ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ, ತನ್ನ ಬ್ರೇಕಪ್‌ಗೆ ಸೋದರಿಯೇ ಕಾರಣವೆಂದು ಕೋಪಗೊಂಡ ಇಂಜಿನಿಯರ್ ಯುವಕನೊಬ್ಬ, ತನ್ನ ಅವಳಿ ಸೋದರಿಗೆ 40 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಅವಳಿ ಸೋದರ

ಮೊರದಾಬಾದ್‌: ತನ್ನ ಬ್ರೇಕಪ್‌ಗೆ ಕಾರಣರಾದರು ಎಂದು ಸಿಟ್ಟಿಗೆದ್ದು ಯುವಕನೋರ್ವ ತನ್ನ ಜೊತೆ ಜೊತೆಗ ಹುಟ್ಟಿದ ಅವಳಿ ಸೋದರಿಗೆ 40 ಬಾರಿ ಇರಿದು ಕೊಂದು ಬಳಿಕ ತನ್ನ ತಾಯಿಯ ಮೇಲೂ ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ. 25 ವರ್ಷದ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಹಾರ್ದಿಕ್ ಮಲ್ಹೋತ್ರಾ ಎಂಬಾತನೇ ಹೀಗೆ ದಾರುಣವಾಗಿ ಸೋದರಿಯನ್ನು ಕೊಲೆ ಮಾಡಿ ಬಳಿಕ ತಾಯಿ ಮೇಲೆ ಹಲ್ಲೆ ಮಾಡಿದ ಯುವಕ. ಆತನನ್ನು ನಂತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಬ್ರೇಕಪ್‌ಗೆ ಕಾರಣವಾದರು ಎಂದು ಸೋದರಿಯ ಕೊಲೆ ತಾಯಿ ಮೇಲೆ ಹಲ್ಲೆ

ಅವಳಿಗಳೆಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಬಂಧ ಅವರ ನಡುವೆ ಇರುತ್ತದೆ. ಯಾವಾಗಲೂ ಜೊತೆಯಾಗಿಯೇ ಇರುತ್ತದೆ. ಅಳು ನಗು ಸುಖ ದುಃಖ ಎಲ್ಲವೂ ಅವರಿಗೆ ಜೊತೆಯಾಗಿಯೇ ಆಗುತ್ತದೆ. ಕೆಲವು ಅವಳಿಗಳು ಒಂದೇ ರೀತಿಯ ಅಂಕಗಳನ್ನು ಗಳಿಸುತ್ತಾರೆ. ಆದರೆ ಇಲ್ಲಿ ಅಮ್ಮನ ಒಡಲಲ್ಲಿ ಜೊತೆಯಾಗಿ 9 ತಿಂಗಳು ಕಳೆದು ಜೊತೆ ಜೊತೆಯಾಗಿ ಓದಿ ಜೊತೆ ಜೊತೆಯಾಗಿ ಉದ್ಯೋಗಕ್ಕೆ ಸೇರಿ ಸುಮಾರು 25 ವರ್ಷಗಳನ್ನು ಜೊತೆಯಾಗಿಯೇ ಆಡುತ್ತಾ ಬೆಳೆಯುತ್ತಾ ಜಗಳವಾಡುತ್ತಾ ಕಳೆದ ನಂತರವೂ ಅವಳಿ ಸೋದರನೋರ್ವ ಪ್ರೀತಿ ವಿಚಾರಕ್ಕೆ ತನ್ನ ಅವಳಿ ಸೋದರಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ತನ್ನ ಅಜ್ಜಿಯ ವಯಸ್ಸಿನ ಅಭಿಮಾನಿಯನ್ನು ಭೇಟಿ ಮಾಡಿದ ರಕ್ಷಿತಾ ಶೆಟ್ಟಿ

ಹಾರ್ದಿಕ್ ಮಲ್ಹೋತ್ರಾ ಹಾಗೂ ಸೋದರಿ ಹಿಮಶಿಖಾ ಮಲ್ಹೋತ್ರಾ ಉತ್ತರ ಪ್ರದೇಶ ಬದೌನ್ ಮೂಲದವರಾಗಿದ್ದು, ಗುರುಗ್ರಾಮದಲ್ಲಿ ವಾಸಿಸುತ್ತಿದ್ದರು. ಮತ್ತು ಹೋಳಿ ಆಚರಿಸುವುದಕ್ಕಾಗಿ ಇಬ್ಬರು ಮೊನ್ನೆ ಮೊನ್ನೆಯಷ್ಟೇ ಮುಗಿದ ಹೋಳಿ ಹಬ್ಬಕ್ಕೂ ಮೊದಲು ತಮ್ಮ ಕುಟುಂಬದ ಮನೆಗೆ ಭೇಟಿ ನೀಡಿದ್ದರು.. ಹಿಮಶಿಖಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಎಂಬಿಎ ಓದುತ್ತಿದ್ದರು. ಆದರೆ ಹಾರ್ದಿಕ್ ಪ್ರೇಮ ಸಂಬಂಧದ ವಿಚಾರವಾಗಿ ಮನೆಯಲ್ಲಿ ಚರ್ಚೆ ನಡೆದು ಹಿಮಶಿಖಾ ಅವರಿಗೆ ಸಲಹೆ ನೀಡಲು ಮುಂದಾದಾಗ ಕೋಪಗೊಂಡ ಹಾರ್ದಿಕ್ ಮಲ್ಹೋತ್ರಾ ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಬಂದು ಆಕೆಗೆ ಮನಸೋ ಇಚ್ಛೆ ಇರಿದು ಕೊಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ನೀಲಿಮಾ ಮಲ್ಹೋತ್ರಾ ಮೇಲೂ ಹಲ್ಲೆ ಮಾಡಿದ್ದಾನೆ. ಏಳು ತಿಂಗಳ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಿತರಾದ ಹುಡುಗಿಯೊಂದಿಗೆ ತಮಗೆ ಪ್ರೀತಿಯಾಗಿದ್ದು, ತಮ್ಮ ಪ್ರೇಮ ಸಂಬಂಧ ಮುರಿದು ಬಿದ್ದ ನಂತರ

ತೀವ್ರ ಒತ್ತಡದಲ್ಲಿದ್ದು, ಇದೇ ವೇಳೆ ಹಿಮಶಿಖಾ ಜೊತೆ ವಾಗ್ವಾದ ನಡೆದಾಗ ಘಟನೆ ಸಂಭವಿಸಿದೆ ಎಂದು ವಿಚಾರಣೆಯ ಸಮಯದಲ್ಲಿ, ಹಾರ್ದಿಕ್ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ. ಇತ್ತೀಚೆಗೆ ಆದ ಬ್ರೇಕಪ್‌ಗೆ ತನ್ನ ತಾಯಿ ಹಾಗೂ ಸೋದರಿಯೇ ಕಾರಣ ಎಂದು ಆತ ಭಾವಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಿರುಚಾಟ ಕೇಳಿದ ನಂತರ ನೆರೆಹೊರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ವರದಿಯಾಗಿದೆ. ಆರೋಪಿ ಆಗಲೇ ರಕ್ತಸಿಕ್ತ ಚಾಕುವನ್ನು ಬಿಟ್ಟು ಪರಾರಿಯಾಗಿದ್ದ. 24 ಗಂಟೆಗಳ ಒಳಗೆ ಆತನನ್ನು ಬಂಧಿಸಿದ ಪೊಲೀಸರು ಚಾಕುವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೀದರ್: ಟ್ರ್ಯಾಕ್ಟರ್ ಪಲ್ಟಿಯಾಗಿ 13 ವರ್ಷದ ಪುಟ್ಟ ಬಾಲಕ ಸಾವು

ಮತ್ತೊಂದು ವರದಿಯ ಪ್ರಕಾರ, ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದ್ದು, ಸೋದರಿ ಹಂಸಿಕಾಗೆ ಹಿಗ್ಗಾಮುಗ್ಗಾ ಇರಿದ ಆರೋಪಿ ಬಳಿಕ ತಾಯಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಆಕೆಯನ್ನು ಕರೆಸಿದ್ದಾನೆ. ಆಕೆ ಬಂದು ನೋಡಿದಾಗ ಮಗಳು ರಕ್ತದ ಮಡುವಲ್ಲಿ ಬಿದ್ದಿರುವುದು ಕಂಡು ಬಂದಿದೆ. ಮಗಳ ಸ್ಥಿತಿ ನೋಡಿ ಆಕೆ ಕಿರುಚಿಕೊಂಡಾಗ ಆತ ತಾಯಿ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಮತ್ತೊಂದು ಸೋಶಿಯಲ್ ಮೀಡಿಯಾ ವರದಿಯ ಪ್ರಕಾರ, ಗೂಗಲ್ ಉದ್ಯೋಗಿಯಾಗಿದ್ದ ಹಾರ್ದಿಕ್, ಪುಣೆಯ ಮುಸ್ಲಿಂ ಹುಡುಗಿಯೊಬ್ಬಳನ್ನು ಪ್ರೀತಿಸಿ ತನ್ನ ಕೆಲಸವನ್ನು ತೊರೆದು ಯೂಟ್ಯೂಬರ್ ಆಗಿದ್ದು, ಆಕೆಯನ್ನೇ ಮದುವೆಯಾಗಲು ಬಯಸಿದ್ದ. ಆದರೆ ಇದಕ್ಕೆ ಆತನ ತಾಯಿ ಮತ್ತು ಅವಳಿ ಸೋದರಿ ವಿರೋಧಿಸಿದ್ದರು. ಇದೇ ಗಲಾಟೆಯಿಂದಾಗಿ ಹಾರ್ದಿಕ್‌ಗೆ ಬ್ರೇಕಪ್ ಆಗಿತ್ತು. ನಂತರ ಹೋಳಿ ಸಮಯದಲ್ಲಿ ಅವನ ಅವಳಿ ಸಹೋದರಿ ಅವನೊಂದಿಗೆ ಮನೆಗೆ ಬಂದಾಗ ಇದೇ ವಿಚಾರವಾಗಿ ಗಲಾಟೆ ನಡೆದು ಸೋದರಿಯನ್ನು ಕೊಂದ ಆತ ತಾಯಿಯ ಕೊಲೆಗೂ ಯತ್ನಿಸಿದ್ದಾನೆ ಎಂಬ ಮಾಹಿತಿ ಇದೆ.

ಪ್ರಸ್ತುತ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಹಾರ್ದಿಕ್ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಗಾಗಿ ಬಿಎನ್ಎಸ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಮೊರಾದಾಬಾದ್ ಎಸ್ಪಿ ಕುಮಾರ್ ರಣವಿಜಯ್ ಸಿಂಗ್ ಹೇಳಿದ್ದಾರೆ.