ವಿದೇಶದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಬೆಂಗಳೂರಿನ ಮನೆಗೆ ಕನ್ನ ಹಾಕಿ, 3 ಕೋಟಿ ರೂ. ಮೌಲ್ಯದ ವಜ್ರಾಭರಣ ದೋಚಿದ್ದ ರಾಜಸ್ಥಾನ ಮೂಲದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.8 ಕೆಜಿ ವಜ್ರ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು (ಮಾ.11): ವಿದೇಶದಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಮನೆಗೆ ಕನ್ನ ಹಾಕಿ ಕೋಟ್ಯಂತರ ರು. ಮೌಲ್ಯದ ವಜ್ರಾಭರಣ ದೋಚಿದ್ದ ಕಿಡಿಗೇಡಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ವೆಲರಾಮ ಮೀನಾ ಅಲಿಯಾಸ್ ಸುನೀಲ್ ಬಂಧಿತನಾಗಿದ್ದು, ಆರೋಪಿಯಿಂದ ಮೂರು ಕೋಟಿ ರು. ಮೌಲ್ಯದ 1.8 ಕೆಜಿ ವಜ್ರ ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಜ್ಯುಡಿಷಿಯಲ್ ಲೇಔಟ್‌ನಲ್ಲಿರುವ ಟೆಕ್ಕಿ ಪ್ರಕಾಶ ಅವರ ಮನೆಯ ಕಿಟಕಿ ಸರಳು ಮುರಿದು ಕೋಟ್ಯಂತರ ರು. ಮೌಲ್ಯದ ಆಭರಣವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಬೆಂಗಳೂರು ಮೂಲದ ಪ್ರಕಾಶ್ ಅವರು, ತಮ್ಮ ಕುಟುಂಬದ ಜತೆ ಆ ದೇಶದಲ್ಲೇ ನೆಲೆಸಿದ್ದಾರೆ. ಜ್ಯುಡಿಷಿಯಲ್ ಲೇಔಟ್‌ನಲ್ಲಿ ಅವರು ಮನೆ ನಿರ್ಮಿಸಿದ್ದು, ವರ್ಷದಲ್ಲಿ ಆಗಾಗ್ಗೆ ಬಂದು ಹೋಗುತ್ತಾರೆ. ಈ ಮನೆ ಉಸ್ತುವಾರಿಯನ್ನು ತಮ್ಮ ಸೋದರ ಸಂಬಂಧಿ ಆರ್‌.ಟಿ. ನಗರದಲ್ಲಿರುವ ಸೇತುಮಾಧವ ಅವರಿಗೆ ಪ್ರಕಾಶ್ ವಹಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಆರೋಪಿ ಕಳ್ಳತನ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ಕಳ್ಳತನ?

ಕೂಲಿ ಹರಿಸಿಕೊಂಡು ನಗರಕ್ಕೆ ಬಂದಿದ್ದ ಸುನೀಲ್‌, ನಗರದಲ್ಲಿ ನಿರ್ಮಾಣ ಹಂತದ ಕಟ್ಚಡಗಳಲ್ಲಿ ಟೈಲ್ಸ್ ಕೆಲಸಗಾರನಾಗಿ ದುಡಿಯುತ್ತಿದ್ದ. ಈತನಿಗೆ ಸುಲಭವಾಗಿ ಹಣ ಸಂಪಾದಿಸುವ ಗೀಳು. ಕೆಲ ದಿನಗಳ ಹಿಂದೆ ಜ್ಯುಡಿಯಲ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಆತ ಕೆಲಸ ಮಾಡುತ್ತಿದ್ದ. ಆಗ ಆ ಕಟ್ಟಡದ ಪಕ್ಕದಲ್ಲಿದ್ದ ಟೆಕ್ಕಿ ಪ್ರಕಾಶ್ ಅವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಸುನೀಲ್ ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಅಂತೆಯೇ ಫೆ.15 ರಂದು ರಾತ್ರಿ ಪ್ರಕಾಶ್ ಮನೆಗೆ ಸ್ಲೈಡ್ ಕಿಟಕಿ ಮುರಿದು ಒಳ ಪ್ರವೇಶಿಸಿದ ಆತ, ಲಾಕರ್ ತೆರೆದು 3 ಕೋಟಿ ರು. ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದೋಚಿ ಪರಾರಿಯಾಗಿದ್ದ. ಮರು ದಿನ ಮನೆಯಲ್ಲಿ ಕಳ್ಳತನ ಬಗ್ಗೆ ಪ್ರಕಾಶ್ ಅವರಿಗೆ ಗೊತ್ತಾಗಿದೆ. ಕೂಡಲೇ ತಮ್ಮ ಸಂಬಂಧಿ ಮೂಲಕ ಪೊಲೀಸರಿಗೆ ಅವರು ದೂರು ಕೊಟ್ಟಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿ ಚಲನವಲನ ಸೆರೆಯಾಗಿತ್ತು.

ಸೆರೆಯಾಗಿದ್ದು ಹೇಗೆ?

ಈ ಕೃತ್ಯ ಎಸಗಿದ ಬಳಿಕ ತನ್ನೂರಿಗೆ ಆರೋಪಿ ಪರಾರಿಯಾಗಿದ್ದ. ತಾನು ನಿರೀಕ್ಷೆ ಮಾಡಿದ್ದಕಿಂತ ಹೆಚ್ಚಿನ ಆಭರಣ ಆತನಿಗೆ ಸಿಕ್ಕಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಆ ಮನೆಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಆಜುಬಾಜಿನಲ್ಲಿ ವಿಚಾರಿಸಿದರು. ಆಗ ಆತನನ್ನು ನಿರ್ಮಾಣ ಹಂತದ ಕಟ್ಟಡದ ಕಾರ್ಮಿಕರು ಗುರುತಿಸಿದ್ದಾರೆ. ಈ ಸುಳಿವು ಪಡೆದ ಕೂಡಲೇ ಕಾರ್ಯಾಚರಣೆಗಿಳಿದಾಗ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.