ಬಾಗಿಲುಗಳೇ ಇಲ್ಲದ ಮನೆಗಳು, ಬ್ಯಾಂಕುಗಳು; ಕಳ್ಳತನದ ಭಯವೇ ಇಲ್ಲದ ಭಾರತದ ಅದ್ಭುತ ಊರು
ಇಲ್ಲೊಂದು ವಿಶೇಷ ಹಳ್ಳಿ ಇದೆ. ತುಂಬಾನೇ ವಿಚಿತ್ರವಾಗಿದೆ. ಈ ಊರಿನ ಮನೆಗಳಿಗೆ ಬಾಗಿಲು ಇರಲ್ಲ. ಬ್ಯಾಂಕುಗಳಿಗೂ ಬೀಗ ಹಾಕಲ್ವಂತೆ. ಆದರೂ ಕಳ್ಳತನ ನಡೆಯಲ್ಲ. ಈ ಊರಿನ ವಿಶೇಷತೆ ಏನು? ಸ್ಟೋರಿ ಓದಿ.

ಕಳ್ಳತನ ಚರಿತ್ರೆಯಲ್ಲೇ ಇಲ್ಲ
ಮನೆಗೆ ನುಗ್ಗಿ ಕಳ್ಳತನ ಮಾಡುವ ಪ್ರಕರಣಗಳ ಬಗ್ಗೆ ನೀವು ಕೇಳಿರುತ್ತೀರಿ. ಅದಕ್ಕೆ ಮನೆಯಿಂದ ಆಚೆ ಹೋಗುವಾಗ ಬೀಗ ಜಡಿದು ಅದೂ ಸಾಲದಕ್ಕೆ ಸಿಸಿಟಿವಿಯನ್ನೂ ಇಟ್ಟು ಹೋಗಿರುತ್ತೀವಿ. ಆದರೆ ಭಾರತದಲ್ಲೇ ಒಂದು ವಿಶೇಷ ಹಳ್ಳಿ ಇದೆ. ಅಲ್ಲಿನ ಮನೆಗಳಿಗೆ ಬೀಗಗಳಷ್ಟೇ ಅಲ್ಲ, ಬಾಗಿಲುಗಳೂ ಇರುವುದಿಲ್ಲ! ಅಷ್ಟೇ ಏಕೆ, ಇಲ್ಲಿನ ಅಂಗಡಿ-ಮುಂಗಟ್ಟುಗಳಿಗೂ ಬೀಗ ಹಾಕಲ್ಲ.
ಎಲ್ಲಿದೆ ಆ ಊರು?
ಈ ಊರು ಇರುವುದು ಪ್ರಸಿದ್ಧ ಪುಣ್ಯಕ್ಷೇತ್ರ ‘ಶನಿ ಶಿಂಗ್ಣಾಪುರ’(Shani Shingnapur). ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಶನಿ ಶಿಂಗ್ಣಾಪುರ ಗ್ರಾಮಕ್ಕೆ ‘ಬೀಗಗಳಿಲ್ಲದ ಊರು’ ಎಂದೇ ಖ್ಯಾತಿ. ಇಲ್ಲಿನ ನೂರಾರು ವರ್ಷಗಳ ಇತಿಹಾಸವನ್ನು ಗಮನಿಸಿದರೆ.. ಜನರು ತಮ್ಮ ಮನೆಗಳಿಗೆ ಮರದ ಬಾಗಿಲುಗಳನ್ನಾಗಲಿ, ಬೀಗಗಳನ್ನಾಗಲಿ ಅಳವಡಿಸಿಲ್ಲ. ಕೇವಲ ಪರದೆ ಅಥವಾ ಬಟ್ಟೆಯನ್ನು ಮಾತ್ರ ಪ್ರವೇಶದ್ವಾರಕ್ಕೆ ಅಡ್ಡಲಾಗಿ ಹಾಕಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಕಟ್ಟಡಗಳು ಬಂದಿದ್ದರೂ ಹಳೆಯ ಪರಂಪರೆಗೆ ಗೌರವ ನೀಡಿ ಬೀಗ ಹಾಕುತ್ತಿಲ್ಲ.
