹೋಗಿದೆ. ಎರಡು ತಿಂಗಳ ಹಣ ಎಲ್ಲಿಗೆ ಹೋಯ್ತು? ಸರ್ಕಾರ ಬಿಕಾರಿಯಾಗಿದೆಯೇ? ಮಹಿಳೆಯರಿಗೆ ಯಾಕೆ ದ್ರೋಹ ಮಾಡುತ್ತಿದ್ದೀರಿ?' ಎಂದು ಕಟು ಪದಗಳಲ್ಲಿ ಟೀಕಿಸಿದರು.

​ಸದನದಲ್ಲಿ ಮಹಿಳೆ-ಪುರುಷ ಎಂಬ ಭೇದವಿಲ್ಲ: ಆರ್. ಅಶೋಕ್ ತಿರುಗೇಟು

​ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ 'ಮಹಿಳಾ ಕಾರ್ಡ್' ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, 'ಇಲ್ಲಿ ವಿಷಯಾಂತರ ಮಾಡಬೇಡಿ. ರೂಲ್‌ಬುಕ್‌ನಲ್ಲಿ ಮಹಿಳೆ ಅಥವಾ ಪುರುಷ ಎಂಬ ಭೇದವಿಲ್ಲ, ಅಲ್ಲಿ ಇರುವುದು ಕೇವಲ 'ಮಂತ್ರಿ' ಎಂಬ ಸ್ಥಾನ ಮಾತ್ರ. ನೀವು ಮಂತ್ರಿಯಾಗಿ ಜವಾಬ್ದಾರಿಯುತ ಉತ್ತರ ನೀಡಬೇಕು. ಬಾಕಿ ಇರುವ ಎರಡು ತಿಂಗಳ ಕಂತನ್ನು ಯಾವಾಗ ಹಾಕುತ್ತೀರಿ ಎಂದು ನೀವು ಸ್ಪಷ್ಟವಾಗಿ ಹೇಳುತ್ತಿಲ್ಲ' ಎಂದು ಕಿಡಿಕಾರಿದರು.

​ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ

​ಸಚಿವೆಯ ಉತ್ತರದಿಂದ ತೃಪ್ತರಾಗದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. 'ಸದನ ಮುಗಿಯುವ ಒಳಗಾಗಿ ಬಾಕಿ ಹಣ ಹಾಕುತ್ತೇವೆ ಎಂದು ಸರ್ಕಾರ ಘೋಷಿಸಬೇಕಿತ್ತು. ಅದನ್ನ ಬಿಟ್ಟು ಹಾರಿಕೆ ಉತ್ತರ ನೀಡುತ್ತಿದೆ' ಎಂದು ಆರೋಪಿಸಿ, ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಟ್ಟಾಗಿ ಸಭಾತ್ಯಾಗ ಮಾಡಿದರು.

​ಪ್ರಶ್ನೋತ್ತರ ಕಲಾಪ ಮುಂದುವರಿಸಿದ ಸ್ಪೀಕರ್

​ವಿಪಕ್ಷಗಳ ಸಭಾತ್ಯಾಗದೊಂದಿಗೆ ಗೃಹಲಕ್ಷ್ಮಿ ಯೋಜನೆಯ ಕುರಿತಾದ ಸುದೀರ್ಘ ಗಲಾಟೆ ಒಂದು ಹಂತಕ್ಕೆ ಅಂತ್ಯವಾಯಿತು. ವಿಪಕ್ಷ ಸದಸ್ಯರು ಹೊರನಡೆದ ನಂತರ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮುಂದಿನ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು.