- Home
- Karnataka Districts
- ಶಾಸಕ ರಾಜು ಕಾಗೆ ಕಾರು, ಪುತ್ರಿಯದ್ದೇ ಕಾರುಬಾರು; ಜನಸೇವೆಗೆ ಕೊಟ್ಟ ಸರ್ಕಾರದ ಕಾರಿನಲ್ಲಿ ಖಾಸಗಿ ಸಂಚಾರ
ಶಾಸಕ ರಾಜು ಕಾಗೆ ಕಾರು, ಪುತ್ರಿಯದ್ದೇ ಕಾರುಬಾರು; ಜನಸೇವೆಗೆ ಕೊಟ್ಟ ಸರ್ಕಾರದ ಕಾರಿನಲ್ಲಿ ಖಾಸಗಿ ಸಂಚಾರ
ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರ ಪುತ್ರಿ ತೃಪ್ತಿ ಕಾಗೆ, ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಚಿಕ್ಕೋಡಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಳಗಾವಿ (ಡಿ.28): ಸಾರ್ವಜನಿಕರ ಸೇವೆಯ ಉದ್ದೇಶಕ್ಕಾಗಿ ನೀಡಲಾದ ಸರ್ಕಾರಿ ವಾಹನವನ್ನು ಶಾಸಕರೊಬ್ಬರ ಪುತ್ರಿ ಸ್ವಂತ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.
ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಅಧ್ಯಕ್ಷರಾಗಿರುವ ರಾಜು ಕಾಗೆ ಅವರ ಪುತ್ರಿ ತೃಪ್ತಿ ಕಾಗೆ ಅವರು ಸರ್ಕಾರಿ ವಾಹನದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿವೆ.
ಚಿಕ್ಕೋಡಿ ಪಟ್ಟಣದಲ್ಲಿ ಶಾಸಕರಿಗೆ ನೀಡಲಾದ ಸರ್ಕಾರಿ ವಾಹನದಲ್ಲಿ ತೃಪ್ತಿ ಕಾಗೆ ಅವರು ಸಂಚರಿಸುತ್ತಿರುವುದು ಕಂಡುಬಂದಿದೆ. ನಿಯಮದ ಪ್ರಕಾರ, ಈ ವಾಹನಗಳನ್ನು ಕೇವಲ ಸರ್ಕಾರಿ ಕೆಲಸಗಳಿಗೆ ಅಥವಾ ಶಾಸಕರ ಅಧಿಕೃತ ಪ್ರವಾಸಗಳಿಗೆ ಮಾತ್ರ ಬಳಸಬೇಕು. ಆದರೆ, ಇಲ್ಲಿ ಶಾಸಕರ ಕುಟುಂಬದ ಸದಸ್ಯರೇ ಸರ್ಕಾರಿ ವಾಹನವನ್ನು ಖಾಸಗಿ ದರ್ಬಾರ್‌ಗಾಗಿ ಬಳಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಶಾಸಕರ ಪುತ್ರಿ ಸರ್ಕಾರಿ ಕಾರಿನಲ್ಲಿ ಸಂಚರಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಸರ್ಕಾರಿ ಸ್ವತ್ತನ್ನು ಈ ರೀತಿ ಕುಟುಂಬದ ಕೆಲಸಗಳಿಗಾಗಿ ಬಳಸುವುದು ಅಧಿಕಾರದ ದುರುಪಯೋಗ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಾಯುವ್ಯ ಕರ್ನಾಟಕ ಸಾರಿಗೆ ನಿಮಗದ ಅಧ್ಯಕ್ಷರಾಗಿಯೂ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜು ಕಾಗೆ ಅವರ ಕುಟುಂಬದಿಂದಲೇ ಇಂತಹ ನಿಯಮ ಬಾಹಿರ ನಡವಳಿಕೆ ಕಂಡುಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತರುವ ಸಾಧ್ಯತೆ ಇದೆ.

