Urdu Habba Controversy in Karnataka: ನವೆಂಬರ್ 9ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ 'ಉರ್ದು ಹಬ್ಬ' ಆಚರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಉತ್ಸವದಲ್ಲಿ ಪುಸ್ತಕ ಮೇಳ, ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ ‘ಉರ್ದು ಹಬ್ಬ’ ಆಯೋಜಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ನವೆಂಬರ್ 9 ರಂದು ಉರ್ದು ದಿನಾಚರಣೆ ಇದೆ. ಅದರ ಅಂಗವಾಗಿ ಸರ್ಕಾರ ಉರ್ದು ಹಬ್ಬ ಆಚರಿಸಲು ಮುಂದಾಗಿದ್ದು, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಚಿವ ಯುಟಿ ಖಾದರ್ ಮಾಹಿತಿ
ಉರ್ದು ಹಬ್ಬ ಆಚರಣೆ ಬಗ್ಗೆ ಸಚಿವ ಯುಟಿ ಖಾದರ್ ಮಾಹಿತಿ ನೀಡಿ.. ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ರಾಜ್ಯದ ಎಲ್ಲಾ ಸಮುದಾಯದ ಜನರಿಗೆ ಪರಿಚಯಿಸುವ ಉದ್ದೇಶದಿಂದ ಹಬ್ಬವನ್ನು ಆಯೋಜಿಸಲಾಗುತ್ತಿದೆ. ವಿಧಾನಸೌಧದ ಆವರಣದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇದೆ. ಉರ್ದು ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಬೃಹತ್ ಕಾರ್ಯಕ್ರಮವನ್ನು ಇಲ್ಲಿ ನಡೆಸುವುದರಲ್ಲಿ ತಪ್ಪಿಲ್ಲ ಎಂಬ ಆಲೋಚನೆಯಿಂದ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಉತ್ಸವದಲ್ಲಿ ಏನೆಲ್ಲ ಇರಲಿದೆ?
ಸಚಿವರು ತಿಳಿಸಿರುವಂತೆ.. ಈ ಉತ್ಸವದಲ್ಲಿ ಪುಸ್ತಕ ಮೇಳ, ಆಹಾರ ಮೇಳ (Food Festival), ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಭವ್ಯ ಕವಿಗೋಷ್ಠಿ ನಡೆಯಲಿದೆ. ಉರ್ದು ಕೇವಲ ಒಂದು ಭಾಷೆಯಲ್ಲ, ಅದೊಂದು ಸಾಂಸ್ಕೃತಿಕ ಪರಂಪರೆ ಎಂದು ಖಾದರ್ ಹೇಳಿದ್ದಾರೆ.
ಉರ್ದು ಕೇವಲ ಒಂದು ಭಾಷೆಯಲ್ಲ. ಅದರೊಂದಿಗೆ ವಿಶಾಲವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ ಬೆಸೆದುಕೊಂಡಿದೆ. ರಾಜ್ಯದ ಇತರ ಸಮುದಾಯಗಳಿಗೆ ಉರ್ದು ಕಾವ್ಯ, ಗದ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಅವಶ್ಯಕತೆಯಿದೆ. ಉರ್ದು ಹಬ್ಬಾ ಮೂಲಕ ಸಾಮೂಹಿಕ ಸಾಂಸ್ಕೃತಿಕ ವೇದಿಕೆಯನ್ನು ರಚಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬಿಜೆಪಿ ಆಕ್ರೋಶ
ಸರ್ಕಾರದ ಈ ಕ್ರಮವನ್ನು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಕನ್ನಡಿಗರ ಹೆಮ್ಮೆ ಮತ್ತು ಅಸ್ಮಿತೆಯ ಪ್ರತೀಕವಾಗಿರುವ ವಿಧಾನಸೌಧವನ್ನು.. ಒಂದು ನಿರ್ದಿಷ್ಟ ಸಮುದಾಯದ ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಸುರೇಶ್ ಕುಮಾರ್, ವಿಧಾನಸೌಧದಂತಹ ಇಂತಹ ಭವ್ಯ ವೇದಿಕೆಯನ್ನು ಕನ್ನಡ ಭಾಷೆಯ ಕಾರ್ಯಕ್ರಮಗಳಿಗಾಗಿ ಸರ್ಕಾರ ಎಷ್ಟು ಬಾರಿ ನೀಡಿದೆ? ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ.
ಈ ಉರ್ದು ಹಬ್ಬದಲ್ಲಿ ರಾಜ್ಯ ಮತ್ತು ದೇಶದ ಖ್ಯಾತ ಕವಿಗಳು, ಸಾಹಿತಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಭಾಷಾ ಸೌಹಾರ್ದತೆ ಬೆಳೆಸುವುದು ಇದರ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ. ಕನ್ನಡಿಗರ ಆಡಳಿತ ಕೇಂದ್ರವಾದ ವಿಧಾನಸೌಧದ ಬದಲು, ಬೇರೆ ಕಲಾಭವನ ಅಥವಾ ಸಾರ್ವಜನಿಕ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಬಹುದಿತ್ತು ಎಂಬ ಅಭಿಪ್ರಾಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರದ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.


