ಚಿಕ್ಕಮಗಳೂರಿನಲ್ಲಿ, 10 ವರ್ಷಗಳಿಂದ ಪ್ರೀತಿಸಿ ಮೋಸ ಮಾಡಿದ ಯುವಕನ ಮದುವೆಯನ್ನು ಯುವತಿಯೊಬ್ಬಳು ಮಂಟಪಕ್ಕೆ ನುಗ್ಗಿ ರಂಪಾಟ ಮಾಡಿ ನಿಲ್ಲಿಸಿದ್ದಾಳೆ. ಆಕೆಯ ಹೈಡ್ರಾಮಾದಿಂದಾಗಿ ಮದುವೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಕುಟುಂಬಸ್ಥರು ಮಂಟಪವನ್ನು ಖಾಲಿ ಮಾಡಿದ್ದಾರೆ.

ಚಿಕ್ಕಮಗಳೂರು (ಡಿ.14): ಯುವಕ ಬೇರೊಬ್ಬ ಯುವತಿಯೊಂದಿಗೆ ಮದುವೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವಕನಿಗೆ ಈ ಹಿಂದೆ ಪರಿಚಯವಿದ್ದ ಯುವತಿಯು ನೇರವಾಗಿ ಮದುವೆ ಮಂಟಪಕ್ಕೆ ಆಗಮಿಸಿ, 'ನಾನು ಇವನನ್ನೇ ಮದುವೆಯಾಗಬೇಕು, ನನ್ನ ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ವಿಷ ಕುಡಿದು ಸಾಯುತ್ತೇನೆ' ಎಂದು ರಂಪಾಟ ಮಾಡಿದ್ದಾಳೆ.

ನಗರದ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ರಾತ್ರಿ ಭಾರೀ ಗದ್ದಲ ಗಲಾಟೆ ನಡೆದಿದ್ದು, 10 ವರ್ಷಗಳ ಕಾಲ ಪ್ರೀತಿಸಿ ಮೋಸ ಮಾಡಿದ ಯುವಕನ ಮದುವೆ ನಿಲ್ಲಿಸಲು ಯುವತಿಯೊಬ್ಬಳು ಮಂಟಪದೊಳಗೆ ನುಗ್ಗಿ ರಂಪಾಟ ನಡೆಸಿದ್ದಾಳೆ. ಈ ಘಟನೆಯಿಂದಾಗಿ ಮದುವೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಕುಟುಂಬಸ್ಥರು ಮಂಟಪವನ್ನು ಖಾಲಿ ಮಾಡಿದ್ದಾರೆ.

ಘಟನೆಯ ವಿವರ: 

ಹಾಸನ ಜಿಲ್ಲೆ ಬೇಲೂರು ಮೂಲದ ಅಶ್ವಿನಿ ಎಂಬ ಯುವತಿ, ಕಲ್ಯಾಣ ನಗರ ನಿವಾಸಿ ಶರತ್ ಎಂಬಾತನನ್ನು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಶರತ್ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ವಿಷಯವನ್ನು ಮುಚ್ಚಿಟ್ಟು ಅಶ್ವಿನಿಯನ್ನು ಪ್ರೀತಿಸಿದ್ದ. ಅಲ್ಲದೆ, ಅಶ್ವಿನಿಯಿಂದ 4.5 ಲಕ್ಷ ರೂಪಾಯಿ ಹಣವನ್ನು ಸಹ ಪಡೆದಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಶರತ್, ಅಶ್ವಿನಿಯ ತಾಯಿ ಬಳಿ ಹೋಗಿ 'ನಿಮ್ಮ ಮಗಳನ್ನು ನಾನೇ ಮದುವೆಯಾಗುತ್ತೇನೆ' ಎಂದು ಭರವಸೆ ನೀಡಿದ್ದನಂತೆ. ಈ ನಂಬಿಕೆಯ ಮೇಲೆಯೇ ಅಶ್ವಿನಿಯ ಕುಟುಂಬ ಆಕೆಗೆ ಬಂದ ಐದು ಉತ್ತಮ ಸಂಬಂಧಗಳನ್ನು ಬಿಟ್ಟಿದ್ದಾರೆ. ಆದರೆ, ಶರತ್ ಮದುವೆಯಾಗಲು ನಿರಾಕರಿಸಿ, ಇಂದು ಬೇರೆ ಹುಡುಗಿಯೊಂದಿಗೆ ವಿವಾಹವಾಗಲು ಮುಂದಾಗಿದ್ದಾನೆ.