ಕಾರಣವೇನು?
ಸ್ಥಳೀಯ ನಂಬಿಕೆಗಳ ಪ್ರಕಾರ.. ಇಡೀ ಗ್ರಾಮಕ್ಕೆ ಶನಿದೇವನೇ ರಕ್ಷಕ. ಗ್ರಾಮಸ್ಥರು ತಮ್ಮ ಮನೆ, ಆಸ್ತಿ ಮತ್ತು ಜೀವವನ್ನು ಶನಿದೇವನ ಪಾದಗಳಿಗೆ ಸಮರ್ಪಿಸಿದ್ದಾರೆ. ನಮ್ಮನ್ನು ಮತ್ತು ನಮ್ಮ ಆಸ್ತಿಯನ್ನು ಕಾಯಲು ಸ್ವತಃ ಶನಿದೇವರೇ ಇದ್ದಾನೆ ಎಂಬುದು ಗ್ರಾಮದ ಅಚಲ ನಂಬಿಕೆ.
ಕಳ್ಳತನ ಮಾಡಿದರೆ ಕಠಿಣ ಶಿಕ್ಷೆ!
ಈ ಗ್ರಾಮದಲ್ಲಿ ಕಳ್ಳತನ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ತಪ್ಪು ಭಾವನೆಯಿಂದ ಗ್ರಾಮದಲ್ಲಿ ಕಳ್ಳತನ ಮಾಡಿದರೆ, ಅವರು ಶನಿದೇವನ ಕೋಪಕ್ಕೆ ತುತ್ತಾಗುತ್ತಾರೆ ಎಂಬ ಬಲವಾದ ನಂಬಿಕೆಯಿದೆ.
ಸ್ವಯಂಭೂ ಶನೀಶ್ವರ
ಶನಿ ಶಿಂಗ್ಣಾಪುರದ ದೇಗುಲಕ್ಕೂ ಒಂದು ವಿಶೇಷತೆಯಿದೆ. ಇಲ್ಲಿ ಶನಿದೇವನಿಗೆ ಯಾವುದೇ ಗೋಪುರ ಅಥವಾ ಗರ್ಭಗುಡಿಯಂತಹ ಕಾಂಕ್ರೀಟ್ ಛಾವಣಿ ಇಲ್ಲ. ಬದಲಾಗಿ, ಕಪ್ಪು ಶಿಲೆಯ ಸ್ವಯಂಭೂ ಮೂರ್ತಿಯು ಬಯಲು ಜಾಗದಲ್ಲೇ ನೆಲೆಸಿದೆ. ಮಳೆ, ಗಾಳಿ, ಬಿಸಿಲು ಎನ್ನದೆ ಶನಿದೇವನು ತೆರೆದ ಆಕಾಶದ ಕೆಳಗೆ ನಿಂತು ಭಕ್ತರನ್ನು ಹರಸುತ್ತಾನೆ ಎಂಬುದು ಪ್ರತೀತಿ.
ಪ್ರವಾಸಿ ತಾಣ
ಈ ವಿಸ್ಮಯಕಾರಿ ಸಂಪ್ರದಾಯವನ್ನು ಕಣ್ಣಾರೆ ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಜನರ ನಂಬಿಕೆಯನ್ನು ಗೌರವಿಸಿ ಇಲ್ಲಿನ ಬ್ಯಾಂಕ್ ಹಾಗೂ ಪೊಲೀಸ್ ಠಾಣೆಗಳಿಗೂ ಸಾಂಪ್ರದಾಯಿಕ ಬೀಗಗಳನ್ನು ಅಳವಡಿಸದೇ ಇರುವುದು ಮತ್ತೊಂದು ಹೆಗ್ಗಳಿಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

