- Home
- News
- India News
- Diamond Discovery: ಭಾರತಕ್ಕೆ ಸಿಕ್ತು ಹೊಸ ವಜ್ರದ ಗಣಿ; ಸರ್ವೇ ಕಾರ್ಯಕ್ಕೆ ಭೂಮಿ ಅಗೆಯುವಾಗ ಸಿಕ್ತು 5 ವಜ್ರಗಳು!
Diamond Discovery: ಭಾರತಕ್ಕೆ ಸಿಕ್ತು ಹೊಸ ವಜ್ರದ ಗಣಿ; ಸರ್ವೇ ಕಾರ್ಯಕ್ಕೆ ಭೂಮಿ ಅಗೆಯುವಾಗ ಸಿಕ್ತು 5 ವಜ್ರಗಳು!
ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯಲ್ಲಿ NMDC-CMDC ನಡೆಸಿದ ಸರ್ವೇಯಲ್ಲಿ 1.22 ಕ್ಯಾರೆಟ್ ತೂಕದ ಐದು ವಜ್ರದ ಹರಳುಗಳು ಪತ್ತೆಯಾಗಿವೆ. ಈ ಪೈಕಿ ಎರಡು ಉತ್ತಮ ಗುಣಮಟ್ಟದ್ದಾಗಿದ್ದು, ಈ ಸಂಶೋಧನೆಯು ರಾಜ್ಯದಲ್ಲಿ ವಜ್ರದ ನಿಕ್ಷೇಪವಿರುವುದನ್ನು ಖಚಿತಪಡಿಸಿದೆ.

ಭಾರತ ದೇಶಕ್ಕೆ ಮತ್ತೊಂದು ಅದೃಷ್ಟ ಬಂದಿದೆ. ಛತ್ತೀಸ್‌ಗಢ ರಾಜ್ಯದ ಪಾಲಿಗೆ ಇದೊಂದು ಲಕ್ಕಿ ಲಾಟರಿ ಎಂದೇ ಹೇಳಬಹುದು. ಮಹಾಸಮುಂದ್ ಜಿಲ್ಲೆಯಲ್ಲಿ ನಡೆಸಲಾದ ಖನಿಜ ಸಂಪತ್ತು ಹುಡುಕಾಟದ ಸರ್ವೇಯ ವೇಳೆ ಬರೋಬ್ಬರಿ ಐದು ವಜ್ರದ ಹರಳುಗಳು ಪತ್ತೆಯಾಗಿವೆ. NMDC-CMDC ಲಿಮಿಟೆಡ್‌ನ ಅಧಿಕಾರಿಗಳು ಈ ಸಂಶೋಧನೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಎಲ್ಲಿ ಪತ್ತೆಯಾಯಿತು?:
ಮಹಾಸಮುಂದ್ ಜಿಲ್ಲೆಯ ಸರಾಯ್‌ಪಾಲಿ ಪ್ರದೇಶದಲ್ಲಿರುವ 'ಬಲೋಡಾ-ಬೆಲ್ಮುಂಡಿ' ಎಂಬ ಡೈಮಂಡ್ ಬ್ಲಾಕ್‌ನಲ್ಲಿ ಈ ವಜ್ರಗಳು ಸಿಕ್ಕಿವೆ. ಈ ಪ್ರದೇಶದಲ್ಲಿ ವಜ್ರದ ನಿಕ್ಷೇಪಗಳಿರಬಹುದು ಎಂದು ಶಂಕಿಸಿ ಅಧಿಕಾರಿಗಳು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು. ಈಗ 1.22 ಕ್ಯಾರೆಟ್ ತೂಕದ ಒಟ್ಟು 5 ವಜ್ರದ ಹರಳುಗಳು ಸಂಗ್ರಹಿಸಿದ ಸ್ಯಾಂಪಲ್‌ಗಳಲ್ಲಿ ಪತ್ತೆಯಾಗಿವೆ. ಈ ಐದರಲ್ಲಿ ಎರಡು ಅತ್ಯಂತ ಉತ್ತಮ ಗುಣಮಟ್ಟದ (Gem-quality) ವಜ್ರಗಳಾಗಿದ್ದು, ಉಳಿದ ಮೂರು ಬೇರೆ ದರ್ಜೆಯದ್ದಾಗಿವೆ.
ವೈಜ್ಞಾನಿಕ ಪರೀಕ್ಷೆ:
ಈ ವಜ್ರಗಳನ್ನು ಪತ್ತೆಹಚ್ಚಲು ಸುಮಾರು 200 ಟನ್‌ಗಳಷ್ಟು ಖನಿಜಯುಕ್ತ ಮಣ್ಣು ಮತ್ತು ಕಲ್ಲುಗಳನ್ನು ಸಂಗ್ರಹಿಸಿ ಆಳವಾದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಿಯೋಫಿಸಿಕಲ್ ಸರ್ವೆ ಮತ್ತು ಡ್ರಿಲ್ಲಿಂಗ್ ಮೂಲಕ ವಜ್ರಗಳಿರುವ ಸಾಧ್ಯತೆಯ ಪ್ರದೇಶಗಳನ್ನು ಅಧಿಕಾರಿಗಳು ಮೊದಲೇ ಗುರುತಿಸಿದ್ದರು. ಇದೀಗ ಸಿಕ್ಕಿರುವ ಐದು ಹರಳುಗಳು ಆ ಪ್ರದೇಶದಲ್ಲಿ ವಜ್ರದ ನಿಕ್ಷೇಪ ಇರುವುದನ್ನು ಸಾಬೀತುಪಡಿಸಿವೆ. ಆದರೆ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಗಣಿಗಾರಿಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಇನ್ನಷ್ಟೇ ಸಂಶೋಧನೆಗಳು ನಡೆಯಬೇಕಿದೆ.
ಸಿಎಂ ವಿಷ್ಣು ದೇವ್ ಸಾಯ್ ಸಂತಸ:
ಈ ಮಹತ್ವದ ಪತ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್, 'ಇದು ರಾಜ್ಯದ ಗಣಿಗಾರಿಕೆ ಕ್ಷೇತ್ರಕ್ಕೆ ಲಭಿಸಿದ ಶುಭ ಸೂಚನೆ. ರಾಜ್ಯದ ಖನಿಜ ಸಂಪತ್ತನ್ನು ಹುಡುಕುವ ಇಂತಹ ವೈಜ್ಞಾನಿಕ ಪ್ರಯತ್ನಗಳಿಗೆ ನಮ್ಮ ಸರ್ಕಾರ ಸದಾ ಬೆಂಬಲ ನೀಡಲಿದೆ' ಎಂದು ತಿಳಿಸಿದ್ದಾರೆ. ಪತ್ತೆಯಾದ ವಜ್ರಗಳನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ಮಧ್ಯಪ್ರದೇಶದ ಪನ್ನಾದಲ್ಲಿರುವ NMDC ಸುರಕ್ಷಿತ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಇಲ್ಲಿ ಹೆಚ್ಚಿನ ನಿಕ್ಷೇಪ ಇರುವುದು ದೃಢಪಟ್ಟರೆ, ಛತ್ತೀಸ್‌ಗಢದ ಆರ್ಥಿಕತೆಗೆ ಇದು ದೊಡ್ಡ ಮಟ್ಟದ ಬಲ ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

