ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು
ಯುವಕನೊಬ್ಬ ಮಧ್ಯವರ್ತಿಗಳಿಗೆ ಹಣ ನೀಡಿ ದೇವಸ್ಥಾನದಲ್ಲಿ ಮದುವೆಯಾಗುತ್ತಾನೆ. ಆದರೆ, ಮದುವೆಯಾದ ಐದನೇ ದಿನಕ್ಕೆ ನವವಧು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಮೂಲಕ ತಾನು ದೊಡ್ಡ ವಂಚನೆಗೆ ಒಳಗಾಗಿರುವುದಾಗಿ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.

ಜೀವನ ಸಂಗಾತಿ ಹುಡುಕಾಟ, ಮಧ್ಯವರ್ತಿಗಳ ಎಂಟ್ರಿ
ಝಾನ್ಸಿ ಜಿಲ್ಲೆಯ ಪರಸಾಯಿ ಗ್ರಾಮದ ನಿವಾಸಿ ಉತ್ತಮ್ ಅಹಿರ್ವಾರ್, ಬಹಳ ಸಮಯದಿಂದ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದರು. ಮನೆಯವರಿಗೂ ಮಗನ ಸಂಸಾರ ಶುರುವಾಗಲಿ ಎಂಬ ಆಸೆ ಇತ್ತು. ಇದೇ ಸಮಯದಲ್ಲಿ, ಮಧ್ಯಪ್ರದೇಶದ ಶಿವಪುರಿಯಿಂದ ಬಂದ ಇಬ್ಬರು ಯುವಕರ ಪರಿಚಯ ಇವರಿಗಾಗಿದೆ.
ಈ ಯುವಕರು ತಾವೇ ಮದುವೆ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಉತ್ತಮ್‌ಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕಾಗಿ 60 ಸಾವಿರ ರೂಪಾಯಿ ಪಡೆದುಕೊಂಡಿದ್ದರು.
ದೇವಸ್ಥಾನದಲ್ಲಿ ಮದುವೆ, ಕನಸು ನನಸಾಯ್ತು ಅಂದ್ಕೊಂಡ್ರು!
ಮಧ್ಯವರ್ತಿಗಳ ಮಾತನ್ನು ನಂಬಿದ ಉತ್ತಮ್, ಯುವಕರು ಕೇಳಿದಷ್ಟು ಹಣ ಕೊಟ್ಟಿದ್ದಾರೆ. ನಂತರ, ಝಾನ್ಸಿಯ ಪ್ರಸಿದ್ಧ ಕರೌಂದಿ ಮಾತಾ ದೇವಸ್ಥಾನದಲ್ಲಿ ಮದುವೆ ನೆರವೇರಿದೆ. ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಹಾರ ಬದಲಾಯಿಸಿಕೊಂಡು ಮದುವೆ ನಡೆದಿದೆ. ಕೊನೆಗೂ ಮಗನ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಯ್ತು ಅಂತ ಉತ್ತಮ ಕುಟುಂಬ ಖುಷಿಯಾಗಿತ್ತು.
ಮದುವೆಯ ನಂತರ ವಧು ಗಂಡನ ಮನೆಗೆ ಬಂದಳು. ಮೊದಲ ನಾಲ್ಕು ದಿನ ಎಲ್ಲವೂ ಸಾಮಾನ್ಯವಾಗಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಮುಂದೆ ಇಂಥದ್ದೊಂದು ಆಘಾತ ಕಾದಿದೆ ಎಂದು ಯಾರಿಗೂ ಸಣ್ಣ ಅನುಮಾನವೂ ಬಂದಿರಲಿಲ್ಲ.
ಐದನೇ ದಿನ ಬೆಳಗ್ಗೆ ವಧು ನಾಪತ್ತೆ!
ಮದುವೆಯಾದ ಐದನೇ ದಿನ ಬೆಳಗ್ಗೆ ಮನೆಯವರೆಲ್ಲ ಎದ್ದು ನೋಡಿದಾಗ, ವಧು ಮನೆಯಲ್ಲಿ ಇರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದಾಗ, ಆಕೆ ಮನೆಯಿಂದ ಸದ್ದಿಲ್ಲದೆ ಪರಾರಿಯಾಗಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಒಡವೆಗಳನ್ನೂ ಆಕೆ ತನ್ನೊಂದಿಗೆ ಕೊಂಡೊಯ್ದಿದ್ದಾಳೆ ಎಂದು ಉತ್ತಮ ಆರೋಪಿಸಿದ್ದಾರೆ. ತನಗೆ ಮಧ್ಯವಯಸ್ಕ ಮಹಿಳೆಯೊಂದಿಗೆ ಮದುವೆ ಮಾಡಿಸಿ ಮೋಸ ಮಾಡಿದ್ದಾರೆ ಎಂದು ಉತ್ತಮ್ ಹೇಳಿದ್ದಾರೆ.
1.20 ಲಕ್ಷ ಖರ್ಚು, ಒಡವೆಯೂ ಹೋಯ್ತು!
ಸಂತ್ರಸ್ತ ಉತ್ತಮ್ ಅಹಿರ್ವಾರ್ ಪ್ರಕಾರ, ಈ ಇಡೀ ಮದುವೆಗೆ ಸುಮಾರು 1.20 ಲಕ್ಷ ರೂಪಾಯಿ ಖರ್ಚಾಗಿದೆ. ಇದರಲ್ಲಿ ಮಧ್ಯವರ್ತಿಗಳಿಗೆ ನೀಡಿದ ಹಣ ಮತ್ತು ಮದುವೆಯ ಇತರ ಖರ್ಚುಗಳು ಸೇರಿವೆ. ಇದರ ಜೊತೆಗೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳೂ ಮಾಯವಾಗಿವೆ. ಈ ಘಟನೆಯಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದ್ದು, ತಾವು ಮೋಸ ಹೋಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಿ: ಹಂತ ಹಂತದ ಮಾಹಿತಿ ಇಲ್ಲಿದೆ
ಪೊಲೀಸರಿಗೆ ದೂರು, ತನಿಖೆ ಆರಂಭ
ಈ ಪ್ರಕರಣ ಬೆಳಕಿಗೆ ಬಂದ ನಂತರ, ಉತ್ತಮ ಅಹಿರ್ವಾರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದಿಂದ ಬಂದು ಮದುವೆ ಮಾಡಿಸುವುದಾಗಿ ಹೇಳಿದ್ದ ಇಬ್ಬರು ಯುವಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಇಡೀ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಮತ್ತು ಈ ನಕಲಿ ಮದುವೆಯಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ರೇಣುಕಾಸ್ವಾಮಿಗೆ ಡೆವಿಲ್ ಆದ್ರೆ, ಈ ನವದಂಪತಿಗೆ ದೇವ್ರು: ಮದುವೆಯಾದವರೇ ದಾಸನ ಮನೆಮುಂದೆ ಪೂಜೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

