- Home
- Karnataka Districts
- ಬೆಂಗಳೂರಿನಿಂದ ಸ್ಪ್ಲೆಂಡರ್ ಬೈಕ್ ಕದ್ದು ತೆಲುಗು ಸಿನಿಮಾ ಪುಷ್ಪ ಶೂಟಿಂಗ್ ಪ್ರದೇಶಕ್ಕೆ ಮಾರಾಟ ಮಾಡಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರಿನಿಂದ ಸ್ಪ್ಲೆಂಡರ್ ಬೈಕ್ ಕದ್ದು ತೆಲುಗು ಸಿನಿಮಾ ಪುಷ್ಪ ಶೂಟಿಂಗ್ ಪ್ರದೇಶಕ್ಕೆ ಮಾರಾಟ ಮಾಡಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರಿನಲ್ಲಿ 60 ಸ್ಪ್ಲೆಂಡರ್ ಬೈಕ್‌ಗಳನ್ನು ಕದ್ದಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನಕಲಿ ಕೀ ಬಳಸಿ ಬೈಕ್ ಕದ್ದು, ತಮಿಳುನಾಡಿನ ಬೆಟ್ಟ ಪ್ರದೇಶಗಳಲ್ಲಿ ಹಾಗೂ 'ಪುಷ್ಪ' ಸಿನಿಮಾ ಶೂಟಿಂಗ್ ನಡೆದ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಖತರ್ನಾಕ್ ಬೈಕ್ ಕಳ್ಳರ ಬಂಧನ
ಬೆಂಗಳೂರು ನಗರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಖತರ್ನಾಕ್ ಬೈಕ್ ಕಳ್ಳರ ಗ್ಯಾಂಗೊಂದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ರಂಜಿತ್, ಯುವರಾಜ್, ವಿನೋದ್ ಹಾಗೂ ಮಣಿಕಂಠ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬರೋಬ್ಬರಿ 60 ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ಗಳನ್ನು ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ್ದ ಬೈಕ್‌ಗಳ ಒಟ್ಟು ಮೌಲ್ಯ ಸುಮಾರು ₹50 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಕಳ್ಳತನ ಮಾಡಿದ ಕೆಲವು ಬೈಕ್‌ಗಳನ್ನು ತೆಲುಗು ಸಿನಿಮಾ ‘ಪುಷ್ಪ’ ಶೂಟಿಂಗ್ ನಡೆದಿದ್ದ ಪ್ರದೇಶಗಳಲ್ಲಿ ಮಾರಾಟ ಮಾಡಿದ್ದ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ
ಸ್ಪ್ಲೆಂಡರ್ ಬೈಕ್‌ಗಳೇ ಟಾರ್ಗೆಟ್ ಯಾಕೆ?
ಆರೋಪಿಗಳು ಇತರೆ ಲಕ್ಷುರಿ ಬೈಕ್‌ಗಳನ್ನು ಬಿಟ್ಟು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಸ್ಪ್ಲೆಂಡರ್ ಬೈಕ್‌ಗಳನ್ನು ಕಡಿಮೆ ಬೆಲೆಯಲ್ಲಿ ಸುಲಭವಾಗಿ ಮಾರಾಟ ಮಾಡಬಹುದಾದ ಕಾರಣ ಹಾಗೂ ಅವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಬೈಕ್‌ಗಳನ್ನೇ ಆಯ್ಕೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ ತಮಿಳುನಾಡಿನಲ್ಲಿ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಅರಿತಿದ್ದ ಆರೋಪಿಗಳು, ಈ ಬೈಕ್‌ಗಳನ್ನು ಕಳ್ಳತನ ಮಾಡಿ ಅಲ್ಲಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು.
