ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರ ಪುತ್ರನ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಡವರ ಮಕ್ಕಳನ್ನು ಗಲಾಟೆಗೆ ಪ್ರಚೋದಿಸಿ, ತಮ್ಮ ಮಕ್ಕಳನ್ನು ವಿದೇಶ ವ್ಯಾಸಂಗಕ್ಕೆ ಕಳುಹಿಸುವ ಬಿಜೆಪಿಯ ಇಬ್ಬಗೆ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು: ಬಿಜೆಪಿಯ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪುತ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ, ಇದು ಬಿಜೆಪಿಯವರ ವರಸೆ. ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್ಪೋರ್ಟ್ ಪಡೆಯಲು ಗಲಾಟೆ ಕೇಸ್ ಅಡ್ಡಿಯಾಗುತ್ತಿದೆ ಎಂದು ಅವಲತ್ತುಕೊಂಡಿರುವ ಇದೇ ಬಿಜೆಪಿ ನಾಯಕ ಬಡವರ ಮಕ್ಕಳಿಗೆ ಗಲಾಟೆಗೆ, ದೊಂಬಿಗೆ ಪ್ರಚೋದನೆ ಕೊಡುವುದರಲ್ಲಿ ಎತ್ತಿದ ಕೈ ಎಂದು ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದ ತುಣಕು ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಎಂದಾದರೂ ತಮ್ಮ ಮಕ್ಕಳಿಗೆ ತೋರಿದ ಕಾಳಜಿಯನ್ನು ಹಿಂದುತ್ವದ ಹೆಸರಲ್ಲಿ ಗಲಾಟೆ ನಡೆಸಿ ಮೈತುಂಬ ಕೇಸ್ ಹಾಕಿಕೊಂಡಿರುವ ಬಡವರ ಮನೆಯ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಡವರ ಮನೆಯ ಯುವಕರು ಭವಿಷ್ಯ ರೂಪಿಸಿಕೊಳ್ಳುವುದು ಬೇಡವೇ?
ಇತರರ ಮನೆಯ ಮಕ್ಕಳನ್ನು ಪ್ರಚೋದಿಸಿ ಧರ್ಮ ರಕ್ಷಣೆ ಹೆಸರಲ್ಲಿ ಗಲಾಟೆಗೆ ಕಳಿಸುವುದು ಬಿಜೆಪಿಗರಿಗೆ ಅತ್ಯಂತ ಪ್ರೀತಿಯ ಕೆಲಸವಾಗಿದೆ, ಬಡವರ ಮನೆಯ ಯುವಕರು ಭವಿಷ್ಯ ರೂಪಿಸಿಕೊಳ್ಳುವುದು ಬೇಡವೇ? ಹತ್ತಾರು ಕೇಸ್ ಹಾಕಿಸಿಕೊಂಡು ಕೋರ್ಟಿಗೆ ಅಲೆಯುವ ಅವರು ಉದ್ಯೋಗ ಪಡೆಯಲು ಆ ಅಡ್ಡಿಯಾಗುತ್ತವೆ ಎಂದು ಬಿಜೆಪಿಗರಿಗೆ ತಿಳಿದಿಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಬಡ ಯುವಕರ ಉನ್ನತ ವ್ಯಾಸಂಗಕ್ಕೆ ಕೇಸ್ ಗಳು ತೊಂದರೆಯಾಗುತ್ತವೆ ಎಂದೆನಿಸಿಲ್ಲವೇ? ಬಡವರೂ ಪಾಸ್ಪೋರ್ಟ್ ಪಡೆದು ವಿದೇಶ ವ್ಯಾಸಂಗ, ವಿದೇಶ ಉದ್ಯೋಗ, ವಿದೇಶ ವ್ಯವಹಾರಗಳನ್ನು ಮಾಡಬಾರದೇ? ಅಂದಹಾಗೆ ನನ್ನ ಕೊನೆಯ ಪ್ರಶ್ನೆ, ಬಿಜೆಪಿ ನಾಯಕರ ಮಕ್ಕಳಿಗೆ ವಿದೇಶ ವ್ಯಸಂಗವೇಕೆ? ಇಲ್ಲೇ ಧರ್ಮ ರಕ್ಷಿಸುವ, ಗೋರಕ್ಷಿಸುವ ಕೆಲಸಗಳು ಸಾಕಷ್ಟಿವೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ಏನಿದು ಅನಂತಕುಮಾರ್ ಹೆಗಡೆ ಪುತ್ರನ ಪ್ರಕರಣ?
ರಸ್ತೆ ಗಲಾಟೆ ಪ್ರಕರಣದಲ್ಲಿ ಪಾತ್ರವಿಲ್ಲದಿದ್ದರೂ ಆರೋಪಿಯಾಗಿರುವ ಪುತ್ರ ಅಶುತೋಷ್ ಹೆಗಡೆ ಪಾಸ್‌ಪೋರ್ಟ್ ಜಪ್ತಿಯಿಂದ ಆತನ ವ್ಯಾಸಾಂಗಕ್ಕೆ ಅಡ್ಡಿಯಾಗಿದ್ದು, ಆತನನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.
ತುಮಕೂರಿನ ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅನಂತಕುಮಾರ್ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಏಕಸದಸ್ಯ ಪೀಠ ನಡೆಸಿತ್ತು.
ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್, ತನ್ನ ಅಜ್ಜಿಯನ್ನು ಕಾಣಲು ತಂದೆ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯ ರಾಜ್ಯದ ಕಾರು ಅವರ ಕಾರು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್ ಮತ್ತು ಅವರ ಪುತ್ರ ಅಶುತೋಷ್ ಪಾತ್ರ ಇಲ್ಲ ಎಂದು ಅನಂತಕುಮಾರ್ ಹೆಗಡೆ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ಭಾರತದ ನರ್ಸಿಂಗ್‌ಗೆ ಪ್ರಪಂಚದಾದ್ಯಂತ ಬೇಡಿಕೆ: ಸಚಿವ ದಿನೇಶ್ ಗುಂಡೂರಾವ್
ಕಾರಿನ ಹಿಂಬದಿ ಸೀಟಲ್ಲಿ ಅಶುತೋಷ್ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದಿಲ್ಲ. ಅವರ ಕಾರಿನ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ, ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿ ಅಶುತೋಷ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆರೋಪ ಪಟ್ಟಿಯಲ್ಲೂ ತಂದೆ-ಮಕ್ಕಳ ಪಾತ್ರದ ಬಗ್ಗೆ ಉಲ್ಲೇಖವಿಲ್ಲ. ಅಶುತೋಷ್ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಲಿ ಪ್ರಕರಣ ಅವರ ಪಾಸ್‌ಪೋರ್ಟ್ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ವಿಚಾರಣೆಯನ್ನು ಏ.16ಕ್ಕೆ ಮುಂದೂಡಿದೆ.
ಕೆಲ ತಿಂಗಳ ಹಿಂದೆ ದಾಬಸ್‌ಪೇಟೆ ಬಳಿ ರಸ್ತೆಯಲ್ಲಿ ಕಾರು ಓವರ್‌ಟೇಕ್ ಮಾಡುವ ವಿಚಾರವಾಗಿ ಅನಂತಕುಮಾರ್ ಹೆಗಡೆ ಮತ್ತು ಅವರ ಗನ್‌ಮ್ಯಾನ್‌ಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸೈಫ್ ಖಾನ್ ಎಂಬುವರು ದಾಬಸ್‌ಪೇಟೆ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ


