ನಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ನಾವು ಯಾವುದೇ ಪೋಸ್ಟ್ ಮಾಡಲ್ಲ. ಅದಕ್ಕಾಗಿ ಕೆಲವು ಜನರನ್ನು ನೇಮಿಸಲಾಗಿರುತ್ತದೆ. ಸಿಬ್ಬಂದಿ ಪೋಸ್ಟ್ ಮಾಡುವ ಸಂದರ್ಭದಲ್ಲಿ ಅಚಾತುರ್ಯವಾಗಿದೆ. ಅದು ಕೂಡ ತಪ್ಪು. ಆ ತಪ್ಪನ್ನು ನಾನು ತಪ್ಪು ಅಂತಾನೆ ಹೇಳ್ತೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.
ಬೆಳಗಾವಿ: ಸೋದರನಾಗಿರುವ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ (MLC Channaraj Hattiholi) ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಾದ ಎಡವಟ್ಟಿನ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Laxmi Hebbalkar) ಪ್ರತಿಕ್ರಿಯಿಸಿದ್ದಾರೆ. ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ. ನಾನು ಆಗಿರೋ ತಪ್ಪಿಗೆ ವ್ಯಥೆಯನ್ನ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು. ನಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ನಾವು ಯಾವುದೇ ಪೋಸ್ಟ್ ಮಾಡಲ್ಲ. ಅದಕ್ಕಾಗಿ ಕೆಲವು ಜನರನ್ನು ನೇಮಿಸಲಾಗಿರುತ್ತದೆ. ಸಿಬ್ಬಂದಿ ಪೋಸ್ಟ್ ಮಾಡುವ ಸಂದರ್ಭದಲ್ಲಿ ಅಚಾತುರ್ಯವಾಗಿದೆ. ಅದು ಕೂಡ ತಪ್ಪು. ಆ ತಪ್ಪನ್ನು ನಾನು ತಪ್ಪು ಅಂತಾನೆ ಹೇಳ್ತೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.
ಚೆಕ್ ಮಾಡುವಷ್ಟರಲ್ಲಿ ಸರಿ ಆಗಿತ್ತು!
ನಾನು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪೋಸ್ಟ್‌ನಲ್ಲಾದ ತಪ್ಪನ್ನು ನಾನು ನೋಡಿರಲಿಲ್ಲ. ಸೋದರ ಚನ್ನರಾಜ್ ಈ ವಿಷಯ ನನ್ನ ಗಮನಕ್ಕೆ ತಂದು, ತಪ್ಪನ್ನು ಸರಿ ಮಾಡಿಸಿದ್ದೇನೆ ಎಂದು ಹೇಳಿದರು. ನಾನು ಪೋಸ್ಟ್ ಚೆಕ್ ಮಾಡುವಷ್ಟರಲ್ಲಿ ಎಲ್ಲವೂ ಸರಿಯಾಗಿತ್ತು. ನಾನು ಮತ್ತು ಸೋದರ ಚನ್ನರಾಜ್ ಇಬ್ಬರು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚಿಸಿದರು.
ಯತೀಂದ್ರ ಹೇಳಿಕೆಗೆ ಅಸಮಾಧಾನ
ಇದೇ ವೇಳೆ ಸಿಎಂ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ಎಷ್ಟು ಸರಿ ತಪ್ಪು ಅಂತ ನಾನು ಹೇಳಲ್ಲ. ಹೈಕಮಾಂಡ್ ಮೇಲೆ ನಾವು ಬಿಟ್ಟಂತ ಸಂದರ್ಭದಲ್ಲಿ ಸ್ವತಃ ಸಿಎಂ ಮತ್ತು ಡಿಸಿಎಂ ಯೇ ಹೈಕಮಾಂಡ್ ಹೇಳಿದಂತೆ ಅಂದಾಗ ನಾವು ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದರು. ಜವಾಬ್ದಾರಿಯುತ ಸ್ಥಾನದಲ್ಲಿರೋರು ಗೊಂದಲಕ್ಕೆ ಎಡೆ ಮಾಡುಕೊಡಬಾರದು ಎಂದು ಪರೋಕ್ಷವಾಗಿ ಯತೀಂದ್ರ ಹೇಳಿಕೆಗೆ ಅಸಮಾಧಾನ ಹೊರ ಹಾಕಿದರು.
ಹೈಕಮಾಂಡ್ ಹೇಳುವುದನ್ನು ಸಿಎಂ ಮತ್ತು ಡಿಸಿಎಂ ಕೇಳುತ್ತಾರೆ. ಈಗಾಗಲೇ ಇಬ್ಬರು ಸಹ ಇದನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ ಹೇಳೊದನ್ನ ನಾವೆಲ್ಲರೂ ಕೇಳಬೇಕು. ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಅಂತ ಹೇಳುತ್ತೇನೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಯತೀಂದ್ರ ಅವರಿಗೆ ಪಕ್ಷದಿಂದ ನೋಟೀಸ್ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಇದನ್ನೂ ಓದಿ: ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಬಿಜೆಪಿ ಅವರಿಗೆ ನಾಚಿಕೆ ಆಗಬೇಕು!
ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ಅವರಿಗೆ ಈಗ ರೈತರ ಬಗ್ಗೆ ಕರುಣೆ ಬಂದಂತಿದೆ. ಬಿಜೆಪಿ ಅವರು ಪ್ರತಿಭಟನೆ ಮಾಡಲಿ ಬೇಡ ಅಂದೋರು ಯಾರು? ಕಾಂಗ್ರೆಸ್ ಮತ್ತು ನಾವೆಲ್ಲರೂ ರೈತರ ಪರವಾಗಿದ್ದೇವೆ. ರೈತರಿಗಾಗಿ ಬಿಜೆಪಿ ಏನು ಮಾಡಿದೆ ಎಂಬುದನ್ನು ಅವರು ಹೇಳಲಿ ಎಂದು ಪ್ರಶ್ನೆ ಮಾಡಿದರು. ರೈತರ ಮೇಲೆ ಗೋಲಿಬಾರ್ ಮಾಡಿದ್ದು ಬಿಜೆಪಿ. ದೆಹಲಿಯ ಚಳಿ-ಮಳೆಯಲ್ಲಿ ರೈತರು ಪ್ರತಿಭಟನೆ ಮಾಡಿದರು. ಈ ವೇಳೆ ಹಲವು ರೈತರು ಸಾವನ್ನಪ್ಪಿದರು. ರೈತರ ಮೇಲೆ ಗಾಡಿ ಹತ್ತಿಸಿದವರು ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಿಜೆಪಿ ಅವರಿಗೆ ನಾಚಿಕೆ ಆಗಬೇಕು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಚನ್ನರಾಜ್ ಪೋಸ್ಟ್‌ನಲ್ಲಾದ ಎಡವಟ್ಟು ಏನು?
ಬೆಳಗಾವಿಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಚನ್ನರಾಜ್ ಹಟ್ಟಿಹೊಳಿ ಸ್ವಾಗತಿಸಿದ್ದರು. ಈ ಕುರಿತು ಡಿಕೆ ಶಿವಕುಮಾರ್ ಅವರ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಡಿಸಿಎಂ ಬದಲಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಬರೆಯಲಾಗಿತ್ತು. ಕೂಡಲೇ ಎಚ್ಚೆತ್ತು ತಪ್ಪನ್ನು ಸರಿಪಡಿಸಲಾಗಿತ್ತು.
ಇದನ್ನೂ ಓದಿ: ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್.ರಾಜಣ್ಣ



