ಉತ್ತರ ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಗುತ್ತಾ ಬಂದಿದ್ದು, ನಮಗೆ ಕಿತ್ತೂರು ಕರ್ನಾಟಕ ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷ, ಕಾಂಗ್ರೆಸ್‌ ಶಾಸಕ ರಾಜು ಕಾಗೆ ಆಗ್ರಹಿಸಿದ್ದಾರೆ.

ಶಿಗ್ಗಾಂವಿ (ಡಿ.13): ಉತ್ತರ ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಗುತ್ತಾ ಬಂದಿದ್ದು, ನಮಗೆ ಕಿತ್ತೂರು ಕರ್ನಾಟಕ ಎಂಬ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷ, ಕಾಂಗ್ರೆಸ್‌ ಶಾಸಕ ರಾಜು ಕಾಗೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕದಂತೆ ನಮಗೂ ₹5000 ಕೋಟಿ ಕೊಡಬೇಕು. ಇಲ್ಲವಾದರೆ, ನಮಗೆ ಪ್ರತ್ಯೇಕ ರಾಜ್ಯ ಕೊಡಿ. ಪ್ರತ್ಯೇಕ ರಾಜ್ಯದ ಕೂಗು ಸದ್ಯ ನನ್ನದೊಂದೆ ಇದೆ. ಮುಂದೆ ಇಬ್ಬರು, ಮೂವರು ಹಾಗೆ ಐವತ್ತಕ್ಕೂ ಹೆಚ್ಚು ಜನ ಶಾಸಕರು ಸೇರಿ ಪ್ರತ್ಯೇಕ ರಾಜ್ಯದ ಕೂಗಿಗೆ ಕೈಜೋಡಿಸುತ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬೆಳಗಾವಿ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ ಚರ್ಚೆಯಾಗಿದೆ. ಆದರೆ, ಅಭಿವೃದ್ಧಿ ಕಾರ್ಯಗಳ ಕುರಿತು ಆಗಿಲ್ಲ. ಸರ್ಕಾರ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ, ಇಲ್ಲವಾದರೆ ಅಭಿವೃದ್ಧಿ ಕನಸಾಗೆ ಉಳಿಯುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಹೊಸ ತಾಲೂಕುಗಳು ಆದರೂ ಸಹ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯ ಸೇರಿದಂತೆ ಸರಿಯಾದ ಸರ್ಕಾರಿ ಕಚೇರಿಗಳಿಲ್ಲ. ಮುಂದೆ ನನಗೆ ಎಷ್ಟು ಜನ ಬೆಂಬಲ ನೀಡುತ್ತಾರೋ ನೋಡುತ್ತೇನೆ. ಎಲ್ಲ ಶಾಸಕರಿಗೂ ಇದರ ಅರಿವು ಮೂಡಿಸುತ್ತೇನೆ. ಕೆಲವರು ಇದಕ್ಕೆ ವಿರೋಧ ಮಾಡಿದ್ದು, ಕೆಲವರು ಬೆಂಬಲಿಸಿದ್ದಾರೆ. ಬೆಂಬಲ ನೀಡಿದವರನ್ನು ಕರೆದುಕೊಂಡು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತೇನೆ ಎಂದರು

ತಾರತಮ್ಯ ನಿವಾರಣಿಗೆ ಇಚ್ಛಾಸಕ್ತಿ ಕೊರತೆ: ಅಭಿವೃದ್ಧಿ ವಿಚಾರದಲ್ಲಿ ನಡೆಯುತ್ತಿರುವ ತಾರತಮ್ಯ ನಿವಾರಣೆಯಾಗಬೇಕಾದರೆ ಉತ್ತರ ಕರ್ನಾಟಕ ಭಾಗ ಪ್ರತ್ಯೇಕ ರಾಜ್ಯವಾಗಬೇಕು. ಅದಕ್ಕಾಗಿ ನನ್ನ ಜೀವ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಸದನದಲ್ಲೇ ಘೋಷಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಮೇಲಿನ ಚರ್ಚೆ ವೇಳೆ ಮಾತನಾಡಿದ ರಾಜು ಕಾಗೆ, ಆರೋಗ್ಯ, ಶಿಕ್ಷಣ, ನೀರಾವರಿ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕ ಭಾಗ ಹಿಂದುಳಿದಿದೆ. ಯಾವುದೇ ಸೌಲಭ್ಯ ಸಿಗದ ಕಾರಣ ನನ್ನ ಮತ ಕ್ಷೇತ್ರದ ಹಲವು ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿಸಿ ಎಂಬ ಬೇಡಿಕೆಗಳನ್ನು ಇಡುತ್ತಿದ್ದವು. ಆ ಗ್ರಾಮದ ಜನರೊಂದಿಗೆ ಮಾತನಾಡಿ ಅವರನ್ನು ಕರ್ನಾಟಕದಲ್ಲಿಯೇ ಉಳಿಯುವಂತೆ ಮಾಡಿದ್ದೇವೆ. ಆದರೂ, ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕ ಭಾಗದ ಸಮರ್ಪಕ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ಕಂದಾಯ ಸಚಿವರ ವಿರುದ್ಧ ಆಕ್ರೋಶ

ಕಾಗವಾಡದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಅದಕ್ಕಾಗಿ 8.60 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಆದರೆ, ಪ್ರಜಾ ಸೌಧ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬೇಕಿದ್ದು, 2 ಕೋಟಿ ರು. ಹೆಚ್ಚುವರಿ ಅನುದಾನ ನೀಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮನವಿ ಮಾಡಿದ್ದೆ. ಅದಕ್ಕೆ ಕಂದಾಯ ಸಚಿವರು ಒಟ್ಟು 8 ಪ್ರಜಾಸೌಧ ನಿರ್ಮಾಣ ಆಗುತ್ತಿದ್ದು, ಎಲ್ಲ ಪ್ರಜಾಸೌಧಕ್ಕೂ 8.60 ಕೋಟಿ ರು. ನಿಗದಿ ಮಾಡಿದ್ದೇವೆ. ಕಾಗವಾಡಕ್ಕೆ ಹೆಚ್ಚಿನ ಅನುದಾನ ನೀಡಿದರೆ ಉಳಿದ ತಾಲೂಕುಗಳು ಕೇಳುತ್ತವೆ.

ಹೀಗಾಗಿ ಕೊಡಲಾಗಲ್ಲ ಎಂದರು. ಆದರೆ, ಕಡೂರು ಪ್ರಜಾಸೌಧ ನಿರ್ಮಾಣಕ್ಕೆ 16 ಕೋಟಿ ರು. ನಿಗದಿ ಮಾಡಲಾಗಿದೆ. ಈ ತಾರತಮ್ಯ ಏತಕ್ಕಾಗಿ ಎಂಬುದನ್ನು ಕಂದಾಯ ಸಚಿವರು ತಿಳಿಸಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಶಾಸಕರಿಗೇ ಅಧಿಕಾರಿಗಳು ಬೆಲೆ ನೀಡದ ಪರಿಸ್ಥಿತಿಯಿದೆ. ಕಂದಾಯ ಸಚಿವರು ನನ್ನನ್ನು ಕೀಳಾಗಿ ನೋಡಿದ ಕಾರಣಕ್ಕಾಗಿ ಈ ಹಿಂದೆ ಸದನದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಠಾರಿಯಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದೆ. ಅವರ ವಿರುದ್ಧ ಈವರೆಗೆ ಯಾವುದೇ ಕ್ರಮವಾಗಿಲ್ಲ. ಇದು ನಮ್ಮ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.