ಮಂಟಪದಲ್ಲಿ ಯುವತಿಯ ಹೈಡ್ರಾಮಾ:

ಯುವಕ ಶರತ್‌ನ ವಿವಾಹ ಮುಹೂರ್ತವು ಬೆಳಗ್ಗೆಯೇ ನಡೆದಿತ್ತಾದರೂ, ಅರತಕ್ಷತೆ ಸಮಾರಂಭಕ್ಕೂ ಮುನ್ನ ಅಶ್ವಿನಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದಾಳೆ. 'ಆತ ನನ್ನನ್ನು ಮದುವೆಯಾಗಬೇಕು ಅಷ್ಟೆ. ನನ್ನ ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ವಿಷ ಕುಡಿದು ಸಾಯುತ್ತೇನೆ ಎಂದು ಅಶ್ವಿನಿ ಆಕ್ರೋಶದಿಂದ ಕೂಗಾಡಿದ್ದಾಳೆ. ಯುವಕ ಶರತ್‌ನ ಮೋಸದ ವಿರುದ್ಧ ಅಶ್ವಿನಿ ಈ ಹಿಂದೆಯೇ ಮೂರು ಪ್ರಕರಣಗಳನ್ನು ದಾಖಲಿಸಿದ್ದಳಾದರೂ, ಶರತ್ ಎಲ್ಲ ಕೇಸ್‌ಗಳಿಗೂ ನ್ಯಾಯಾಲಯದಿಂದ ತಡೆಯಾಜ್ಞೆ (Stay Order) ತಂದು ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ.

ಹಲ್ಲೆ ಆರೋಪ ಮತ್ತು ಮಂಟಪ ಖಾಲಿ:

ಅಶ್ವಿನಿ ಮಂಟಪದೊಳಗೆ ಪ್ರವೇಶಿಸುತ್ತಿದ್ದಂತೆ, ಹುಡುಗನ ಕಡೆಯವರು ಬಾಗಿಲು ಹಾಕಿಕೊಂಡರು. 'ಹುಡುಗನ ಕಡೆಯವರು ನನ್ನ ಮೇಲೆ ಹಲ್ಲೆ ಮಾಡಿ, ಎಳೆದಾಡಿದ್ದಾರೆ' ಎಂದು ಅಶ್ವಿನಿ ಆರೋಪಿಸಿದ್ದಾಳೆ. ಅಲ್ಲದೆ, ಸ್ಥಳದಲ್ಲಿದ್ದವರು ವಿಡಿಯೋ ಮಾಡದಂತೆ ಶರತ್ ಕುಟುಂಬದವರು ಕ್ಯಾಮರಾಗಳಿಗೆ ಅಡ್ಡ ಬಂದಿದ್ದಾರೆ. ಗಲಾಟೆ ತೀವ್ರವಾದ ಕಾರಣ, ಮದುವೆ ಮನೆಯವರು ದಿಢೀರನೆ ಕಲ್ಯಾಣ ಮಂಟಪವನ್ನು ಖಾಲಿ ಮಾಡಿ ಸ್ಥಳದಿಂದ ನಿರ್ಗಮಿಸಿದ್ದಾರೆ. ಬೇಲೂರು ರಸ್ತೆಯಲ್ಲಿರುವ ಈ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಈ ಘಟನೆ ಚಿಕ್ಕಮಗಳೂರು ನಗರದಲ್ಲಿ ಸಂಚಲನ ಮೂಡಿಸಿದೆ. ನ್ಯಾಯಕ್ಕಾಗಿ ಅಶ್ವಿನಿಯ ಹೋರಾಟ ಮುಂದುವರಿದಿದೆ.