ನಕಲಿ ಕೀ ಬಳಸಿ, ಹ್ಯಾಂಡಲ್ ಲಾಕ್ ಮುರಿದು ಕಳ್ಳತನ
ಬಂಧಿತ ಆರೋಪಿಗಳು ಕಳ್ಳತನಕ್ಕೆ ವಿಶೇಷ ತಂತ್ರಗಳನ್ನು ಬಳಸುತ್ತಿದ್ದರು. ನಕಲಿ ಕೀಲಿಗಳನ್ನು ಉಪಯೋಗಿಸಿ ಅಥವಾ ಹ್ಯಾಂಡಲ್ ಲಾಕ್ ಮುರಿದು ಕೆಲವೇ ನಿಮಿಷಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ದಿನಕ್ಕೆ ಸರಾಸರಿ ನಾಲ್ಕು ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳು ಬೆಂಗಳೂರು ನಗರಕ್ಕೆ ಬಸ್‌ನಲ್ಲಿ ಬಂದು, ವಿವಿಧ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸಿ ಬೈಕ್ ಅನ್ನು ಡ್ರೈ ಮಾಡಿಕೊಂಡು ಹೋಗುತ್ತಿದ್ದರು.
ಸಿಸಿಟಿವಿ ಆಧಾರಿಸಿ ಬಂಧನ
ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ ಬೆಂಗಳೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಸುಳಿವಿನ ಮೇರೆಗೆ ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಆರೋಪಿಗಳಿಂದ 60 ಕಳ್ಳತನಗೊಂಡ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿಗೆ ಬೈಕ್ ಸಾಗಾಟ, ಬೆಟ್ಟ ಪ್ರದೇಶಗಳಲ್ಲಿ ಮಾರಾಟ
ಪೊಲೀಸ್ ತನಿಖೆಯಲ್ಲಿ, ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ಬೈಕ್‌ಗಳನ್ನು ತಮಿಳುನಾಡಿನ ಜೋಲಾರಪೇಟೆ ಹಾಗೂ ತಿರುಪತ್ತೂರು ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದ ಸಂಗತಿ ಬಹಿರಂಗವಾಗಿದೆ. ಅಲ್ಲದೆ, ವೆಲ್ಲೂರು ಜಿಲ್ಲೆಯ ವಡಗೋತ್ತೂರು ಗ್ರಾಮದ ನಿವಾಸಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ವಡಗೋತ್ತೂರು ಗ್ರಾಮ ಬೆಟ್ಟ ಪ್ರದೇಶವಾಗಿರುವುದರಿಂದ, ಬೆಟ್ಟದ ರಸ್ತೆಗಳಲ್ಲಿ ಓಡಿಸಲು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ಗಳೇ ಸೂಕ್ತ . ಬೆಟ್ಟದ ರಸ್ತೆಗಳಲ್ಲಿ ಫಸ್ಟ್ ಗೇರ್‌ನಲ್ಲಿ ಸುಲಭವಾಗಿ ಈ ಬೈಕ್ ಅನ್ನು ಚಾಲನೆ ಮಾಡಬಹುದಾಗಿದ್ದು, ಉತ್ತಮ ಮೈಲೇಜ್ ಮತ್ತು ಬಾಳಿಕೆ ದೊರಕುವ ಕಾರಣ ಈ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಟೆಕ್ಕಿಯಿಂದ ಲಕ್ಷುರಿ ಲ್ಯಾಪ್ ಕಳ್ಳತನ, ಪಿಜಿಗಳೇ ಟಾರ್ಗೆಟ್!
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಲ್ಯಾಪ್ಟಾಪ್ ಕಳ್ಳತನ ಪ್ರಕರಣದಲ್ಲಿ ರಾಜದೋರೈ ಮತ್ತು ಗೌತಮ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜದೋರೈ ಪಿಜಿ ನಿವಾಸಗಳನ್ನು ಗುರಿಯಾಗಿಸಿಕೊಂಡು ಬೆಳಗಿನ ಜಾವ ಲ್ಯಾಪ್ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದರೆ, ತಮಿಳುನಾಡು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಡೇಟಾ ಅನಾಲಿಸ್ಟ್ ಆಗಿರುವ ಗೌತಮ್ ಕಳ್ಳತನವಾದ ಲ್ಯಾಪ್ಟಾಪ್‌ಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದನು. ಈತ ಲ್ಯಾಪ್ ಟಾಪ್ ಶಾಪ್ ಇಟ್ಟಿದ್ದ. ರಾಜದೊರೈ ಮೂಲಕ ಲ್ಯಾಪ್ ಟಾಪ್ ಕಳ್ಳತನ ಮಾಡಿಸಿ ಮಾರುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹40 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 48 ಲ್ಯಾಪ್ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

