ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ
ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿನೂತನ ಪ್ರಯೋಗ ನಡೆದಿದ್ದು, ಟಿವಿಕೆ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ನಾಯಕ ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಬಳಸಿ ಮತಯಾಚನೆ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ವಿಜಯ್ ಅವರೇ ನೇರವಾಗಿ ಬಂದು ಭಾಷಣ ಮಾಡಿದಂತೆ ಭಾಸವಾಗುತ್ತದೆ.

ಚುನಾವಣೆ ಪ್ರಚಾರ
ಚುನಾವಣಾ ಪ್ರಚಾರ ಅಂದ್ರೆ ರಾಜಕೀಯ ಮುಖಂಡು ಕಾಲುಗಳಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿರುತ್ತಾರೆ. ಇನ್ನು ಪಕ್ಷದ ಸ್ಟಾರ್ ಪ್ರಚಾರಕರು ಮತ್ತು ಮುಖ್ಯಸ್ಥರು ಒಂದೊಂದು ದಿನ ನಾಲ್ಕೈದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದ್ರೆ ಪ್ರತಿದಿನವೂ ಒಂದೇ ಕ್ಷೇತ್ರದಲ್ಲಿಯೇ ಪ್ರಚಾರ ಮಾಡಲು ಸಾಧ್ಯವಾಗಲ್ಲ. ಇದಕ್ಕಾಗಿ ಸ್ಥಳೀಯ ನಾಯಕರು ತಮ್ಮ ಪಕ್ಷದ ಸ್ಟಾರ್ ಪ್ರಚಾರಕರ ಫೋಟೋ ಬಳಸಿ ಮತಯಾಚನೆ ಮಾಡುತ್ತಾರೆ. ಆದ್ರೆ ಈಗ ಕಾಲ ಬದಲಾಗಿದ್ದು, ತಮಿಳುನಾಡಿನಲ್ಲಿ ಹೊಲೊಗ್ರಾಫಿಕ್ ಎಐ ತಂತ್ರಜ್ಞಾನ ಬಳಸಿ ಪ್ರಚಾರ ನಡೆಸಿದ್ದಾರೆ.
ತಂತ್ರಜ್ಞಾನ ಬಳಸಿ ವಿನೂತನ ಪ್ರಚಾರ
ಹೌದು, ತಮಿಳುನಾಡಿನ ಕುಂಭಕೋಣಂನ ತಮಿಳಗ ವೆಟ್ರಿ ಕಳಗಂ (ಟಿವಿಕೆ-Tamilaga Vettri Kazhagam) ಅಭ್ಯರ್ಥಿ ವಿನೋದ್ ರವಿ ಎಂಬವರು ವಿನೂತನವಾಗಿ ಪ್ರಚಾರ ನಡೆಸಿದ್ದಾರೆ. ಟಿವಿಕೆ ಪಕ್ಷದ ನಾಯಕ, ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಚುನಾವಣೆ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ. ತಮ್ಮ ಪ್ರಚಾರ ಕಾರ್ಯದಲ್ಲಿ ವಿಜಯ್ ಅನುಪಸ್ಥಿತಿಯನ್ನು ತಂತ್ರಜ್ಞಾನದ ಮೂಲಕ ತುಂಬಿಸಿಕೊಂಡಿದ್ದಾರೆ.
ಒಂದು ದಿನಕ್ಕೆ ಎಷ್ಟು ಖರ್ಚು?
ಹೊಲೊಗ್ರಾಫಿಕ್ ಎಐ ತಂತ್ರಜ್ಞಾನ ಜನರ ಗಮನ ಸೆಳೆಯುತ್ತಿದ್ದು, ವಿನೋದ್ ರವಿ ಕಾರ್ಯಕ್ರಮಗಳತ್ತ ಮತದಾರರು ಮುಖ ಮಾಡುತ್ತಿದ್ದಾರೆ. ಈ ಕುರಿತು ವಿನೋದ್ ರವಿ ಮಾತನಾಡಿದ್ದು, ಈ ತಂತ್ರಜ್ಞಾನದ ಬಳಕೆಗೆ ದಿನಕ್ಕೆ 50,000 ರೂ. ವೆಚ್ಚವಾಗುತ್ತದೆ. ಚುನಾವಣಾ ಆಯೋಗ ಹೊಲೊಗ್ರಾಫಿಕ್ ಎಐ ತಂತ್ರಜ್ಞಾನವನ್ನು ನಾಲ್ಕು ದಿನಗಳವರೆಗೆ ಬಳಸಲು ನನಗೆ ಅನುಮತಿ ನೀಡಿದೆ. ಈ ಹೊಸ ಮಾರ್ಗ ನನ್ನಲ್ಲಿ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿದೆ ಎಂದು ಹೇಳುತ್ತಾರೆ.
ಹೇಗೆ ಕೆಲಸ ಮಾಡುತ್ತೆ?
ಪ್ರಚಾರ ವಾಹನದ ಮೇಲೆ ಅಳವಡಿಸಲಾದ ಈ ವ್ಯವಸ್ಥೆ persistence of vision ಆಧಾರದ ಮೇಲೆ ಕೆಲಸ ಮಾಡುತ್ತದೆ. ಹೊಲೊಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನ ಬಳಸಲಾಗಿದ್ದು, ಪ್ರೊಜೆಕ್ಷನ್ ಫ್ಯಾನ್ ಡಿಸ್ಪ್ಲೇ, ಹೈ-ಸ್ಪೀಡ್ ಮೋಟಾರ್ ಮತ್ತು ವಾಹನದ ಜನರೇಟರ್ ಸಹಾಯದಿಂದ ಸಿಂಕ್ರೊನೈಸ್ಡ್ ಆಡಿಯೊ ಸಿಸ್ಟಮ್ ಸಂಯೋಜಿಸುತ್ತದೆ.
ಇದನ್ನೂ ಓದಿ: ನಾನು ಬಿಜೆಪಿ ಸೇರುತ್ತೇನೆಂದು ಹೇಳುವವರೇ ಜೆಡಿಎಸ್ ಸೇರಲಿದ್ದಾರೆ: ಶಾಸಕ ಲಕ್ಷ್ಮಣ ಸವದಿ
ಹೊಲೊಗ್ರಾಫಿಕ್ ಎಐ ಚಿತ್ರ
ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರ ಮೂರು ಆಂಗಲ್‌ನಲ್ಲಿ ಕಾಣಿಸುತ್ತದೆ. ವಾಹನದ ಸನ್‌ರೂಪ್ ಮೂಲಕ ಹೊರಬಂದು ಭಾಷಣ ಮಾಡಿದಂತೆ ಕಾಣಿಸುತ್ತದೆ. ಈ ವೇಳೆ ವಿಜಯ್ ಧ್ವನಿಯೂ ಪ್ಲೇ ಆಗುತ್ತದೆ. ಸುತ್ತಲಿನ ಜನರಿಗೆ ವಿಜಯ್ ಅವರೇ ನೇರವಾಗಿ ತಮ್ಮೊಂದಿಗೆ ಮಾತನಾಡಿದ ಅನುಭವ ನೀಡುತ್ತದೆ. ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ ಏಪ್ರಿಲ್ 23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ನಿತೀಶ್ ಕುಮಾರ್ ನಂತ್ರ ಮುಂದಿನ CM ಯಾರು? ಬಿಹಾರ ಸಿಂಹಾಸನಕ್ಕೆ ಐವರ ನಡುವೆ ಮಹಾ ಪೈಪೋಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

